ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಬದಲು, ಹೋರಾಟ ಗಾರರ ಆಕ್ರೋಶವನ್ನು ತಾತ್ಕಾಲಿಕವಾಗಿ ತಣಿಸಲು ಈ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪ ಸಂತ್ರಸ್ತರ ಹೋರಾಟ ಸಮಿತಿಯಿಂದ ಕೇಳಿ ಬಂದಿದೆ.
ಆಲೂರು, ಸಕಲೇಶಪುರ ಮತ್ತು ಬೇಲೂರು ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ದಶಕದಿಂದ ಇದೆ. ರೈತರು, ಕೂಲಿ ಕಾರ್ಮಿಕರ ಪ್ರಾಣದ ಜೊತೆಗೆ ಕಾಫಿ, ಮೆಣಸು, ಬಾಳೆ, ಭತ್ತ ಬೆಳೆ ಹಾನಿಯೂ ಆಗಿದೆ. ಇದರಿಂದ ಹಲವು ರೈತರ ಬದುಕು ಬೀದಿಗೆ ಬಂದಿದೆ. ಲಕ್ಷಾಂತರ ರೂ. ಖರ್ಚು ಮಾಡಿ, ತಲೆಮಾರುಗಳಿಂದ ಪೋಷಿಸಿಕೊಂಡು ಬಂದಿದ್ದ ಕಾಫಿ ಗಿಡ, ಮೆಣಸಿನ ಬಳ್ಳಿಯನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಾಡಾನೆಗಳು ಮುರಿದು ಹಾಕಿ, ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ.
ಸೂಕ್ತ ಪರಿಹಾರ ಇಲ್ಲ: ಪ್ರತಿ ದಿನವೂ ಈ ಮೂರು ತಾಲೂಕಿನ ಯಾವುದಾದ್ರೂ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡು, ಬೆಳೆ ನಾಶ ಮಾಡಿರುವ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಈಗಾಗಲೇ ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶವಾಗಿದ್ದರೂ ಸರ್ಕಾರ ಸೂಕ್ತ ಪರಿಹಾರವನ್ನು ನೀಡಲು ವಿಳಂಬ ಮಾಡುತ್ತಿದೆ. ಇದು ಬೆಳೆಗಾರರು ಮತ್ತಷ್ಟು ಕೆರಳುವಂತೆ ಮಾಡಿದೆ.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಸಾಕಷ್ಟು ಬಾರಿ ಮಲೆನಾಡು ಭಾಗದ ಬೆಳೆಗಾರರು ಪ್ರತಿಭಟನೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲೆಗೆ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಗಮಿಸಿದ ಬಸವರಾಜ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಬೆಳೆಗಾರರ ಅಭಿಪ್ರಾಯವನ್ನು ತಿಳಿಯಲು ಪಟ್ಟಣದಲ್ಲಿ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಹಾಜರಿದ್ದ ಬಹುತೇಕ ಬೆಳೆಗಾರರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕ ಬೇಕು, ಈ ಕುರಿತು ಅರಣ್ಯ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬೆಳೆಗಾರರ ಸಭೆ ಕರೆಯಬೇಕೆಂದು ಆಗ್ರಹಿಸಿದ್ದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಅರಣ್ಯ ಅಧಿಕಾರಿಗಳು ಕಾಡಾನೆಗಳ ಉಪಟಳವನ್ನು ತಾತ್ಕಾಲಿಕವಾಗಿ ತಡೆಯಲು ಮೂರು ಆನೆಗೆ ರೆಡಿಯೋ ಕಾಲರ್ ಅಳವಡಿಕೆ, ಒಂದು ಆನೆ ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದ್ದರು. ಅದರಂತೆ ಈಗ ಕಾರ್ಯಾಚರಣೆ ನಡೆಸ ಲಾಗುತ್ತಿದೆ. ಆದರೆ, ಇದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಬೆಳೆಗಾರರ ದೂರಾಗಿದೆ.
ತಾಲೂಕಿಗೆ 22ರಂದು ಅರಣ್ಯ ಸಚಿವರು ಬರಲಿದ್ದು, ಬೆಳೆಗಾರರೊಂದಿಗೆ ಕಾಡಾನೆ ಸಮಸ್ಯೆ ಕುರಿತು ಸಭೆ ನಡೆಸುತ್ತಾರೆ ಎಂದು ಅರಣ್ಯ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು. ಅಷ್ಟರಲ್ಲಿ ಅರಣ್ಯ ಖಾತೆ ಹೊಂದಿದ್ದ ಆನಂದ್‌ಸಿಂಗ್ ಬದಲಾಗಿದ್ದಾರೆ. ಅರವಿಂದ್ ಲಿಂಬಾವಳಿ ಈಗ ಖಾತೆ ಹೊಣೆ ಹೊತ್ತಿದ್ದು, ಅವರಾದ್ರೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾರೆಯೋ ಅಥವಾ ಆನಂದ್‌ಸಿಂಗ್‌ರಂತೆ ನೀಡದೇ ಸುಮ್ಮ ನಿ ರತ್ತಾರೋ ಕಾದು ನೋಡ ಬೇ ಕು. ಒಟ್ಟಾರೆ ನೂತನ ಸಚಿವರು, ಸರ್ಕಾರ ಅಧಿಕಾರ ಬಂದಾಗಲೆಲ್ಲ ಪ್ರತಿಭ ಟನೆ ಮಾಡಿ ಗಮನ ಸೆಳೆದರೂ ಏನೂ ಪರಿಹಾರ ಆಗಿಲ್ಲ. ಕಾಡಾನೆ ಸಮಸ್ಯೆಯಿಂದ ಯಾವಾಗ ಮುಕ್ತಿ ದೊರೆಯುತ್ತದೋ ಎಂದು ಮಲೆನಾಡಿಗರು ದಿನ ಎಣಿಸುತ್ತಿದ್ದಾರೆ.
ಇದನ್ನೂ ಓದಿ:ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್
ಸಕಲೇಶಪುರ- ಆಲೂರು ಭಾಗ ದಲ್ಲಿ 70 ಆನೆ ತಿರುಗಾಡುತ್ತಿವೆ. ಇದರಲ್ಲಿ 3ಕ್ಕೆ ಮಾತ್ರ ರೆಡಿಯೋ ಕಾಲರ್ ಹಾಕಲಾಗುತ್ತಿದೆ. ಇದರಿಂದ ಕಾಡಾನೆ ಗಳು ಎಲ್ಲಿದೆ ಎಂದು ತಿಳಿಯುವುದು ಬಿಟ್ಟರೆ, ಬೇರೆ ಯಾವುದೇ ಉಪಯೋಗವಿಲ್ಲ. ಈ ಹಿಂದೆ ಹಾಕಿದ್ದ ರೆಡಿಯೋ ಕಾಲರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಶಾಶ್ವತ ಪರಿಹಾರ ಹುಡುಕುವ ಬದಲು, ಸಂತ್ರಸ್ತ ರೈತರ ಕಣ್ಣೊರೆಸಲು ಈ ತಾತ್ಕಾಲಿಕ ಕಾರ್ಯಾಚರಣೆ ನಡೆಸುತ್ತಿದೆ ಅಷ್ಟೇ.
ಶಶಿಧರ್ ಹೊಸಗದ್ದೆ, ಅಧ್ಯಕ್ಷರು, ಕಾಡಾನೆ ಸಂತ್ರಸ್ಥರ ಹೋರಾಟ ಸಮಿತಿ
ಸುಧೀರ್ ಎಸ್.ಎಲ್