Advertisement

ರಾಧಿಕಾ ತಂರಂಗ: ಚೆಲುವೆಲ್ಲ ತಂದೆಂದ “ಕಾಫೀತೋಟ’ದ ಹೂವು

01:08 PM Aug 30, 2017 | |

ಸಿನಿತಾರೆಯೆಂಬ ಸಣ್ಮ ಹಮ್ಮುಬಿಮ್ಮೂ ಇಲ್ಲದೆ, ಯಾರೊಂದಿಗಾದರೂ ಸಲೀಸಾಗಿ ಮಾತಿಗಿಳಿಯುವ ಹಸನ್ಮುಖೀ, ರಾಧಿಕಾ ಚೇತನ್‌. “ರಂಗಿತರಂಗ’ ಚಿತ್ರದಿಂದ ಕನ್ನಡಿಗರ ಹೃದಯದಲ್ಲಿ ಮದರಂಗಿ ಇಟ್ಟ ಈ ಸುಂದರಿ, ಈಗ ಕಾಫೀ ತೋಟದ ಹೂವಿನಂತೆ ಘಮ್ಮೆನ್ನುತ್ತಾ, ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇವರ ನಟನೆಯ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಇನ್ನೊಂದು ಚಿತ್ರ ಬಿಡುಗಡೆಗೆ ಕಾದಿದೆ. “ಹೀರೋಯಿನ್‌ನಂತೆ ಕಾಣುವುದಕ್ಕಿಂತ ಪಕ್ಕದ ಮನೆ ಹುಡುಗಿ ಥರಾ ಕಾಣಲು ಇಷ್ಟ’ ಎನ್ನುವ ಮೈಸೂರು ಮೂಲದ ಈ ಹುಡುಗಿ, ಭಾವಜೀವಿಯಾಗಿ ಇಷ್ಟವಾಗುತ್ತಾರೆ. ಸಿನಿಮಾ ಮಾತ್ರವಲ್ಲದೇ, ಯೋಗ, ರಂಗಭೂಮಿ, ಕಥಕ್‌ ನೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಇವರು. ಇನ್ನು ಮುಂದೆ ಅವರೇ ಮಾತಾಡ್ತಾರೆ. ಓದಿ…

Advertisement

“ಕಾಫಿ ತೋಟ’ ಚಿತ್ರದಲ್ಲಿ ಟಿ.ಎನ್‌. ಸೀತಾರಾಂ ಅವರ ಜೊತೆ ಕೆಲಸ ಮಾಡುವಾಗಿನ ಅನುಭವ ಹೇಗಿತ್ತು?
ಅದೊಂದು ಅತ್ಯುತ್ತಮ ಅನುಭವ. ಅವರೊಬ್ಬ ಬರಹಗಾರ ನಿರ್ದೇಶಕ. ಅಚ್ಚ ಕನ್ನಡದಲ್ಲಿ ಬಹಳ ಸೊಗಸಾಗಿ ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅಷ್ಟೊಂದು ಚೆಂದವಾಗಿ ಕನ್ನಡ ಪದ ಬಳಕೆ ಮಾಡಬಹುದಾ ಎಂದು ಆಶ್ಚರ್ಯವಾಗದೇ ಇರುವುದಿಲ್ಲ.

ಒಳ್ಳೇ ಮಳೆ ಬರಿ¤ದೆ ಈಗ. ಏನೆಲ್ಲಾ ಮಾಡುವ ಆಸೆ ಆಗ್ತಿದೆ?
ಜೋರು ಮಳೆ ಬರಿ¤ರುವಾಗ ಮನೆಯ ಬಾಲ್ಕನಿಯಲ್ಲಿ ಕೂತು ಟೀ ಹೀರುತ್ತಾ, ಬಜ್ಜಿ, ಬೋಂಡ ತಿನ್ನಬೇಕು ಅಂತ ತುಂಬಾ ಆಸೆ ಆಗುತ್ತೆ. ಸಾಧ್ಯವಾದಷ್ಟೂ ಒಬ್ಬಳೇ ಕೂತು ಮಳೆ ಸದ್ದನ್ನು ಆಲಿಸಬೇಕು. ವಾಹ್‌… ಮನಸ್ಸಿಗೆ ಎಷ್ಟು ಶಾಂತಿ ಸಿಗುತ್ತೆ ಗೊತ್ತಾ?. ಅಷ್ಟೇ ಅಲ್ಲ, ಜೋರಾಗಿ ಸಂಗೀತ ಹಾಕಿಕೊಂಡು ಲಾಂಗ್‌ ಡ್ರೈವ್‌ ಹೋಗಬೇಕು. ತುಂಬಾ ಥ್ರಿಲ್ಲಿಂಗ್‌ ಇರುತ್ತದೆ. 

ನಿಮಗೆ ಈವರೆಗೂ ಸಿಕ್ಕಿರೋ ಅತ್ಯುತ್ತಮ ಹೊಗಳಿಕೆ?
ಇಂಥವರಿಂದಲೇ ಎಂದು ಹೇಳಕ್ಕಾಗಲ್ಲ. ಆದರೆ, ನನ್ನ ಹಲವು ಪರಿಚಿತರು ನೀನು ಹೀರೋಯಿನ್‌ ಆದಮೇಲೂ ಸ್ವಲ್ಪವೂ ಬದಲಾಗಿಲ್ಲ ಎಂದು ಹೇಳುತ್ತಾರೆ. ಅಂಥ ಮಾತು ಕೇಳುವಾಗ ಖುಷಿಯಾಗುತ್ತದೆ. ಹೀರೋಯಿನ್‌ ಆದ ಬಳಿಕ ಹುಡುಗಿಯರು ಯಾರ ಕೈಗೂ ಸಿಗುವುದಿಲ್ಲ, ಜಂಭ ತೋರಿಸುತ್ತಾರೆ ಅಂತ ಎಲ್ಲರಿಗೂ ಒಂದು ನಂಬಿಕೆ ಇರುತ್ತದೆ. ನಾನು ಹಾಗಲ್ಲ ಎಂದು ಯಾರಾದರೂ ಗುರುತಿಸಿದರೆ ಖುಷಿ ಆಗುತ್ತದೆ. 

ಇನ್ನು 10 ವರ್ಷದ ಬಳಿಕ ನೀವು ಎಲ್ಲಿರುತ್ತೀರಿ? ಏನು ಮಾಡುತ್ತಿರುತ್ತೀರಿ?
ಸಿನಿಮಾರಂಗದಲ್ಲೇ ಇರುತ್ತೇನೆ. ಇಲ್ಲೇ ಇರಬೇಕು ಎಂದೇ ಬಂದವಳು ನಾನು. ಬಹುಶಃ ಇನ್ನಷ್ಟು ಕ್ರಿಯಾಶೀಲವಾಗಿ ನನ್ನನ್ನು ನಾನು ಸಿನಿಮಾ ಉದ್ಯಮದಲ್ಲಿ ತೊಡಗಿಸ್ಕೋತೀನಿ. ಜೊತೆಗೆ ಸದ್ಯಕ್ಕೆ ನಿಂತಿರುವ ರಂಗಭೂಮಿ ಮತ್ತು ನೃತ್ಯ ಚಟುವಟಿಕೆಗಳನ್ನು ಮತ್ತೆ ಆರಂಭಿಸಿರುತ್ತೇನೆ.

Advertisement

ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದ ನೀವು. ಕೈತುಂಬಾ ಸಂಬಳ ಸಿಗುವ ಕೆಲಸ ಬಿಟ್ಟು ಬರುವಾಗ ಅಭದ್ರತೆ ಕಾಡಲಿಲ್ಲವಾ?
ಕೆಲಸ ಬಿಡುವಾಗ ಕಲೆಯಲ್ಲಿ ಏನನ್ನೋ ಸಾಧಿಸುವ ಹುಮ್ಮಸ್ಸಿತ್ತು. ಆದ್ದರಿಂದ, ಹಿಂದೆ ಮುಂದೆ ಯೋಚಿಸದೇ ರಾಜೀನಾಮೆ ನೀಡಿದೆ. ಆದರೆ, ಕೆಲಸ ಬಿಟ್ಟ ಮೇಲೆ, ಕೂಡಿಟ್ಟಿದ್ದ ಹಣವನ್ನು ಯೋಗ ಥೆರಪಿ, ಕಥಕ್‌ ಕಲಿಯಲು ಬಳಸಿದೆ. ಯಾವಾಗ ದುಡ್ಡು ಖಾಲಿ ಆಯಿತೋ, ಆಗ ಅಭದ್ರತೆ ಕಾಡಲು ಆರಂಭಿಸಿತು. ಯಾಕಾದ್ರೂ ಕೆಲ್ಸ ಬಿಟೊ°à ಅಂತನ್ನಿಸಿತು. ನಾನು ತುಂಬಾ ಇಂಡಿಪೆಂಡೆಂಟ್‌ ಹುಡುಗಿ. ಅಪ್ಪ- ಅಮ್ಮನ ಬಳಿ ಹಣಕ್ಕೆ ಯಾವತ್ತೂ ಕೈಚಾಚಲಿಲ್ಲ. ಹಣ ಸಂಪಾದನೆಗಾಗಿ ನನ್ನದೇ ಆದ ದಾರಿಗಳನ್ನು ಕಂಡುಕೊಂಡೆ. ಯೋಗ ಟೀಚರ್‌ ಆದೆ. ನಾಟಕಗಳಲ್ಲಿ ಹೆಚ್ಚು ಹೆಚ್ಚು ನಟಿಸಿ, ಹೇಗೋ ನಿಭಾಯಿಸಿದೆ.

ಮೈಸೂರು ಎಂದರೆ ತಕ್ಷಣ ನೆನಪಾಗುವುದು ಏನು?
ಚಾಮುಂಡಿ ಬೆಟ್ಟ. ನಮ್ಮನೆ ಕಿಟಕಿಯಿಂದ ಇಣುಕಿದರೇನೇ ಕಾಣುತ್ತಿತ್ತು. ಅದೇ ಕಣ್ಮುಂದೆ ಬರುತ್ತೆ. 

ಯಾವೆಲ್ಲಾ ವಿಷಯದಲ್ಲಿ ನಿಮಗೆ ಕ್ರೇಜ್‌ ಜಾಸ್ತಿ?
“ಟೀ’ ಕುಡಿಯೋದರಲ್ಲಿ ಕ್ರೇಜ್‌ ಇದೆ. ಡ್ಯಾನ್ಸಿಂಗ್‌, ಆ್ಯಕ್ಟಿಂಗ್‌ ಕೂಡ ನನಗೆ ಕ್ರೇಜಿ ವಿಷಯಗಳೇ. ಡ್ಯಾನ್ಸ್‌ ಮಾಡಿ ಟೆನÒನ್‌ ಫ್ರೀ ಆಗ್ತಿàನಿ.

ಬೆಂಗಳೂರಿನಲ್ಲಿ ನಿಮ್ಮ “ಟೀ’ ಅಡ್ಡಾ?
“ಇನ್ಫಿನಿಟಿ’ ಅಂತ ಟೀ ಶಾಪ್‌ ಇದೆ. ಅಲ್ಲಿ ಜಿಂಜರ್‌ ಟೀ ಅದ್ಭುತವಾಗಿರುತ್ತೆ.

ಊಟ, ತಿಂಡಿ ವಿಷಯದಲ್ಲೂ ಇಷ್ಟೇ ಕ್ರೇಜ್‌ ಇದೆಯಾ?
ನನಗೆ ಈ ಪ್ರಶ್ನೆ ಕೇಳಿದರೆ ಕಲೆ ಕೆಡುತ್ತೆ. ನನಗೆ ಆಹಾರದ ವಿಷಯದಲ್ಲಿ ಆಸಕ್ತಿ ಬಹಳ ಕಡಿಮೆ. ಹಾಗಾಗಿ, ಏನು ಉತ್ತರ ಕೊಡಬೇಕೆಂದೇ ತಿಳಿಯಲ್ಲ. ಆದರೂ ಹೇಳ್ತೀನಿ ಕೇಳಿ… ನಾನು ಬಹಳ ಕಡಿಮೆ ಊಟ ಸೇವಿಸುತ್ತೇನೆ. ಹೆಚ್ಚು ಮಸಾಲೆಯುಕ್ತ ಆಹಾರ ಇಷ್ಟ ಆಗಲ್ಲ. ಸ್ವೀಟ್ಸ್‌ ಅಷ್ಟಕ್ಕಷ್ಟೇ, ಉಪ್ಪು, ಹುಳಿ, ಖಾರವೂ ಕಡಿಮೆ ಇರಬೇಕು. ಮತ್ತೆ ನಾನು ಪಕ್ಕಾ ಸಸ್ಯಾಹಾರಿ.

ಯಾವ ಖಾದ್ಯ ನಿಮಗೆ ಇಷ್ಟ ಆಗೋಲ್ಲ?
ನಾನು ತಿನ್ನುವ ಪದಾರ್ಥಗಳು ಕಡಿಮೆಯಾದರೂ ಯಾವ ಪದಾರ್ಥವನ್ನೂ ಕಡೆಗಣಿಸುವುದಿಲ್ಲ. ನಮಗೆ ಇಷ್ಟವಾಗದೇ ಇರುವ ಖಾದ್ಯವನ್ನು ಮತ್ತೂಬ್ಬರು ಇಷ್ಟಪಟ್ಟು ತಿನ್ನಬಹುದು. ಅದು ಮತ್ತೂಬ್ಬರ ಹಸಿವು ನೀಗಿಸುತ್ತೆ. ಅದಕ್ಕೇ ಆಹಾರ ಯಾವುದಿದ್ದರೂ ಅದಕ್ಕೆ ಮೊದಲು ಮರ್ಯಾದೆ ಕೊಡಬೇಕು. 

ಚಿಕ್ಕಂದಿನಲ್ಲಿ ಯಾವುದಾದರೂ ಸಿನಿಮಾ ನೋಡಿ ಪಾತ್ರವೇ ನೀವಾದಂತೆ ಮೈಮರೆತದ್ದು ಇದೆಯೇ?
ಮಾಧುರಿ ದೀಕ್ಷಿತ್‌ ಚಿತ್ರಗಳನ್ನು ನೋಡಿದ ಬಳಿಕ ನನ್ನೊಳಗೇ ಮಾಧುರಿ ಆವಾಹನೆಯಾದಂತೆ ಫೀಲ್‌ ಮಾಡಿದ್ದೀನಿ. ಆಕೆಯ ನೃತ್ಯ ಭಂಗಿಗಳನ್ನು, ಹಾವಭಾವವನ್ನು ಅನುಕರಿಸುವುದನ್ನು ಸಮಯ ಸಿಕ್ಕಾಗಲೆಲ್ಲಾ ಮಾಡುತ್ತಿದ್ದೆ. ಅದರಲ್ಲೂ “ದೇವದಾಸ್‌’ ನೋಡಿದ ಮೇಲಂತೂ ಹುಚ್ಚೇ ಹಿಡಿದಿತ್ತು. ಎಂಥ ಅದ್ಭುತ ನೃತ್ಯಗಾತಿ ಆಕೆ! ಶ್ರಮರಹಿತ  ನಟನೆ, ನೃತ್ಯ ಅವರದ್ದು. ನೋಡಲು ಈಗಲೂ ಅಷ್ಟೊಂದು ಚಂದ ಇದ್ದಾರೆ. ಎಷ್ಟು ಮೋಹಕವಾಗಿ ನಗ್ತಾರೆ… 

ನಿಮ್ಮಷ್ಟಕ್ಕೆ ನೀವೇ ಗುನುಗಿಕೊಳ್ಳುವ ಹಾಡು..?
ನಗುವ ನಯನ ಮಧುರ ಮೌನ… (ಪಲ್ಲವಿ ಅನುಪಲ್ಲವಿ)

 ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ಮಾಡಲೇಬೇಕು ಎಂದುಕೊಂಡಿದ್ದ ನಟ, ನಟಿ ಯಾರು? ಈಗ ಆಸೆ ಈಡೇರಿದೆಯೇ?
ಅನಂತನಾಗ್‌ ಮತ್ತು ಲಕ್ಷ್ಮೀ. ಅನಂತನಾಗ್‌ ಸರ್‌ ಜೊತೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದನ್ನು ಈಗಲೂ ನಂಬಲಾಗುತ್ತಿಲ್ಲ. ಅದೊಂದು ಕನಸಿನಂತೆ ಭಾಸವಾಗುತ್ತದೆ. ತೀರಾ ಇತ್ತೀಚೆಗೆ ಡ್ರಾಮಾ ಜ್ಯೂನಿಯರ್ಸ್‌ ಸೆಟ್‌ನಲ್ಲಿ ಲಕ್ಷ್ಮಿ ಮೇಡಂನ ಮಾತನಾಡಿಸಿದೆ. 

ನಿಮಗೆ ಹೇಗಿರೋಕೆ ಇಷ್ಟ?
ಅತಿಯಾದ ಮೇಕಪ್‌, ಆರಾಮದಾಯಕವಲ್ಲದ ಬಟ್ಟೆಗಳಿಂದ ನಾನು ಯಾವಾಗಲೂ ದೂರ. ನನ್ನನ್ನು ಮೇಕಪ್‌ನಲ್ಲಿ ನೋಡಿದವರು ನನ್ನನ್ನು ಮೇಕಪ್‌ ಇಲ್ಲದೇ ಇರುವಾಗ ನೋಡಿದಾಗ “ಅಯ್ಯೋ ಇವಳು ಇಷ್ಟೇನಾ’ ಅಂತ ಮೂಗು ಮುರಿಯಬಾರದು. “ಪಕ್ಕದ ಮನೆ ಹುಡುಗಿ’ ಎಂದು ಕರೆಸಿಕೊಳ್ಳುವುದೇ ನನಗಿಷ್ಟ. 

ಈ ಸಾಲಿನ ಉತ್ತಮ ನಟ, ನಟಿ ಪ್ರಶಸ್ತಿಯನ್ನು ನೀವು ನೀಡುವುದಾದರೆ ಯಾರಿಗೆ ಕೊಡ್ತೀರ? ಮತ್ತು ಯಾವ ಚಿತ್ರಗಳಿಗೆ ಕೊಡ್ತೀರ?
“ಉರ್ವಿ’ ಚಿತ್ರಕ್ಕಾಗಿ ಶೃತಿ ಹರಿಹರನ್‌ಗೆ ಉತ್ತಮ ನಟಿ ಪ್ರಶಸ್ತಿ ಮತ್ತು “ಕಿರಿಕ್‌ ಪಾರ್ಟಿ’ ಚಿತ್ರಕ್ಕಾಗಿ ರಕ್ಷಿತ್‌ ಶೆಟ್ಟಿಗೆ ಉತ್ತಮ ನಟ ಪ್ರಶಸ್ತಿ.

ನಿಮ್ಮ ಈ ಸಹ ನಟ/ ನಟಿಯರಲ್ಲಿ ನಿಮಗಿಷ್ಟವಾಗುವ ಗುಣ ಹೇಳಿ?
ನಿರೂಪ್‌ ಬಂಡಾರಿ- ಯಾವುದೇ ಸಂದರ್ಭದಲ್ಲಿ ಶಾಂತಚಿತ್ತದಿಂದ ಇರುವ ವ್ಯಕ್ತಿ. 
ಶ್ರದ್ಧಾ ಶ್ರೀನಾಥ್‌- ನಟನೆ, ಸ್ಕ್ರಿಪ್ಟ್ ಅಥವಾ ಬೇರಾವುದೇ ವಿಷಯದಲ್ಲಿ ಅವರಿಗೆ ಸಂದೇಹಗಳು ಮೂಡಿದರೆ ಯಾವುದೇ ಮುಜುಗರ ಇಲ್ಲದೇ ಕೇಳಿ ತಿಳಿದುಕೊಳ್ಳುತ್ತಾರೆ. ಆ ವಿಷಯದಲ್ಲಿ ಸ್ವಲ್ಪವೂ ಜಂಭ ಮಾಡೋದಿಲ್ಲ.
ರಘು ಮುಖರ್ಜಿ- ಅವರ ವೃತ್ತಿಪರತೆ ಅದ್ಭುತ. ಮತ್ತು ಅವರಿದ್ದೆಡೆ ಒಂದು ಪಾಸಿಟಿವ್‌ ಎನರ್ಜಿಯನ್ನು ಪಸರಿಸುತ್ತಾರೆ.

“ಮಿಸ್‌ ಯೂ’ ಅನ್ನೋದು ಸುಲಭ, ಅನುಭವಿಸೋದು ಕಷ್ಟ!
ಅಗಲಿಕೆ ಎಂಬುದು “ಮಿಸ್‌ ಯೂ’ ಎಂದು ಹೇಳಿ ಮುಗಿಸುವುದಷ್ಟು ಸುಲಭದ ವಿಷಯವಲ್ಲ. ನನಗೆ ಇದರ ಅರಿವಾಗಿದ್ದು ನಾನು ತುಂಬಾ ಹಚ್ಚಿಕೊಂಡಿದ್ದ ನನ್ನ ಅಜ್ಜ ತೀರಿಕೊಂಡ ಬಳಿಕವೇ. ಅಜ್ಜನಿಗೆ ತೀವ್ರ ಅನಾರೋಗ್ಯವಾಯಿತು. ಅವರನ್ನು ಅಸ್ಪತ್ರೆಗೆ ಸೇರಿಸಿದೆವು. ಆದರೆ, ಅವರು ಚೇತರಿಸಿಕೊಂಡು ಅಲ್ಲಿಂದ ಮನೆಗೆ ಬರಲೇ ಇಲ್ಲ. ಬಾರದ ಲೋಕಕ್ಕೆ ಹೋದವರು ಏನೆಲ್ಲಾ ನೆನಪುಗಳನ್ನು ಉಳಿಸಿರುತ್ತಾರೆ ಗೊತ್ತಾ? ಅವರ ಯಾವ ವಸ್ತುಗಳನ್ನು ನೋಡಿದರೂ, ಅವರೇ ಈಗ ಬಂದು ಬಳಸುತ್ತಾರೆ ಅಂತನ್ನಿಸುತ್ತೆ. ಓಹ್‌… ಅವರಿನ್ನು ಬರುವುದಿಲ್ಲ ಎಂದು ಮನಸ್ಸು ಎಚ್ಚರಿಸಿದಾಗ ತುಂಬಾ ಸಂಕಟವಾಗುತ್ತದೆ. ಅವರ ಟೊಪ್ಪಿ, ವಾಚು, ಕನ್ನಡಕ ಎಲ್ಲವೂ ನನ್ನ ಬಳಿ ಜೋಪಾನವಾಗಿದೆ. ಅವನ್ನೆಲ್ಲಾ ನೇವರಿಸಿದಾಗ ಎಂಥಧ್ದೋ ಒಂದು ಅನುಭೂತಿ ಆಗುತ್ತದೆ. ಅದು ಅಗಲಿಕೆಯ ತೀವ್ರತೆಯನ್ನು ಹೇಳುತ್ತದೆ. 

ರಮೇಶ್‌ ಸರ್‌ ಮಾತೇ ಮಾರ್ಗದರ್ಶಿ ಆಯ್ತು!
ನಾನು ಆಗಷ್ಟೇ “ರಂಗಿತರಂಗ’ ಚಿತ್ರ ಮುಗಿಸಿದ್ದೆ. ಒಮ್ಮೆ ಟಿವಿಯಲ್ಲಿ ರಮೇಶ್‌ ಅರವಿಂದ್‌ ಸಂದರ್ಶನ ನೋಡುತ್ತಿದ್ದೆ. ಆಗ ನಿರೂಪಕಿ, “ಚಿತ್ರರಂಗಕ್ಕೆ ಬರುವ ನಟಿಯರಿಗೆ ಏನು ಸಂದೇಶ ಕೊಡ್ತೀರಾ?’ ಎಂದು ರಮೇಶ್‌ ಸರ್‌ನ ಕೇಳಿದರು. ಅದಕ್ಕೆ ಅವರು ಕೊಟ್ಟ ಉತ್ತರ, “ಬಿ ಯುವರ್‌ ಸೆಲ್ಫ್’. “ನೀವು ಹೇಗಿದ್ದೀರೋ ಹಾಗೇ ಇರಿ. ನಿಮ್ಮ ರೂಪ, ನಿಮ್ಮ ವ್ಯಕ್ತಿತ್ವ, ನಿಮ್ಮ ಪ್ರತಿಭೆಯನ್ನು ಮಾತ್ರ ನಂಬಿ ಮುನ್ನುಗ್ಗಿ. ಮತ್ತೂಬ್ಬರ ಅನುಕರಣೆ ಬೇಡ’ ಎಂದಿದ್ದರು. ಯಾರು ಆ ಮಾತುಗಳನ್ನು ಕೇಳಿಸಿಕೊಂಡರೋ ಬಿಟ್ಟರೋ ಗೊತ್ತಿಲ್ಲ. ನಾನು ಮಾತ್ರ ಅದನ್ನು ನನ್ನ ವೃತ್ತಿ ಜೀವನದಲ್ಲಿ ಗಂಭೀರವಾಗಿ ಪರಿಗಣಿಸಿದ್ದೇನೆ. ಆ ಮಾತುಗಳೇ ನನಗೆ ಇಂದಿಗೂ ಮಾರ್ಗದರ್ಶಿ ಎಂದರೂ ತಪ್ಪಿಲ್ಲ. 

ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next