Advertisement

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

07:28 PM Oct 15, 2021 | Team Udayavani |

ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಬಹುನಿರೀಕ್ಷಿತ 55ನೇ ಸಿನಿಮಾ ಕ್ರಾಂತಿಗೆ ಇಂದು ಮುಹೂರ್ತ ನೆರವೇರಿತು. ನಟಿ, ಸಂಸದೆ ಸುಮಲತಾ ಅಂಬರೀಷ್‌ ಕ್ಲ್ಯಾಪ್‌ ಮಾಡುವ ಮುಖಾಂತರ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನಟರಾದ ರವಿಚಂದ್ರನ್‌, ಅಭಿಷೇಕ್‌ ಅಂಬರೀಷ್‌ ಉಪಸ್ಥಿತರಿದ್ದರು.

Advertisement

‘ಕ್ರಾಂತಿ’ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಸ್ಯಾಂಡಲ್ವುಡ್‍ನ ಬುಲ್ ಬುಲ್ ರಚಿತಾ ರಾಮ್ ಅವರು ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಕ್ರಾಂತಿ’ ಚಿತ್ರದ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್‌ ನಟಿಸಲಿದ್ದಾರೆ.

ಕ್ರಾಂತಿ ಚಿತ್ರವು ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ತೆರೆಕಾಣಲಿದೆ. 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ‘ಯಜಮಾನ’ ಚಿತ್ರತಂಡವು ‘ಕ್ರಾಂತಿ’ ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗುತ್ತಿದೆ. ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ಮೀಡಿಯಾ ಹೌಸ್‌ ಸ್ಟುಡಿಯೋ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಚಿತ್ರಕಥೆ, ನಿರ್ದೇಶನ ಹಾಗೂ ದರ್ಶನ್‌ ಅವರ ಭರ್ಜರಿ ಡೈಲಾಗ್‌ಗಳು ಹಾಗೂ ಸಾಹಸ ದೃಶ್ಯಗಳಿಂದ ‘ಯಜಮಾನ’ ಚಿತ್ರ ಯಶಸ್ಸು ಕಂಡಿತ್ತು. ನಿರ್ದೇಶನದ ಜೊತೆಗೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಹಿಟ್‌ ಆಗಿದ್ದವು. ಇತ್ತೀಚೆಗೆ ನಡೆದ ಸೈಮಾದಲ್ಲಿ 8 ಪ್ರಶಸ್ತಿಗಳನ್ನು ‘ಯಜಮಾನ’ ಚಿತ್ರವು ಪಡೆದಿತ್ತು. ದರ್ಶನ್‌ ಈ ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದಿದ್ದರು. 2019ರಲ್ಲಿ ದರ್ಶನ್ ಅಭಿನಯದ ‘ಯಜಮಾನ’, ‘ಕುರುಕ್ಷೇತ್ರ’ ಮತ್ತು ‘ಒಡೆಯ’ ಸಿನಿಮಾಗಳು ತೆರೆಕಂಡಿದ್ದವು. 2021ರ ಮಾರ್ಚ್‌ನಲ್ಲಿ ತೆರೆಕಂಡ ‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಸಿನಿಮಾ. ಪ್ರಸ್ತುತ ದರ್ಶನ್, ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿರುವ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.