Advertisement

ಉಪ್ಪಿ ಐ ಲವ್‌ ಯೂಗೆ ರಚಿತಾ ನಾಯಕಿ

11:51 AM Jun 03, 2018 | Team Udayavani |

ಉಪೇಂದ್ರ ನಾಯಕರಾಗಿರುವ, ಆರ್‌.ಚಂದ್ರು ನಿರ್ದೇಶನದ “ಐ ಲವ್‌ ಯೂ’ ಚಿತ್ರ ಕಳೆದ ತಿಂಗಳು ಸೆಟ್ಟೇರಿರುವ ವಿಚಾರ ನಿಮಗೆ ಗೊತ್ತೇ ಇದೆ. ಆಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಅದು ರಚಿತಾ ರಾಮ್‌. ಹೌದು, “ಐ ಲವ್‌ ಯೂ’ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೆ ನೋಡಿದರೆ ಈ ಹಿಂದೆಯೇ ರಚಿತಾ, ಉಪೇಂದ್ರ ನಾಯಕರಾಗಿದ್ದ “ಉಪ್ಪಿ ರುಪಿ’ ಸಿನಿಮಾ ಒಪ್ಪಿಕೊಂಡು, ಕೆಲವು ದಿನ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು.

Advertisement

ಆದರೆ, ಆ ಚಿತ್ರ ಮುಂದುವರಿಯಲಿಲ್ಲ. ಈಗ “ಐ ಲವ್‌ ಯೂ’ ಮೂಲಕ ಉಪೇಂದ್ರ ಅವರ ಜೊತೆ ಮತ್ತೆ ನಟಿಸುತ್ತಿದ್ದಾರೆ. ಇನ್ನೊಂದು ವಿಚಾರವೆಂದರೆ ರಚಿತಾ, ಆರ್‌.ಚಂದ್ರು ನಿರ್ದೇಶನದ ಸಿನಿಮಾದಲ್ಲೂ ಈ ಹಿಂದೆಯೇ ನಟಿಸಬೇಕಿತ್ತು. “ಕನಕ’ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಚಂದ್ರು ಹೇಳಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ರಚಿತಾ “ಕನಕ’ನಿಗೆ ಜೊತೆಯಾಗಿರಲಿಲ್ಲ.

“ಐ ಲವ್‌ ಯೂ’ ಚಿತ್ರದಲ್ಲಿ ನಾಯಕನಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ನಾಯಕಿಗೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ. ಸಿನಿಮಾದ ಟರ್ನಿಂಗ್‌ ಪಾಯಿಂಟ್‌ನಲ್ಲಿ ನಾಯಕಿಯ ಪಾತ್ರ ಕೂಡಾ ಪ್ರಮುಖವಾಗಿದೆಯಂತೆ. ನಿರ್ದೇಶಕ ಚಂದ್ರು ಈ ಚಿತ್ರದ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲಿದ್ದಾರಂತೆ.

ಇದು “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದೆಯಂತೆ. ಉಪೇಂದ್ರ ಈ ಹಿಂದೆ ತಮ್ಮ “ಎ’ ಸಿನಿಮಾದಲ್ಲಿ, “ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದ್ನೇಕಾಯಿ’ ಎಂದಿದ್ದರು. ಆದರೆ, ಈಗ 15 ವರ್ಷಗಳ ನಂತರ ಉಪೇಂದ್ರ ಅವರು, ಅದೇ ಪ್ರೀತಿ ಬಗ್ಗೆ ಹೊಸ ಅಂಶವನ್ನು ಹೇಳಲಿದ್ದಾರಂತೆ. 

ಜೂನ್‌ 10 ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಒಂದೇ ಹಂತದಲ್ಲಿ ನಡೆಯಲಿದೆ. ಬೆಂಗಳೂರು, ಮಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದ್ದು, ಹಾಡುಗಳಿಗೆ ಚಿತ್ರತಂಡ ವಿದೇಶಕ್ಕೆ ತೆರಳಲಿದೆ. ಚಿತ್ರದಲ್ಲಿ ಪ್ರದೀಪ್‌ ರಾವತ್‌, ಶಯ್ನಾಜಿ ಶಿಂಧೆ, ರವಿಕಾಳೆ, ರವಿಶಂಕರ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್‌ ಕುಮಾರ್‌ ಛಾಯಾಗ್ರಹಣ, ಕಿರಣ ತೊಟಮ್‌ ಬೈಲು ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next