ಹೈದರಾಬಾದ್: ಬೆಂಗಳೂರಿನ ಪಬ್‌ವೊಂದರಲ್ಲಿ ಕುಳಿತು 2019 ಜುಲೈ 14 ರ ರಾತ್ರಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್ ನ ಹೃದಯವಿದ್ರಾವಕ ಸೋಲನ್ನು ವೀಕ್ಷಿಸಿದ್ದ ರಚಿನ್ ರವೀಂದ್ರ ಅವರು ಆ ಕ್ಷಣವನ್ನು ಅತ್ಯಂತ ದೀರ್ಘ ನೋವಿನ ಮತ್ತು ಸಹಿಸಿಕೊಳ್ಳಲು ಕಷ್ಟಕರ ಕ್ಷಣವೆಂದು ಭಾವಿಸಿದ್ದರು.
ಆಗ 19 ವರ್ಷದ ತರುಣ ರವೀಂದ್ರ ತಮ್ಮ ತಂದೆಯ ಕ್ರಿಕೆಟ್ ಕ್ಲಬ್‌ನೊಂದಿಗೆ ಭಾರತಕ್ಕೆ ವಾರ್ಷಿಕ ಪ್ರವಾಸಕ್ಕೆ ಬಂದಿದ್ದದ್ದರು. ಫೈನಲ್ ಪಂದ್ಯವನ್ನು ವೀಕ್ಷಿಸಿದ ಅನುಭವವು ಇನ್ನೂ ಅವರ ನೆನಪಿನಲ್ಲಿ ಮಾಸದೆ ಉಳಿದಿದೆ.
ಒಂದು ದಿನ ನ್ಯೂಜಿಲ್ಯಾಂಡ್ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದ ಭಾರತೀಯ ಮೂಲದ ಉದಯೋನ್ಮುಖ ಕ್ರಿಕೆಟಿಗ ರಚಿನ್ ರವೀಂದ್ರ ಅವರ ಕನಸು ಈ ವಿಶ್ವಕಪ್ ನಲ್ಲಿ ನನಸಾಗಿದೆ. ನ್ಯೂಜಿಲ್ಯಾಂಡ್ ತಂಡದಲ್ಲಿ ಗಮನ ಸೆಳೆಯುತ್ತಿರುವ ಕ್ರಿಕೆಟಿಗರಲ್ಲಿ ಒಬ್ಬನಾಗಿ ಬ್ಯಾಟ್ಸ್ ಮ್ಯಾನ್ ಮತ್ತು ಎಡಗೈ ಸ್ಪಿನ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಪಾಕಿಸ್ಥಾನ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಇಳಿದು 97 ರನ್ ಗಳಿಸಿ ಈಗಾಗಲೇ ಹೊಸ ನಿರೀಕ್ಷೆ ಮೂಡಿಸಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ಭಾರತೀಯ ಮೂಲದ ದಂಪತಿಯ ಪುತ್ರನಾಗಿ ಜನಿಸಿದ ರಚಿನ್ ಅವರು ಕ್ರಿಕೆಟ್ ಹುಚ್ಚು ಹೊಂದಿದ್ದರು. ಬೆಂಗಳೂರು ಮೂಲದ ತಮ್ಮ ಕುಟುಂಬದ ಬೇರುಗಳೊಂದಿಗೆ, ಭಾರತದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಇದೀಗ ಇಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
23 ವರ್ಷದ ಆಟಗಾರ ಕಾನ್ಪುರ ಟೆಸ್ಟ್ ಪಂದ್ಯವನ್ನು ಉಲ್ಲೇಖಿಸಿ”ನನ್ನ ಮೊದಲ ಟೆಸ್ಟ್ ಪಂದ್ಯವನ್ನು ಹಿಂತಿರುಗಿ ನೋಡಿದಾಗ, ಇದು ವಿಶೇಷ ಮತ್ತು ಭಾವನಾತ್ಮಕ ಸಮಯವಾಗಿತ್ತು. ಭಾರತದಲ್ಲಿ ಆಡಲು ಸಾಧ್ಯವಾದುದು, ಅಭಿಮಾನಿಗಳು, ಅದನ್ನು ಅನುಭವಿಸಲು ಸಾಧ್ಯವಾದುದು ಬಹಳ ವಿಶೇಷವಾಗಿತ್ತು. ನನ್ನ ಪೋಷಕರು ಬೆಂಗಳೂರು ಮೂಲದವರು. ಈಗ ಇಲ್ಲಿ ವಿಶ್ವಕಪ್ ಆಡುವುದು ಅದ್ಭುತ ಕ್ಷಣವಾಗಿದೆ” ಎಂದು ಪಿಟಿಐ ಗೆ ಹೇಳಿಕೆ ನೀಡಿದ್ದಾರೆ.
“ನಾನು 2019ರ ವಿಶ್ವಕಪ್ ಫೈನಲ್ ಪಂದ್ಯ ಸಂಪೂರ್ಣ ವೀಕ್ಷಿಸಿದೆ. ಆ ಕ್ಷಣ ನಂಬಲಸಾಧ್ಯವಾಗಿತ್ತು. ನಮ್ಮ ಸುತ್ತಲೂ ಭಾರತೀಯ ಬೆಂಬಲಿಗರು ಇರುವುದು ತುಂಬಾ ಚೆನ್ನಾಗಿತ್ತು. ಇದು ನಾನು ಎಂದಿಗೂ ಮರೆಯಲಾಗದ ಅನುಭವ” ಎಂದು ಹೇಳಿದ್ದಾರೆ.
ಪಾಕಿಸ್ಥಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಇಳಿದರೂ, ರಚಿನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ‘ತಂಡದಲ್ಲಿ ತನ್ನ ಪಾತ್ರದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ’ ಎಂದು ನಿಯಮಿತವಾಗಿ ಇನ್ನಿಂಗ್ಸ್ ತೆರೆಯುವ ಬಗ್ಗೆ ಕೇಳಿದಾಗ ನಗುತ್ತಾ ಪ್ರತಿಕ್ರಿಯಿಸಿದರು.
90 ರ ದಶಕದ ಮಧ್ಯದಲ್ಲಿ ಬೆಂಗಳೂರಿನಿಂದ ನ್ಯೂಜಿಲ್ಯಾಂಡ್ ಗೆ ವಲಸೆ ಹೋಗಿದ್ದ ಸಾಫ್ಟ್‌ವೇರ್ ಇಂಜಿನಿಯರ್, ಕ್ರಿಕೆಟ್ ಆನ್ನೇ ಉಸಿರಾಡುವ ರವಿ ಕೃಷ್ಣಮೂರ್ತಿ ಅವರು ಪುತ್ರ ರಚಿನ್ ಗೆ ಬಾಲ್ಯದಿಂದಲೂ ಕೋಚ್ ಆಗಿ ಕ್ರಿಕೆಟ್ ಆಸಕ್ತಿಗೆ ನೀರೆರೆದು ಪೋಷಿಸಿದವರು.