Advertisement

ನಾನೂ ಸಿಎಂ ಆಗ್ಬೇಕು.. .; ಕಾಂಗ್ರೆಸ್ ಗೆ ತುಟ್ಟಿಯಾಗುತ್ತಿದೆಯೇ ಸಿಎಂ ಆಕಾಂಕ್ಷಿಗಳ ಪಟ್ಟಿ

11:13 AM Jul 23, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದರೂ ಅದನ್ನು ಸದುಪಯೋಗ ಪಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ತನ್ನದೇ ಪಕ್ಷದ ನಾಯಕರು ಈಗ ಕಾಂಗ್ರೆಸ್ ಗೆ ಅಡ್ಡಿಯಾಗಿ ಪರಿಣಮಿಸುತ್ತಿದ್ದಾರೆ.

Advertisement

ಚುನಾವಣೆಗೆ ಹೋರಾಟ ರೂಪಿಸುವ ಬದಲು ಪಕ್ಷ ಅಧಿಕಾರಕ್ಕೆ ಬಂದೇ ಬಿಟ್ಟಿದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಹೀಗಾಗಿ ದಿನಕ್ಕೊಬ್ಬರು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಈ ಪಟ್ಟಿಗೆ ಈಗ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ಕೂಡಾ ಸೇರ್ಪಡೆಯಾಗಿದ್ದಾರೆ.

ಸಿದ್ದರಾಮೋತ್ಸವ ಆಯೋಜನೆ ಮೂಲಕ ತಾನು ಮುಂದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬ ವೇದಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಸೃಷ್ಟಿಸಿಕೊಂಡಿದ್ದಾರೆ. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ವೇದಿಕೆಯಲ್ಲಿ ತಮ್ಮನ್ನು ಬೆಂಬಲಿಸಿ, ಎಸ್.ಎಂ.ಕೃಷ್ಣ ಬಳಿಕ ಕಾಂಗ್ರೆಸ್ ನಿಂದ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ ಎಂದು ಬಹಿರಂಗವಾಗಿ ತಮ್ಮ ಅಭೀಪ್ಸೆ ಏನೆಂದು ತಿಳಿಸಿದ್ದರು.

ಡಿಕೆ ಶಿವಕುಮಾರ್ ಹೇಳಿಕೆಗೆ ಜಮೀರ್ ಮೂಲಕ ಅದೃಶ್ಯ ವ್ಯಕ್ತಿಯೊಂದು ಟಕ್ಕರ್ ಕೊಡಿಸಿತ್ತು. ಒಕ್ಕಲಿಗರಿಗಿಂತ ಮುಸ್ಲಿಂ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಾನೂ ಆಕಾಂಕ್ಷಿ. ಒಂದು ಜಾತಿಯನ್ನು ನೆಚ್ಚಿಕೊಂಡು ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಜಮೀರ್ ಹೇಳಿದ್ದರು.

ಇದನ್ನೂ ಓದಿ:ಶಿವಸೇನಾ ಪಕ್ಷ ಯಾರ ಪಾಲಾಗಲಿದೆ? ಸಾಕ್ಷ್ಯ ಸಲ್ಲಿಸಿ-ಠಾಕ್ರೆ, ಶಿಂಧೆಗೆ ಚುನಾವಣಾ ಆಯೋಗ ಸೂಚನೆ

Advertisement

ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ ಪಕ್ಷದ ಆಂತರಿಕ ಹಾಗೂ ಬಹಿರಂಗ ವೇದಿಕೆಗಳಲ್ಲಿ ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ‌ ಕೂಡ ಸೇರಿದ್ದಾರೆ. ಸದ್ಯಕ್ಕೆ ಅರ್ಧ ಡಜನ್ ಗೂ ಮೇಲ್ಪಟ್ಟ ಆಕಾಂಕ್ಷಿಗಳು ಕಾಂಗ್ರೆಸ್ ‌ನಲ್ಲಿ ಇದ್ದಾರೆ.

ಈ ಪಟ್ಟಿಯೇ ಕಾಂಗ್ರೆಸ್ ಗೆ ಮುಳುವಾಗುವ ಅಪಾಯವಿದೆ. ಇದು ಜಾತಿವಾರು ಹಾಗೂ ಪ್ರದೇಶವಾರು ಮತ ವಿಭಜನೆಗೆ ಜಾರಣವಾಗಬಹುದು. ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ ಎಂಬ ಮಾಹಿತಿ ರವಾನೆಯಾದರೆ ಕುರುಬ ಹಾಗೂ ಮುಸ್ಲಿಂ ಮತಗಳು ವಿಭಜನೆಯಾಗಬಹುದು. ಡಿಕೆ ಶಿವಕುಮಾರ್ ಗೆ ಅವಕಾಶ‌ ನಿರಾಕರಿಸಲ್ಪಟ್ಟರೆ ಒಕ್ಕಲಿಗರು ಕೈ ಕೊಡಬಹುದು. ದಲಿತ ಸಿಎಂ ಕನಸು ನನಸಾಗಿಲ್ಲ ಎಂದು ದಲಿತರು ಕಾಂಗ್ರೆಸ್ ಬಗ್ಗೆ ಇನ್ನೂ ಮುನಿಸಿಕೊಂಡಿದ್ದಾರೆ. ಹೀಗಾಗಿ ಸಿಎಂ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ಗೆ ತುಟ್ಟಿಯಾಗುವ ಸಾಧ್ಯತೆ ಇದೆ.

ರಾಘವೇಂದ್ರ ಭಟ್

Advertisement

Udayavani is now on Telegram. Click here to join our channel and stay updated with the latest news.

Next