ರಬಕವಿ ಬನಹಟ್ಟಿ: ಬನಹಟ್ಟಿ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಉದ್ಘಾಟನೆಯಾಗದೆ ಇರುವುದರಿಂದ ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಹಳೇ ಕಟ್ಟಡ ಕೆಡವಿದ್ದು ಬಸ್ ನಿಲ್ಧಾಣಕ್ಕೆ ಬರುವ ಪ್ರಯಾಣಿಕರು ನಿಂತುಕೊಂಡೇ ಬಸ್ ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅದರಲ್ಲೂ ಹಿರಿಯ ವ್ಯಕ್ತಿಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಬಿಸಿಲು ಮತ್ತು ಮಳೆಯಿಂದಾಗಿ ಬಹಳಷ್ಟು ತೊಂದರೆಯಾಗಿದೆ. ವ್ಯವಸ್ಥಿತವಾಗಿ ಬಸ್ ಗಳು ನಿಂತುಕೊಳ್ಳಲು ಸ್ಥಳಾವಕಾಶ ಇಲ್ಲದಂತಾಗಿದೆ.
ದಿನನಿತ್ಯ ಶಾಲಾ ಕಾಲೇಜುಗಳನ್ನು ಮುಗಿಸಿಕೊಂಡು ಮನೆಗಳಿಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಗ್ರಾಮಗಳ ಬಸ್ ಬರುವವರೆಗೂ ನಿಂತುಕೊಳ್ಳಬೇಕಾಗಿದೆ. ಕೆಲವು ಬಾರಿ ಗಂಟೆಗಟ್ಟಲೇ ನಿಂತುಕೊಂಡು ಕಾಯಬೇಕಾಗಿದೆ.
ಸದ್ಯ ಮಳೆಗಾಲ ಇರುವುದರಿಂದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಹಳೆಯ ಬಸ್ ನಿಲ್ದಾಣ ಕಟ್ಟಡವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದರಿಂದ ಮಳೆ ಮತ್ತು ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಯಾವುದೆ ವ್ಯವಸ್ಥೆಗಳು ಬಸ್ ನಿಲ್ದಾಣದಲ್ಲಿ ಇಲ್ಲವಾಗಿವೆ.
ಕೆಡವಿದ ಹಳೆಯ ಬಸ್ ನಿಲ್ಧಾಣದ ಕಟ್ಟಡದಲ್ಲಿರುವ ಪ್ರದೇಶವನ್ನು ಇನ್ನಷ್ಟು ಸ್ವಚ್ಛ ಮಾಡಬೇಕಾಗಿದೆ.
ನೂತನ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿರುವ ಶೌಚಾಲಯಗಳು ಕೂಡಾ ಪ್ರಯಾಣಿಕರಿಗೆ ಲಭ್ಯವಿಲ್ಲ. ಇದು ಕೂಡಾ ಸಮಸ್ಯೆಯಾಗಿದೆ. ಬಹಳಷ್ಟು ಜನರು ಬಸ್ ನಿಲ್ದಾಣದ ಹಿಂದಿರುವ ಪ್ರದೇಶದಲ್ಲಿ ಮೂತ್ರ ವಿಸರ್ಜನೆಯನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣ ಗಬ್ಬೆದ್ದು ನಾರುತ್ತಿದೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗನೆ ಬಸ್ ನಿಲ್ದಾಣದ ಉದ್ಘಾಟನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರಾದ ಬಸವರಾಜ ಪುಟಾಣಿ, ಗೋಪಾಲ ಭಟ್ಟಡ, ಪ್ರಕಾಶ ಹೋಳಗಿ, ಎಸ್.ಎಂ.ಫಕೀರಪೂರ, ಅವಿನಾಶ ಹಟ್ಟಿ, ಮಹಾಶಾಂತ ಶೆಟ್ಟಿ, ಗೌರಿ ಮಿಳ್ಳಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ರಬಕವಿ ಮತ್ತು ಬನಹಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಬಸ್ ನಿಲ್ದಾಣಗಳ ಉದ್ಘಾಟನೆಯನ್ನು ನೆರವೇರಿಸಲು ಬಾಗಲಕೋಟೆಯ ಸಾರಿಗೆ ಇಲಾಖೆಯ ಜಿಲ್ಲಾ ಮುಖ್ಯಸ್ಥರ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ. ಎರಡು ಬಸ್ ನಿಲ್ದಾಣಗಳನ್ನು ಪರಿಶೀಲಿಸುವಂತೆ ತಿಳಿಸಿದ್ಧೇನೆ. ಸಾರಿಗೆ ಇಲಾಖೆಯ ಸಚಿವರನ್ನು ಉದ್ಘಾಟನೆಗೆ ಕರೆಯಿಸಿ ಆದಷ್ಟು ಬೇಗನೆ ಉದ್ಘಾಟನೆಯನ್ನು ನೆರವೇರಿಸುವಂತೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ಧೇನೆ.
-ಸಿದ್ದು ಸವದಿ, ಶಾಸಕ ತೇರದಾಳ ಮತಕ್ಷೇತ್ರ
-ಕಿರಣ ಶ್ರೀಶೈಲ ಆಳಗಿ