Advertisement

ಕೈ ಹಿಡೀತಾರಂತೆ ರಾಯಣ್ಣ ಬ್ರಿಗೇಡ್‌ ನಾಯಕರು!

11:59 AM Feb 16, 2018 | Team Udayavani |

ಬಾಗಲಕೋಟೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯ ಬಿಜೆಪಿ ಪ್ರಮುಖ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧಗೊಂಡಿದ್ದು, ಫೆ.24 ಅಥವಾ 26ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ “ಕೈ’ ಹಿಡಿಯಲಿದ್ದಾರೆ.

Advertisement

ತಮ್ಮ ರಾಜಕೀಯ ಜೀವನವನ್ನೇ ಬಿಜೆಪಿಯಿಂದ ಆರಂಭಿಸಿರುವ ಹಲವು ಜನಪ್ರತಿನಿಧಿಗಳು, ಮುಖಂಡರು ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ. ಅವರೆಲ್ಲ ಮುಧೋಳ ಕ್ಷೇತ್ರದವರು ಎಂಬುದು ಗಮನಾರ್ಹ. ಮುಧೋಳ ತಾಲೂಕು ಲೋಕಾಪುರ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಕಾಶಿನಾಥ ಹುಡೇದ, ಸದ್ಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

ಜತೆಗೆ ಜಿಲ್ಲಾ ಸಹಕಾರಿ ಯೂನಿಯನ್‌ ಉಪಾಧ್ಯಕ್ಷ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯ ಪ್ರಧಾನ ಕಾರ್ಯದರ್ಶಿ. ಗೋವಿಂದ ಕಾರಜೋಳರ ಬಹು ಕಾಲದ ಬಲಗೈ ಬಂಟನಂತಿದ್ದವರು. ಕಾರಜೋಳರು ಮುಧೋಳ ಕ್ಷೇತ್ರಕ್ಟೆ ಬಂದಾಗಿನಿಂದ ಅವರೊಂದಿಗಿದ್ದಾರೆ. ಜನತಾ ದಳದಲ್ಲಿ ಹಲವು ಸಂಘಟನೆ ಜವಾಬ್ದಾರಿ ಹೊಂದಿದ್ದ ಹುಡೇದ, ಈಗ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

ಕಳೆದ ಬಾರಿ ನಡೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದರು. ಆಗ ಪಕ್ಷದ ಹಿರಿಯರ ಸೂಚನೆ ಮೇರೆಗೆ ನಾಮಪತ್ರ ಮರಳಿ ಪಡೆದಿದ್ದರು. ಕಳೆದ ವರ್ಷ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ದೊಡ್ಡ ಸಮಾವೇಶ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆದಾದ ಬಳಿಕ, ಪಕ್ಷದಲ್ಲಿ ಅವರನ್ನು ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಅಸಮಾಧಾನ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಕಾಶಿನಾಥ ಹುಡೇದ ಅವರೊಂದಿಗೆ ಬಿಜೆಪಿಯ ಕೆಲವು ತಾಪಂ ಸದಸ್ಯರು, ಗ್ರಾಪಂ ಸದಸ್ಯರು ಹಾಗೂ ಎಪಿಎಂಸಿ ನಿರ್ದೇಶಕರು, ವಿವಿಧ ಸಂಘಟನೆಗಳ ಪ್ರಮುಖರು ಅವರೊಂದಿಗೆ ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ.

Advertisement

ಎಲ್ಲ ಕ್ಷೇತ್ರಗಳಲ್ಲೂ ಗುರಿ?: ರಾಯಣ್ಣ ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಂಡ ನಾಯಕರನ್ನು ಬಿಜೆಪಿಯಲ್ಲಿ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಅಸಮಾಧಾನ ಪ್ರಬಲವಾಗಿ ಕೇಳಿ ಬರುತ್ತಿದೆ. ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು ಮಾತ್ರ, ರಾಯಣ್ಣ ಬ್ರಿಗೇಡ್‌ ಸೇರಿದಂತೆ ಎಲ್ಲರೊಂದಿಗೆ ಉತ್ತಮ ಸಂಪರ್ಕದೊಂದಿಗೆ ಇದ್ದಾರೆ.

ಉಳಿದೆಲ್ಲ ಕ್ಷೇತ್ರದಲ್ಲಿ ಬ್ರಿಗೇಡ್‌ ಜತೆಗೆ ಗುರುತಿಸಿಕೊಂಡವರನ್ನು ನಿರ್ಲಕ್ಷ ಮಾಡಲಾಗುತ್ತಿದೆ. ಹೀಗಾಗಿ ಅವರೆಲ್ಲ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಅನಿವಾರ್ಯವಾಗಿ ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಹುಡೇದ ಕೂಡ ಕುರುಬ ಸಮುದಾಯಕ್ಕೆ ಸೇರಿದ್ದು, ಕರ್ನಾಟಕ ಪ್ರದೇಶ ಕುರುಬ ಸಂಘದಲ್ಲೂ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. 

ನಾವೆಲ್ಲ ಈಶ್ವರಪ್ಪ ಬೆಂಬಲಿಗರು. ಕೂಡಲ ಸಂಗಮದಲ್ಲಿ ಸಮಾವೇಶ ನಡೆಸಿದ ಬಳಿಕ ನಮ್ಮನ್ನು ಪಕ್ಷದಲ್ಲಿ ನಿರ್ಲಕ್ಷé ಮಾಡಲಾಗುತ್ತಿದೆ. ನಮ್ಮ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆಯಲು ನಿರ್ಧರಿಸಿದ್ದೇವೆ. ಈ ಕುರಿತು ಸಿಎಂ, ಆರ್‌.ಬಿ. ತಿಮ್ಮಾಪುರ ಜತೆ ಚರ್ಚೆ ನಡೆಸಿದ್ದೇವೆ. ರಾಹುಲ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರುತ್ತೇವೆ.
-ಕಾಶಿನಾಥ ಹುಡೇದ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯ ಪ್ರಧಾನ ಕಾರ್ಯದರ್ಶಿ

* ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next