Advertisement

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

02:30 PM Apr 16, 2024 | Team Udayavani |

ಬೆಂಗಳೂರು: ವೃದ್ಧಾಶ್ರಮ ಹಾಗೂ ಪುನವರ್ಸತಿ ಕೇಂದ್ರ ಸ್ವಚ್ಛಗೊಳಿಸಲು ಬಂದ ಅಪ್ಪ-ಮಗ ಮಾಲೀಕರ ಮನೆಯಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

Advertisement

ಈ ಸಂಬಂಧ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಳ್ಳಾರಿಯ ಕಂಪ್ಲಿ ತಾಲೂಕಿನ ಮಿರ್ಜಾ ದಾದಾ ನೂರುದ್ದಿನ್‌ (50) ಮತ್ತು ಆತನ ಪುತ್ರ ಸೈಯದ್‌ ಬೇಗ್‌(19) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1.25 ಕೆ.ಜಿ. ಚಿನ್ನಾಭರಣ, 2 ಕೆ.ಜಿ.ಬೆಳ್ಳಿ ಸಾಮಾಗ್ರಿ ಹಾಗೂ 21.5 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಡಬಗೆರೆಯ ಕಮಲಾ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೂರುದಾರೆ ಕಮಲಾ ಕಡಬಗೆರೆಯಲ್ಲಿನ ಬಹುಮಹಡಿ ಕಟ್ಟಡದಲ್ಲಿ ವೃದ್ಧಾಶ್ರಮ ಹಾಗೂ ಪುನವರ್ಸತಿ ಕೇಂದ್ರ ನಡೆಸುತ್ತಿದ್ದಾರೆ. ಇದೇ ಕಟ್ಟಡದ ನೆಲ ಮಹಡಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಆಶ್ರಮದಲ್ಲಿ 10ಕ್ಕೂ ಹೆಚ್ಚು ಮಂದಿ ವೃದ್ಧರಿದ್ದಾರೆ. 15 ದಿನಕ್ಕೊಮ್ಮೆ ಆರೋಪಿ ಸೈಯದ್‌ ಬೇಗ್‌ ವೃದ್ಧಾಶ್ರಮ ಸ್ವಚ್ಛಗೊಳಿಸಿ ಹೋಗುತ್ತಿದ್ದ. ಈ ವೇಳೆ ದೂರುದಾರರ ಹಣಕಾಸಿನ ವ್ಯವಹಾರ ಹಾಗೂ ಚಿನ್ನಾಭರಣ ಇರುವುದನ್ನು ಆರೋಪಿ ತಿಳಿದುಕೊಂಡಿದ್ದ.

ಈ ಮಧ್ಯೆ ಕೆಲ ದಿನಗಳ ಹಿಂದೆ ವೃದ್ಧಾಶ್ರಮ ಸ್ವಚ್ಛಗೊಳಿಸಲು ಬಂದಾಗ ಕಮಲಾಗೆ ಅವರ ಪುತ್ರ ಲಕ್ಷಾಂತರ ರೂ. ಕೊಟ್ಟಿರುವುದನ್ನು ಗಮನಿಸಿದ್ದಾನೆ. ಈ ವೇಳೆ ಏ.9ರಂದು ಕಮಲಾ ಯುಗಾದಿ ಹಬ್ಬದ ಪ್ರಯುಕ್ತ ಬನಶಂಕರಿಯಲ್ಲಿರುವ ಪುತ್ರನ ಮನೆಗೆ ಹೋಗಿದ್ದರು. ಈ ವಿಚಾರ ತಿಳಿದ ಕೂಡಲೇ ಆರೋಪಿ ತನ್ನ ತಂದೆಗೆ ಕರೆ ಮಾಡಿ ವೃದ್ಧಾಶ್ರಮದ ಬಳಿ ಕರೆಸಿಕೊಂಡಿದ್ದಾನೆ. ಬಳಿಕ ಇಬ್ಬರು ಸೇರಿ ಮನೆಯ ಬಾಗಿಲು ಒಡೆದು 1 ಕೋಟಿ ರೂ. ಮೌಲ್ಯದ ವಜ್ರ,ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಾಲದಂಡಿ ಹೇಳಿದರು.

ಮನೆಯಲ್ಲಿ ಖಾರದ ಪುಡಿ ಎರಚಿದ್ದರು!: ಆರೋಪಿಗಳು ಮನೆಯಲ್ಲಿ ಕಳ್ಳತನ ಎಸಗಿದ ಬಳಿಕ ಸಾಕ್ಷ್ಯಾ ನಾಶ ಪಡಿಸಲು ಮನೆಯ ಎಲ್ಲೆಡೆ

Advertisement

ಖಾರದ ಪುಡಿ ಎರಚಿದ್ದರು. ಕಳವು ಮಾಡಿದ ಚಿನ್ನಾಭರಣ, ನಗದನ್ನು ವೃದ್ಧಾಶ್ರಮದ ಸಮೀಪದಲ್ಲಿರುವ ಮನೆಯಲ್ಲೇ ಇರಿಸಿದ್ದರು. ಒಂದೆರಡು ದಿನಗಳಲ್ಲಿ ಬಳ್ಳಾರಿಗೆ ಪರಾರಿಯಾಗಲು ಮುಂದಾಗಿದ್ದರು. ಅಷ್ಟರಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು. ಮಾದನಾಯಕನಹಳ್ಳಿ ಠಾಣಾಧಿಕಾರಿ ಮುರಳೀಧರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next