Advertisement

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

03:05 PM May 04, 2024 | Team Udayavani |

ಮಂಡ್ಯ: ಶಾಸಕ ಎಚ್‌.ಡಿ.ರೇವಣ್ಣನ ವರ್ತನೆ ಸರಿಯಿಲ್ಲ. ಹಿಂದೆ ಲಂಡನ್‌ ಗೆ ಹೋಗಿದ್ದಾಗ ಅಲ್ಲಿಯೂ ಇದೇ ರೀತಿ ಮಾಡಿ ತಗಲಾಕಿಕೊಂಡಿದ್ದರು ಎಂದು ಬಿಜೆಪಿ ಮುಖಂಡ, ಮಾಜಿ ಸಂಸದ ಎಲ್‌. ಆರ್‌.ಶಿವರಾಮೇಗೌಡ ಹೇಳಿದರು.

Advertisement

ರೇವಣ್ಣ ಒಳ್ಳೆಯ ನಡವಳಿಕೆಯ ವ್ಯಕ್ತಿಯಲ್ಲ. ಪ್ರಜ್ವಲ್‌ ರೇವಣ್ಣ ಇಷ್ಟೊಂದು ದೌರ್ಜನ್ಯ ನಡೆಸುತ್ತಿದ್ದರೂ ಅವರ ಅಪ್ಪ, ಅಮ್ಮ ನೋಡಿಕೊಂಡು ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಸರ್ಕಾರ ಸೂಕ್ತ ತನಿಖೆ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು. ಪೆನ್‌ಡ್ರೈವ್‌ ಗಳು ಸಾರ್ವಜನಿಕರಿಗೆ ಸಿಗದಂತೆ ನೋಡಿಕೊಳ್ಳಬೇಕು. ಪ್ರಜ್ವಲ್‌ ರೇವಣ್ಣ ಗೆದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಫಲಿತಾಂಶಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ಪೆನ್‌ಡ್ರೈವ್‌ ಪ್ರಕರಣದಿಂದ ಬಿಜೆಪಿಗೂ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಎನ್‌ಡಿಎ ಕೂಟದಿಂದ ಜೆಡಿಎಸ್‌ ಪಕ್ಷವನ್ನು ಹೊರ ಹಾಕಬೇಕು ಎಂದು ಶಿವರಾಮೇಗೌಡ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಒತ್ತಾಯಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ಇಬ್ಬರನ್ನು ಬಂಧಿ ಸಬೇಕು. ಸಂತ್ರಸ್ತೆಯರ ನೆರವಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎಚ್‌.ಡಿ.ದೇವೇಗೌಡರು ಬರ ಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ನಾಯಕರ ಬಾಯಿ ಕಟ್ಟಿದಂತಾಗಿದೆ: ಎನ್‌ಡಿಎ ಕೂಟಕ್ಕೆ ಜೆಡಿಎಸ್‌ ಸೇರಿಸಿಕೊಂಡಿದ್ದರಿಂದ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಧ್ವನಿ ಎತ್ತಲು ಬಾಯಿ ಕಟ್ಟಿ ಹಾಕಿದಂತಾಗಿದೆ. ಆದ್ದರಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದ್ದರಿಂದ ಎನ್‌ಡಿಎ ಕೂಟದಿಂದ ಜೆಡಿಎಸ್‌ ಅನ್ನು ಕೈಬಿಡಬೇಕು. ಇಲ್ಲದಿದ್ದರೆ ಜೆಡಿಎಸ್‌ನಿಂದಲೇ ಬಿಜೆಪಿ ಮೇಲೂ ಪರಿಣಾಮ ಬೀರಲಿದೆ ಎಂದರು.

Advertisement

ಈಗ ಸಂತ್ರಸ್ತೆಯರ ಪರವಾಗಿ ನಿಲ್ಲಲಿ: ಹಿಂದೆ ನಾಗಮಂಗಲ ಕೆಂಚನಹಳ್ಳಿ ಗಂಗಾಧರಮೂರ್ತಿ ಅವರ ಕೊಲೆ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲದಿದ್ದರೂ ಇದೇ ದೇವೇಗೌಡರು ನನ್ನನ್ನು ಜೈಲಿಗೆ ಕಳುಹಿಸಲು 8 ಕಿ.ಮೀ. ದೂರ ಗಂಗಾಧರ ಮೂರ್ತಿ ಅವರ ಫೋಟೋ ಹೊತ್ತುಕೊಂಡು ಪಾದಯಾತ್ರೆ ಮಾಡಿದ್ದರು. ಆಗ ನಾನು ಎಷ್ಟು ನೋವು ಅನುಭವಿಸಿದ್ದೆನು. ಪ್ರಕರಣದಲ್ಲಿ ನನ್ನದು ಯಾವ ಪಾತ್ರ ಇರಲಿಲ್ಲ. ಅದಕ್ಕೆ ನ್ಯಾಯಾಲಯದ ತೀರ್ಪು ಎಲ್ಲರಿಗೂ ಗೊತ್ತಿದೆ. ಅದರಂತೆ ಇಂದು ಸಹ ಸಂತ್ರಸ್ತೆಯರ ಪರವಾಗಿ ಪಾದಯಾತ್ರೆ ಮಾಡಲಿ ಎಂದು ಆಗ್ರಹಿಸಿದರು.

ಒಕ್ಕಲಿಗ ಸಮುದಾಯಕ್ಕೆ ಅವಮಾನ: ಪ್ರಜ್ವಲ್‌ ರೇವಣ್ಣ ಪ್ರಕರಣವೂ ವಿಕೃತ ಕಾಮಿ ಉಮೇಶ್‌ ರೆಡ್ಡಿಗಿಂತಲೂ ದೊಡ್ಡ ಪ್ರಕರಣವಾಗಿದೆ. ಗೂಗಲ್‌ನಲ್ಲೂ ಸರ್ಚ್‌ ಮಾಡಿದರೆ ಇವರದ್ದೇ ಬರುತ್ತಿದೆ. ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿದ್ದಾರೆ. ಆತನ ಕೆಲಸದಿಂದ ಇಡೀ ಒಕ್ಕಲಿಗ ಸಮುದಾಯ ತಲೆ ತಗ್ಗಿಸುವಂತಾಗಿದೆ. ಒಬ್ಬ ಜಿಪಂ ಮಾಜಿ ಸದಸ್ಯೆಯ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಒಬ್ಬ ಮಹಿಳಾ ಪೊಲೀಸ್‌ ಅಧಿಕಾರಿಯ ಸ್ಥಿತಿಯೂ ಇದೇ ಆಗಿದೆ. 5 ವರ್ಷ ಇದೇ ಕೆಲಸ ಮಾಡಿದ್ದಾನೆ. ಆ ಕರ್ಮವನ್ನು ನೋಡಲಾಗುತ್ತಿಲ್ಲ. 3 ಸಾವಿರ ಮಹಿಳೆಯರು, ಪಕ್ಷದ ಕಾರ್ಯಕರ್ತರ ಮನೆಗಳು ಬೀದಿಗೆ ಬೀಳುವಂತಾಗಿದೆ ಎಂದು ಕಿಡಿಕಾರಿದರು.

ಒಕ್ಕಲಿಗರನ್ನು ತುಳಿದಿದ್ದು ಜನತಾದಳ ಸಾಧನೆ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಒಕ್ಕಲಿಗರು ಬೆಳೆಯದಂತೆ ತುಳಿದಿದ್ದಾರೆ. ಜೆಡಿಎಸ್‌ ಕಂಪನಿಯಿಂದಲೇ ನಾವೆಲ್ಲರೂ ತುಳಿತಕ್ಕೊಳಗಾಗಿ ದ್ದೇವೆ. ನೊಂದವರ ಶಾಪವೇ ದೇವೇಗೌಡರಿಗೆ ಈ ಸ್ಥಿತಿ ಬಂದಿದೆ. ಇದೀಗ ಅವರು ಅನುಭವಿಸು ವಂತಾಗಿದೆ. ಒಕ್ಕಲಿಗ ಕುಟುಂಬಗಳನ್ನು ಮೂಲೆಗುಂಪು ಮಾಡಿದರು. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ನನಗೆ 6 ತಿಂಗಳ ಕಾಲ ಸಂಸದರನ್ನಾಗಿ ಮಾಡಿದರು. ಆಗ ನಾನು ಸುಮಾರು 32 ಕೋಟಿ ರೂ. ಸಾಲಗಾರನಾದೆ. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್‌ ಕೊಡದೆ ನನಗೆ ಮೋಸ ಮಾಡಿ ತನ್ನ ಮಗನ ತಂದು ಮಂಡ್ಯದಲ್ಲಿ ಪ್ರತಿಷ್ಠಾಪಿಸಲು ಮುಂದಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಹೇಮರಾಜು, ಚೇತನ್‌, ಉಮೇಶ್‌, ರಮೇಶ್‌, ನಾಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next