Advertisement

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

11:47 PM Apr 23, 2024 | Team Udayavani |

ಬೆಂಗಳೂರು: ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಭೇಟಿ ವೇಳೆ ಚೊಂಬಿನ ಸ್ವಾಗತದ ಮೂಲಕ ಗಮನ ಸೆಳೆದಿದ್ದ ಕಾಂಗ್ರೆಸ್‌ ನಾಯಕರು, ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ಹಿನ್ನೆಲೆಯಲ್ಲಿ ಬರಬೇಕಾದ ಬರ ಪರಿಹಾರ ಕೊಡಿ, ಇಲ್ಲವಾದರೆ ರಾಜ್ಯಕ್ಕೆ ಬರಬೇಡಿ ಎಂದು ಪ್ರತಿಭಟಿಸುವುದರೊಂದಿಗೆ “ಗೋ ಬ್ಯಾಕ್‌’ ಘೋಷಣೆ ಕೂಗಿದರು.

Advertisement

ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್‌, ಬೈರತಿ ಸುರೇಶ್‌, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರೆಲ್ಲರೂ ಸಮಾವೇಶಗೊಂಡು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಿ, ಇಲ್ಲವೇ ಕರ್ನಾಟಕಕ್ಕೆ ಬರಲೇಬೇಡಿ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದು ಈ ಮೂಲಕ ರೈತರಿಗೆ ಅನ್ಯಾಯ ಎಸಗಿದೆ. ಕರ್ನಾಟಕಕ್ಕೆ ನ್ಯಾಯ ಕೊಡಿ, ಬರಪರಿಹಾರ ಕೂಡಲೇ ಬಿಡುಗಡೆ ಮಾಡಿ ಚೊಂಬೇಶ್ವರ ಎಂದು ಒಕ್ಕೊರಲಿನಿಂದ ಕೂಗಿದ ಕಾಂಗ್ರೆಸ್‌ ನಾಯಕರು, ರೈತ ಬಂಧು ಕಾಂಗ್ರೆಸ್‌ನ ಬದ್ಧತೆಗೆ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿನ ಹೋರಾಟವೇ ಸಾಕ್ಷಿ, ರಾಜ್ಯದ ಜನತೆ ಪರವಾಗಿ ಕಾಂಗ್ರೆಸ್‌ ಸರಕಾರ ನಡೆಸಿದ ಹೋರಾಟಕ್ಕೆ ಕೊನೆಗೂ ತಲೆಬಾಗಿದೆ ಎಂದು ಫ‌ಲಕಗಳನ್ನು ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆ ಹಾಕಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಅಮಿತ್‌ ಶಾ ಮೊದಲು ಸಭೆ ನಡೆಸಿ 18,171 ಕೋಟಿ ಕೊಟ್ಟು ಆಮೇಲೆ ರಾಜ್ಯಕ್ಕೆ ಬರಲಿ. ಯಾವುದೇ ಬಿಡಿಗಾಸು ನೀಡದೆ, ರೈತರಿಗೆ ಅನ್ಯಾಯ ಮಾಡಿದ ತಮಗೆ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ವಾಗ್ಧಾಳಿ ನಡೆಸಿದರು.

ಜನತಾ ನ್ಯಾಯಾಲಯದಲ್ಲೂ ಜಯ
ರಣದೀಪ್‌ಸಿಂಗ್‌ ಸುರ್ಜೇವಾಲಾ ಮಾತನಾಡಿ, ರಾಜ್ಯದ ಪರವಾಗಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಭಾರತೀಯ ಚೊಂಬು ಪಕ್ಷದ ಸುಳ್ಳುಗಳನ್ನು ಜನತೆಗೆ ತೋರಿಸುತ್ತೇವೆ. ಈಗಾಗಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ಅದರ ಮುಂದುವರಿದ ಭಾಗವಾಗಿ ಜನತಾ ನ್ಯಾಯಾಲಯದ ಮೊರೆಹೋಗುತ್ತೇವೆ. ಮೋದಿ ಸರಕಾರವನ್ನು ಕರ್ನಾಟಕದಿಂದ ಮಾತ್ರವಲ್ಲ; ಭಾರತದ ಇತರೆಡೆಗಳಿಂದಲೂ ಕಿತ್ತೂಗೆಯಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next