Advertisement

ಮಹಿಳೆಯರಿಗೆ ಅಪಮಾನ ಮಾಡಿಲ್ಲ: ಕುಮಾರಸ್ವಾಮಿ

11:58 PM Apr 14, 2024 | Team Udayavani |

ಬೆಂಗಳೂರು: ತಮ್ಮ “ದಾರಿ ತಪ್ಪಿದ’ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಗ್ಯಾರಂಟಿಗಳ ಬಗ್ಗೆ ಹೇಳಿದ್ದೇನೆಯೇ ಹೊರತು ಮಹಿಳೆಯರಿಗೆ ಅವಮಾನ ಆಗುವಂತೆ ಮಾತನಾಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್‌ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಸೋಲುವ ಹತಾಶೆ ಕಾಂಗ್ರೆಸ್‌ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Advertisement

ತಮ್ಮ ಹೇಳಿಕೆ ಬಗ್ಗೆ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ಕೊಟ್ಟ ಎಚ್‌ಡಿಕೆ, ಸಿದ್ದರಾಮಯ್ಯ ಅವರ ಬಳಿ ನನ್ನ ಬಗ್ಗೆ ಹೇಳುವುದು ಏನಿದೆ? ಇದನ್ನು ಬಿಟ್ಟು ಬೇರೇನೂ ಹೇಳಬೇಕಿಲ್ಲ. ನಾನು ಹೇಳಿದ್ದೇ ಬೇರೆ, ಇವರು ತಿರುಚಿ ಹೇಳಿದ್ದೇ ಬೇರೆ. ಗ್ಯಾರಂಟಿಗಳ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೇನಾ? ಖಂಡಿತಾ ಇಲ್ಲ. ಮುಗ್ಧ ಜನರನ್ನು ಹಾಗೂ ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ, ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ ಎಂದರು.

ನಾನಾಗಲಿ, ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದು ಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಅಧಿಕಾರ ಸಿಕ್ಕಿದಾಗ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇನೆ. ನಾನು ಸಿಎಂ ಆಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಸಾರಾಯಿ, ಲಾಟರಿ ನಿಷೇಧಿಸಿದ್ದೇನೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ತುರುವೇಕೆರೆಯಲ್ಲಿ ಶನಿವಾರ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಭರವಸೆ ನೀಡಿದ್ದರು. ಕಾಂಗ್ರೆಸ್‌ ಸರಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಹಳ್ಳಿಯ ಹೆಣ್ಣು ಮಕ್ಕಳ ಬದುಕು ಏನಾಗಬೇಕು ಅಂತಾ ಯೋಚನೆ ಮಾಡಬೇಕಿದೆ. ನಿಮ್ಮ ಕುಟುಂಬದ ಬದುಕೇನಾಗಬೇಕು ಎಂಬುದನ್ನು ಯೋಚನೆ ಮಾಡಬೇಕಿದೆ. ಅವರಿಗೆ ಐದು ಗ್ಯಾರಂಟಿ ಬಿಟ್ಟು ಬೇರೇನಿಲ್ಲ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next