ಹಾಸ್ಯ ಕಲಾವಿದ ಮಿತ್ರ ಅವರು ತಮ್ಮ ಮಿತ್ರ ಎಂಟರ್‌ಟೈನರ್ ಸಿನಿ ಕ್ರಿಯೇಷನ್ಸ್‌ನಡಿ ಮೊದಲ ಬಾರಿಗೆ “ರಾಗ’ ಎಂಬ ಸಿನಿಮಾವನ್ನು ನಿರ್ಮಿಸಿ, ನಟಿಸಿರುವುದು ಗೊತ್ತೇ ಇದೆ. ಈಗಾಗಲೇ ಶಿವರಾಜ್‌ಕುಮಾರ್ ಅವರು ಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಈಗ “ರಾಗ’ ಚಿತ್ರಕ್ಕೆ ಮತ್ತೂಬ್ಬ ಸ್ಟಾರ್ ಸೇರ್ಪಡೆಯಾಗಿದ್ದಾರೆ.
ಹೌದು, ಕಿಚ್ಚ ಸುದೀಪ್ ಅವರು “ರಾಗ’ ಚಿತ್ರದ ಟ್ರೇಲರ್‌ಗೆ ಧ್ವನಿ ಕೊಡುವ ಮೂಲಕ ಚಿತ್ರತಂಡದ ಹೊಸ ಪ್ರಯೋಗಕ್ಕೆ ಬೆಂಬಲ ಸೂಚಿಸಿ, “ರಾಗ’ ಚಿತ್ರದ ಮೇಕಿಂಗ್ ಮತ್ತು ತಾಂತ್ರಿಕತೆಯ ಕುರಿತು ಖುಷಿಯಿಂದ ಮಾತನಾಡಿದ್ದಾರೆ. ಸೋಮವಾರ ಸುದೀಪ್ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಟ್ರೇಲರ್‌ಗೆ ವಾಯ್ಸ ಕೊಟ್ಟಿದ್ದಾರೆ. 1 ನಿಮಿಷ 36 ಸೆಕೆಂಡ್ ಇರುವ ಟ್ರೇಲರ್ ವೀಕ್ಷಿಸಿದ ಸುದೀಪ್, ಸುಮಾರು ಅರ್ಧ ಗಂಟೆ ಕಾಲ, ಧ್ವನಿ ನೀಡಿದ್ದಾರೆ.
“ಕತ್ತಲು ಬೆಳಕಿನ ಅಂತ್ಯ ಅಲ್ಲ, ಅದು ಬೆಳಕಿನ ಆರಂಭ. ದೃಷ್ಟಿ ಇಲ್ಲದೇ ಇರುವವರು ಕುರುಡರಲ್ಲ, ದೂರದೃಷ್ಟಿ ಇಲ್ಲದೇ ಇರೋರು ಕುರುಡರು, ಪ್ರಪಂಚ ತುಂಬಾ ಚಿಕ್ಕದು ಅಂದುಕೊಳ್ಳೋರಿಗೆ, ಪ್ರಪಂಚ ತುಂಬಾ ದೊಡ್ಡದು ಅಂದುಕೊಂಡವರಿಗೆ…’ ಹೀಗೆ ಅರ್ಥಪೂರ್ಣ ಮಾತುಗಳೇ ತುಂಬಿರುವ ಆ ಟ್ರೇಲರ್‌ಗೆ ಸುದೀಪ್ ಮಾತು ಕೊಟ್ಟು, ಸಿನಿಮಾ ಯಶಸ್ಸು ಕಾಣಲಿ ಅಂತ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
“ರಾಗ’ ಈಗಾಗಲೇ ಡಬ್ಬಿಂಗ್ ಮುಗಿಸಿ, ರೀರೆಕಾರ್ಡಿಂಗ್ ಮತ್ತು ಡಿಟಿಎಸ್ ಹಂತದಲ್ಲಿದೆ. ಫೆ.25 ರ ಒಳಗೆ ಮೊದಲ ಪ್ರತಿ ರೆಡಿಯಾಗಲಿದ್ದು, ಅದೇ ವೇಳೆ ಟ್ರೇಲರ್ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಮಾರ್ಚ್ ಮೊದಲ ವಾರದಲ್ಲಿ ಚಿತ್ರದ ಆಡಿಯೋ ಸಿಡಿ ಹೊರತರುವ ಪ್ಲಾನ್ ಮಿತ್ರ ಅವರದ್ದು.
ಚಿತ್ರದಲ್ಲಿ ನಾಲ್ಕು ಹಾಡುಳಿದ್ದು, ಒಂದು ಬಿಟ್ ಇದೆ. ಚಿತ್ರಕ್ಕೆ ವೈದಿ ಕ್ಯಾಮೆರಾ ಹಿಡಿದರೆ, ಅರ್ಜುನ್ ಜನ್ಯ ಸಂಗೀತವಿದೆ. ನಾಗೇಂದ್ರಪ್ರಸಾದ್, ಕವಿರಾಜ್, ಜಯಂತ್ ಕಾಯ್ಕಿಣಿ ಗೀತೆ ಬರೆದರೆ, ಸಚಿನ್ ಸಂಭಾಷಣೆ ಇದೆ. ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಭಾಮಾ, ಅವಿನಾಶ್, ರೂಪಿಕಾ, ತಬಲಾ ನಾಣಿ ಇತರರು ನಟಿಸಿದ್ದಾರೆ.