ಧಾರವಾಡ: ಕಾಂಗ್ರೆಸ್ ನಿಂದ ಇನ್ನು ಬೇಕಾದರೆ ಹತ್ತು ಜನ ಶಾಸಕರನ್ನು ತಗೋರಿ, ಆದ್ರೆ ಪಾಪ ಬಿ.ಎಸ್. ಯಡಿಯೂರಪ್ಪಗೆ ಮಾತ್ರ ತೊಂದರೆ ಕೊಡಬೇಡಿ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ, ಆದರೆ ಪಾಪಾ ಅವರನ್ನು ಆಟವಾಡಿಸುವುದು ಬೇಡ ಎಂದರು. ಯಡಿಯೂರಪ್ಪ ಬೇಡವಾದರೆ ಈಗಲೇ ತೆಗೆದು ಹಾಕಲಿ, ನಮ್ಮ ಕಾಂಗ್ರೆಸ್ ನವರು ಇನ್ನು ಹತ್ತು ಜನರನ್ನು ಬೇಕಾದರೆ ತೆಗೆದುಕೊಳ್ಳಲಿ, ನಮ್ಮವರ ರಾಜೀನಾಮೆ ಕೊಡಿಸೋದಾದರೆ ಕೊಡಿಸಲಿ ಎಂದ ತಿಮ್ಮಾಪುರ, ಯಡಿಯೂರಪ್ಪನವರನ್ನು ಆಡವಾಡಿಸುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡಗೆ ಮನವಿ ಮಾಡಿದರು.
ಇನ್ನು ಈ ದೇಶದ ಪ್ರಧಾನಿ ಮೋದಿಯವರು ಬಿಎಸ್ ವೈ ಗೆ ಅವಮರ್ಯಾದೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ತಿಮ್ಮಾಪುರ, ಸಿಎಂ ಯಡಿಯೂರಪ್ಪಗೆ ಅವಮಾನ ಮಾಡಿದರೆ ರಾಜ್ಯದ ಜನತೆಗೆ ಅವಮಾನ ಮಾಡಿದಂತೆ. ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ಶಾ, ಮೋದಿ ಮುಂದೆ ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ ಎಂದರು.
ಇದು ರಾಜ್ಯದ ಜನರಿಗೆ ಮಾಡುವ ಅವಮಾನ ಎಂದ ಅವರು, ಕುಮಾರಸ್ವಾಮಿ ಕಿಂಗ್ ಆಗುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ ಅವರು ಕಿಂಗ್ ಮೇಕರ್ ನೇ ಆಗಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷಗಿರಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅಧ್ಯಕ್ಷರಾಗ್ತಾರೋ ಇಲ್ವೋ ಗೊತ್ತಿಲ್ಲ, ಎಐಸಿಸಿ ಈ ವಿಷಯದಲ್ಲಿ ಗುಟ್ಟು ಬಿಟ್ಟು ಕೊಡುತ್ತಿಲ್ಲ ಎಂದ ತಿಮ್ಮಾಪುರ, ಲಕ್ಷ್ಮಣ ಸವದಿ ಎಂಎಲ್‌ಸಿ ಚುನಾವಣೆ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿಯ ಕೆಲ ಶಾಸಕರೇ ಅಭ್ಯರ್ಥಿ ಹಾಕಿ ಅಂತಾ ಹೇಳಿದ್ದಾರೆ. ಅದಕ್ಕಾಗಿಯೇ ಎಂಎಲ್ ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಪವರ್ ಗೇಮ್‌ನಲ್ಲಿ ಸವದಿ ಸೋಲಬಹುದು ಎಂದರು.
ಸರ್ಕಾರ ನಮ್ಮ ಭಾವನೆ ವಿರುದ್ಧ ನಡೀತಾ ಇದೆ ಅಂತಾ ಬಿಜೆಪಿಯ ಒಳಗಡೆ ಕೆಲವರಿಗೆ ಅನಿಸಿದೆ ಎಂದ ಅವರು, ಅಲ್ಲಿನ ಕೆಲವು ಶಾಸಕರು ಅಭ್ಯರ್ಥಿ ಹಾಕುವಂತೆ ಹೇಳಿರಬೇಕು. ಆ ಪಕ್ಷದಲ್ಲಿ ಬೇಗುದಿ ಇದೆ, ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಅತೃಪ್ತರ ಜೊತೆ ಮಾತನಾಡಿಯೇ ಸ್ಪರ್ಧಿಸಿರಬೇಕು ಎನ್ನುತ್ತ ಎಂಎಲ್.ಸಿ ಚುನಾವಣೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.