ಬೆಂಗಳೂರು : ಕೋವಿಡ್ ವಿರುದ್ಧ ಜಯ ಸಾಧಿಸಲು ಮೊದಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಇನ್ನು ಎರಡು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಒದಗಿಸುವ ಗುರಿ ಹೊಂದಲಾಗಿದೆ. ಶೀಘ್ರದಲ್ಲೇ ನಾವು ಪದ್ಮನಾಭನಗರ ಕ್ಷೇತ್ರದಲ್ಲಿ ವಾರ್ಡ್ ಮಟ್ಟದ ವ್ಯಾಕ್ಸಿನೇಷನ್ ಶಿಬಿರಗಳನ್ನು ಸ್ಥಾಪಿಸುತ್ತೇವೆ. ಕರೋನಾದಂತಹ ಬಿಕ್ಕಟ್ಟಿನ ಈ ಸಮಯದಲ್ಲಿ ಅಗತ್ಯವಿರುವವರಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕೆಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಶನಿವಾರ ಪದ್ಮನಾಭನಗರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, “ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದೆ ಇರುವುದಕ್ಕೇ ಇದೇ ಕಾರಣ. ಹೂವಿನ ಹಾರ, ಕೇಕು ಇವುಗಳನ್ನೆಲ್ಲ ತರುವ ಬದಲಾಗಿ, ಬಡ ಜನರಿಗೆ ಆಹಾರ ಕಿಟ್‌ಗಳನ್ನು ಒದಗಿಸುವ ಕೆಲಸ ಇಂದಿನ ತುರ್ತು ಅಗತ್ಯ”, ಎಂದು ಅವರು ಜನರಿಗೆ ತಿಳಿ ಹೇಳಿದರು.
ನಾವು ಒಂದೂವರೆ ತಿಂಗಳಿಂದ ಪ್ರತಿದಿನ 6,000 ರಿಂದ 7,000 ಮನೆಗಳಿಗೆ ಆಹಾರದ ಪೊಟ್ಟಣಗಳನ್ನ ವಿತರಿಸುತ್ತಿದ್ದೇವೆ. ಇನ್ನೂ ಕೂಡ ಅದನ್ನು ಮುಂದುವರೆಸಿದ್ದೇವೆ. ನಿಯಂತ್ರಣ ಕೊಠಡಿಯೊಂದನ್ನು ಸಹ ಸ್ಥಾಪಿಸಲಾಯಿತು ಮತ್ತು ಪದ್ಮನಾಭನಗರ ಕ್ಷೇತ್ರದ ಕೋವಿಡ್ ರೋಗಿಗಳಿಗೆ ಉಚಿತ ಲಸಿಕೆ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಒದಗಿಸಿದ್ದೇವೆ. ಈಗ ತಜ್ಞರು ಸಂಭವನೀಯ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದ್ದರಿಂದ, ನಾವು ಪದ್ಮನಾಭನಗರ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ. ಅದನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ಈ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಪ್ರತಿಯೊಬ್ಬರೂ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ ಎಂದರು.
ಇದನ್ನೂ ಓದಿ : 3ನೇ ಹಂತದ ಅನ್ ಲಾಕ್ : ದೇವಸ್ಥಾನ, ಶಾಪಿಂಗ್ ಮಾಲ್ ಗಳಿಗೆ ಅನುವು : ಸಿನಿ ಪ್ರಿಯರಿಗೆ ಶಾಕ್
ಕೋವಿಡ್ ನಿಂದ ತಮ್ಮ ಕುಟುಂಬದವರನ್ನು ಕಳೆದುಕೊಂಡವರು ದೇಹಗಳನ್ನು ಪಡೆಯಲು ವಿಫಲರಾಗಿದ್ದಾರೆ. ಮತ್ತೂ ಕೆಲವರು ಹೆದರಿ ಮೃತದೇಹವನ್ನು ಪಡೆಯಲು ಮುಂದೆ ಬಂದಿರಲಿಲ್ಲ. ಆದ್ದರಿಂದ, ನಾವು ಅಸ್ತಿ ವಿಸರ್ಜನೆ ಮಾಡಲು ನಿರ್ಧರಿಸಿದೆವು. ನಾನು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಧಾರ್ಮಿಕ ಕಾರ್ಯವನ್ನ ಮುಗಿಸಿದೆ. ನನ್ನ ಹೆಂಡತಿ ಸೇರಿದಂತೆ ಅನೇಕರು ಭಯಭೀತರಾಗಿದ್ದರು. ಆದರೆ ಅದು ನನ್ನ ಕರ್ತವ್ಯ ಎಂದು ಬಲವಾಗಿ ನಂಬಿದ್ದೆ. ಈಗ, ನಾನು ಇನ್ನೂ ಒಂದು ಧಾರ್ಮಿಕ ಆಚರಣೆ ಮಾಡೋದಿದೆ. ಅದಕ್ಕಾಗಿ ನಾನು ಕೇರಳದ ವಿಷ್ಣು ಪಾಡಾಗೆ ಅಥವಾ ವಾರಣಾಸಿಗೆ ಭೇಟಿ ನೀಡಿ ಶೀಘ್ರದಲ್ಲೇ ಮಾಡುತ್ತೇನೆ.
ಈ ಸಂದರ್ಭದಲ್ಲಿ, ಅಶೋಕ ಅವರು ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸವನ್ನು ಶ್ಲಾಘಿಸಿದರು. ಕುಟುಂಬದ ಸದಸ್ಯರಲ್ಲಿ ಒಬ್ಬರು ಕೋವಿಡ್ ನಿಂದ ಸಾವನ್ನಪ್ಪಿದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ಹೇಳಿದರು.