ಚಿಕ್ಕಬಳ್ಳಾಪುರ: ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆಯಂತೆ ರಾಜ್ಯದ ಪ್ರೌಢ ಶಾಲೆಗಳಲ್ಲಿ ಕ್ವಿಜ್ ಆಯೋಜಿಸಿ ಆ ಮೂಲಕ ವಿದ್ಯಾರ್ಥಿ ಗಳಲ್ಲಿ ದೇಶದ ಅರ್ಥ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಕುರಿತು ರಾಜ್ಯದ ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಿರುವ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು, ಪ್ರಸ್ತುತ ಸಾಲಿನಲ್ಲಿ ಶಾಲಾ ಮಕ್ಕಳಲ್ಲಿ ಆರ್ಥಿಕ ಶಿಕ್ಷಣದ ಪರಿಕಲ್ಪನೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ವಿಜ್ ಆಯೋಜನೆಗೆ ಮಾರ್ಗಸೂಚಿ ಪ್ರಕಟಿಸಿದೆ.
ಅರ್ಥ ವ್ಯವಸ್ಥೆ ಬಗ್ಗೆ ಜ್ಞಾನ: ಈ ಕಾರ್ಯಕ್ರಮವು ಪ್ರೌಢ ಶಾಲೆ ವಿದ್ಯಾರ್ಥಿಗಳಲ್ಲಿ ಬ್ಯಾಂಕ್‌ನ ವ್ಯವಸ್ಥೆ ಹಾಗೂ ದೇಶದ ಅರ್ಥ ವ್ಯವಸ್ಥೆ ಬಗ್ಗೆ ಹೆಚ್ಚಿನ ಜ್ಞಾನ ಹಾಗೂ ಕಲಿಕೆ ಯ ಆಸಕ್ತಿ ಮೂಡಿಸಲು ಪೂರಕ ಎಂಬ ದೃಷ್ಟಿಯಿಂದ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂತಹ ಮಹತ್ವದ ನಿರ್ದೇಶನ ರಾಜ್ಯದ ಶಿಕ್ಷಣ ಇಲಾಖೆಗೆ ನೀಡಿದೆ.
8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ: ಸರ್ಕಾರ, ನಗರ ಸ್ಥಳೀಯ ಸಂಸ್ಥೆಗಳು, ಕಾರ್ಪೋರೇಷನ್, ಸಮಾಜ ಕಲ್ಯಾಣ ಹಾಗೂ ಕರ್ನಾಟಕ ವಸತಿ ಶಾಲೆಗಳಲ್ಲಿ ವಿಶೇಷವಾಗಿ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ವ್ಯಾಸಂಗ ಮಾಡು ತ್ತಿರುವ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಈ ಕ್ವಿಜ್‌ನಲ್ಲಿ ಭಾಗವಹಿಸಬಹುದು. ಒಟ್ಟು ಶಾಲಾ, ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಹಂತದಲ್ಲಿ ಸ್ಪರ್ಧೆಗಳು ನಡೆಯಲಿದೆ.
ಎಲಿಮಿನೇಷನ್ ರೌಂಡ್: ಎಲ್ಲಾ ಹಂತಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ನಗದು ವಿತರಿಸಲಾಗುತ್ತದೆ. ಶಾಲಾ, ಬ್ಲಾಕ್ ಹಂತದ ಬಳಿಕ ಎಲಿಮಿನೇಷನ್‌ಗೆ ರೌಂಡ್ ಜಿಲ್ಲಾ ಪೂರ್ವ ದಲ್ಲಿ ನಡೆಯುತ್ತದೆ. ಜಿಲ್ಲಾ ಹಂತದ ಸ್ಪರ್ಧೆ ಬಳಿಕ ರಾಜ್ಯ ಹಂತಕ್ಕೂ ಮೊದಲು ರಾಜ್ಯ ಹಂತದ ಪೂರ್ವದಲ್ಲಿ ಎಲಿಮಿನೇಷನ್ ರೌಂಡ್ ನಡೆಯಲಿದೆ.
ಕ್ವಿಜ್ ಉದ್ದೇಶಗಳೇನು?:
- ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದು ● ವಿದ್ಯಾರ್ಥಿಗಳಲ್ಲಿ ವಿಶ್ಲೇಷಣೆ, ಚಿಂತಿಸುವ ಮನೋಭಾವ ಬೆಳೆಸುವುದು
- ದೇಶದ ಅರ್ಥ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದು
- ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವ, ಗುಂಪು ಚರ್ಚೆ, ● ತೀಕ್ಷ್ಣ ನಿರ್ಧಾರ, ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶ
- ವಿಜೇತ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದಲ್ಲಿ ನಗದು ಬಹುಮಾನ
20 ಪ್ರಶ್ನೆಗಳಿಗೆ 15 ನಿಮಿಷ ಕಾಲಾವಕಾಶ: ಕ್ವಿಜ್ ನಡೆಸುವ ವೇಳೆ ಪ್ರತಿ ಹಂತದ ಸ್ಪರ್ಧೆಗೆ ಒಟ್ಟು 20 ಬಹು ಆಯ್ಕೆಯ ಪ್ರಶ್ನೆಗಳು ಇರಲಿದ್ದು, 15 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಜೂ.19ಕ್ಕೆ ಶಾಲಾ ಹಂತದಲ್ಲಿ ಕ್ವಿಜ್ ಸ್ಪರ್ಧೆಗಳು ಮುಕ್ತಾಯವಾಗಲಿದ್ದು, ತಾಲೂಕು ಮಟ್ಟದ ಸ್ಪರ್ಧೆಗಳು ಜೂ.20 ರಿಂದ 23, ಜಿಲ್ಲಾ ಮಟ್ಟದ ಕ್ವಿಜ್ 27ಕ್ಕೆ ನಡೆಯಲಿದೆ. ಜುಲೈ 5ಕ್ಕೆ ರಾಜ್ಯ ಮಟ್ಟದಲ್ಲಿ ಕ್ವಿಜ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿವೆ.
– ಕಾಗತಿ ನಾಗರಾಜಪ್ಪ