ಯಲಬುರ್ಗಾ: ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ವಿನಾಕಾರಣ ವಿಳಂಬ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕುಷ್ಟಗಿ ತಾಲೂಕಿನ ಬಲಕುಂದಿ ಬಳಿ ಇರುವ ಕೊಪ್ಪಳ ಏತ ನೀರಾವರಿ ಯೋಜನೆಯ ಜಾಕ್ ವೇಲ್‌ಗೆ ಗುರುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಒಂಬತ್ತು ವರ್ಷಗಳಿಂದ ಯೋಜನೆ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದೆ. ಐದು ದಿನಗಳಲ್ಲಿ ಕಲಾಲಬಂಡಿಗೆ ನೀರು ಹರಿಯಲು ತ್ವರಿತ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲ ಆರಂಭಕ್ಕೂ ಮುನ್ನವೇ ಪೈಪ್ ಲೈನ್ ಹಾಗೂ ವಿದ್ಯುತ್ ಸಂಪರ್ಕದ ಕೆಲಸ ಪೂರ್ಣಗೊಳಿಸಬೇಕು. ಮಳೆಯಾದರೇ ರೈತರು ಕೃಷಿ ಚಟುವಟಿಕೆ ಆರಂಭ ಮಾಡುತ್ತಾರೆ ಆಗ ರೈತರ ಜಮೀನುಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇಷ್ಟು ದಿನ ವಿಳಂಬ ಮಾಡಿದಂತೆ ಇನ್ನು ವಿಳಂಬ ಮಾಡಿದರೇ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಆದರಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಿ. ವಿನಾಕಾರಣ ನೆಪ ಹೇಳುವಂತಿಲ್ಲ, ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ. ಕೆರೆ ತುಂಬಿಸುವ ಯೋಜನೆ ರೈತರಿಗೆ ವರದಾನವಾಗಲಿದೆ. ನೀರು ತುಂಬಿಸುವುದೊಂದೇ ಬಾಕಿ ಇದೆ ಎಂದರು.
ಕೃಷ್ಣಾ ಭಾಗ್ಯ ನಿಗಮದ ಅಧಿಕಾರಿಗಳಾದ ಎಂ.ಬಿ. ಫೈಲ್, ನಂದವಾಡಗಿ ಏತ ನೀರಾವರಿ ಯೋಜನೆಯ ಸತ್ಯನಾರಾಯಣಶೆಟ್ಟಿ, ಎ.ಕೆ. ನಾಯಕ, ದ್ಯಾಮಪ್ಪ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪೂರಮಠ, ಕಳಕಪ್ಪ ಕಂಬಳಿ, ಶಂಭು ಜೋಳದ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಶರಣಪ್ಪ ಈಳಿಗೇರ, ಮಾರುತಿ ಗಾವರಾಳ, ಶ್ರೀನಿವಾಸ ತಿಮ್ಮಾಪೂರ, ಕಲ್ಲಪ್ಪ ತೊಂಡಿಹಾಳ, ಮಂಜುನಾಥ ನಾಡಗೌಡ್ರ, ನೇಮಣ್ಣ ಮೇಲಸಕ್ರಿ ಇತರರು ಇದ್ದರು.