ಸೇಡಂ: ನನ್ನ ಬಹುದಿನಗಳ ಕನಸು ಏತ ನೀರಾವರಿ ಯೋಜನೆಗೆ ಈಗಾಗಲೇ 148 ಕೋಟಿ ರೂ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ತಾಲೂಕಿನ ಕೋಲಕುಂದಾ ಗ್ರಾಮದಲ್ಲಿ ದುಗನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 351 ರೈತರಿಗೆ 1.83 ಕೋಟಿ ಮೊತ್ತದ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.
ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ನಿಟ್ಟಿನಲ್ಲಿ ಸಾಲದ ಹೊಳೆಯನ್ನೇ ಈ ಭಾಗದಲ್ಲಿ ಹರಿಸಲಾಗಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಮ್ಮ ಭಾಗಕ್ಕೆ ಹೆಚ್ಚಿನ ಸಾಲ ನೀಡಲಾಗುತ್ತಿದೆ. ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರಂತೆಯೇ ರೈತರೂ ಸಹ ಬೆಳೆಯಬೇಕು ಎಂದರು.
ತೆಲ್ಕೂರ ಪಾಟೀಲ್ ಫೌಂಡೇಶನ್ ಅಧ್ಯಕ್ಷೆ ಸಂತೋಷಿರಾಣಿ ಪಾಟೀಲ್ ತೆಲ್ಕೂರ ಮಾತನಾಡಿ, ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿದಾಗಿನಿಂದಲೂ ರಾಜಕುಮಾರ ಪಾಟೀಲ ತೇಲ್ಕೂರ ದುಡಿಯುತ್ತಿದ್ದಾರೆ. ರೈತರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ತರುತ್ತಿದ್ದಾರೆ. ಬಡ ರೈತರ ಪಾಲಿಗೆ ಬಡ್ಡಿ ರಹಿತ ಸಾಲ ನೀಡಿ, ನೆರವಾಗಿದ್ದಾರೆ. ಅಂತವರ ಬೆನ್ನಿಗೆ ನಿಂತು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ ನಾಗೇಂದ್ರಪ್ಪ ಸಾಹುಕಾರ ದುಗನೂರ, ವಿಠ್ಠಲರೆಡ್ಡಿ ಪಾಟೀಲ್ ಕೋಲಕುಂದಾ, ಶರಣಯ್ಯ ಕಲಾಲ, ಬಿ.ಜಿ.ಕಲ್ಲೂರ, ಸಿದ್ರಾಮರೆಡ್ಡಿ ಮಮ್ಮಾಜಿ, ನಾಗಭೂಷಣರೆಡ್ಡಿ ಹೂಡಾ, ಶರಣರೆಡ್ಡಿ ಜಿಲ್ಲೇಡಪಲ್ಲಿ, ಮಹಿಪಾಲರೆಡ್ಡಿ ಪಾಟೀಲ್, ಅನಿಲ ಐನಾಪೂರ, ಮುಕುಂದ ದೇಶಪಾಂಡೆ, ಓಂಪ್ರಕಾಶ ಪಾಟೀಲ್, ಜಗದೇವಪ್ಪ ಸಾಹುಕಾರ, ವೀರೇಶ್ ಹೂಗಾರ, ಶಿವಾನಂದ ಸ್ವಾಮಿ ಇತರರು ಈ ವೇಳೆ ಉಪಸ್ಥಿತರಿದ್ದರು.