ಕೆಂಗೇರಿ: ರಾಜ್ಯ ಸರಕಾರದ ಗುಡಿಸಲು ಮುಕ್ತ ರಾಜ್ಯ ಯೋಜನೆಯ ಕನಸು ನನಸು ಮಾಡಲು ಕ್ಷೇತ್ರದ ವ್ಯಾಪ್ತಿಯ ಬಡವರ ಮನೆಗಳಿಗೆ ಶೀಘ್ರವೇ ಹಕ್ಕು ಪತ್ರ ವಿತರಿಸಿ ಮೂಲ ಸೌಲಭ್ಯ ಒಡಗಿಸುವುದಾಗಿ ಶಾಸಕ ಮುನಿರತ್ನ ತಿಳಿಸಿದರು.
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನರಸಿಂಹಯ್ಯನಪಾಳ್ಯ, ಸುಮನಹಳ್ಳಿ, ಕೊಟ್ಟಿಗೆಪಾಳ್ಯದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ನಿರ್ಮಾಣ, ಡಾಂಬರೀಕರಣ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ಬಡಾವಣೆಗಳನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಹಲವಾರು ವರ್ಷಗಳಿಂದ ಹಕ್ಕುಪತ್ರದ ನಿರೀಕ್ಷೆಯಲ್ಲಿರುವ ಸುಮನಹಳ್ಳಿ, ನರಸಿಂಹಯ್ಯನಪಾಳ್ಯ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ನೀಡಲಾಗುವುದು. ಈ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ಒಂದು ತಿಂಗಳೊಳಗಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.
ಹತ್ತಾರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಸಮರ್ಪಕ ರಸ್ತೆಗಳೇ ಇರಲಿಲ್ಲ. ವಾಹನ ಸಂಚಾರ ದುಸ್ತರವಾಗಿತ್ತು. ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ವೇಳೆ ಅವರನ್ನು ಕ್ಷೇತ್ರದ ವ್ಯಾಪ್ತಿಗೆ ಕರೆತಂದಾಗ ಸ್ಥಳಪರಿಶೀಲನೆ ನಡೆಸಿ, ಕೂಡಲೆ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿ ಹಣ ಬಿಡುಗಡೆ ಮಾಡಿದ್ದರು. ಹೀಗಾಗಿ 5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಬಿಬಿಎಂಪಿ ಸದಸ್ಯ ಜಿ.ಮೋಹನ್ ಕುಮಾರ್, ದಕ್ಷಿಣ ರೈಲ್ವೆ ಸಲಹಾ ಸಮಿತಿ ಅಧ್ಯಕ್ಷ ಎ.ಅಮರ್‌ನಾಥ್, ವಾರ್ಡ್ ಕಮಿಟಿ ಸದಸ್ಯ ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಸುಮಿತ್ರಮ್ಮ ಮತ್ತಿತರರು ಹಾಜರಿದ್ದರು.