ಬೆಳಗಾವಿ: ಭಾರತ ಇನ್ನು ಕೆಲವೇ ವರ್ಷಗಳಲ್ಲಿ ನಕ್ಸಲ್-ಮಾವೋವಾದಿಗಳಿಂದ ಮುಕ್ತವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಪ್ರಬುದ್ಧ ಭಾರತ ಸಮಾವೇಶ ಸ್ಟೆಪ್-2018 ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ನಕ್ಸಲ್-ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಕ್ಸಲ್-ಮಾವೋವಾದಿಗಳನ್ನು ಗುರುತಿಸಲಾಗಿದೆ. ಅವರ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಕಿದ್ದೇವೆ. ಈ ಕಾರ್ಯಾಚರಣೆಯಲ್ಲಿ ನಕ್ಸಲ್-ಮಾವೋವಾದಿಗಳು ಎಂದು ಗುರುತಿಸಿಕೊಂಡವರು ಲೇಖಕರಾಗಿರಲಿ, ವೈದ್ಯರಾಗಲಿ ಜೈಲಿಗೆ ಹೋಗಲೇಬೇಕು. ಇದರಲ್ಲಿ ಅನುಮಾನಬೇಡ ಎಂದರು.
ದೇಶದ ವಿರುದ್ಧ ಯಾರೇ ಬಂದೂಕು ಹಿಡಿದರೂ ನಾವು ಕೈಕಟ್ಟಿ ಕೂಡುವುದಿಲ್ಲ. ಅದರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಲೇ ಬಂದಿದ್ದೇವೆ. ಸೈನ್ಯವನ್ನು ಬಲಪಡಿಸಿದ್ದೇವೆ. ಆಂತರಿಕ ಹಾಗೂ ಬಾಹ್ಯ ರಕ್ಷಣಾ ಕ್ರಮಗಳನ್ನು ಬಿಗಿಗೊಳಿಸಿದ್ದೇವೆ. ಇದರ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದಿಗಳು ಪಲಾಯನ ಮಾಡುತ್ತಿದ್ದಾರೆ ಎಂದರು.
ಸ್ವತ್ಛ ಭಾರತ ಮಿಷನ್: ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಗಳಲ್ಲಿ ಒಂದು. ದೇಶದ ಅನೇಕ ಕಡೆ ಶಾಲೆಗಳಲ್ಲಿ ಶೌಚಾಲಯವಿಲ್ಲದೆ ಹೆಣ್ಣುಮಕ್ಕಳು ಅರ್ಧದಲ್ಲೇ ಶಾಲೆ ಬಿಡುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ಬಹಳ ನೋವಿನ ಸಂಗತಿ. ಇದನ್ನು ತೊಡೆದು ಹಾಕಬೇಕು ಎಂಬ ಉದ್ದೇಶದಿಂದಲೇ ಸ್ವತ್ಛ ಭಾರತ ಮಿಷನ್ ಜಾರಿಗೆ ತರಲಾಗಿದೆ. ಈ ಮೂಲಕ ಹೆಣ್ಣುಮಕ್ಕಳಿಗೆ ಗೌರವ ತಂದುಕೊಡುವುದು ನಮ್ಮ ಉದ್ದೇಶ ಎಂದರು.
ಈಗಾಗಲೇ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಕರ್ನಾಟಕದಲ್ಲೂ ಸಹ ಅಧಿಕಾರ ಮಾಡಬೇಕು ಎಂಬ ಉದ್ದೇಶ ಇದೆ. ಆದಷ್ಟು ಬೇಗ ಇದು ಈಡೇರುವ ವಿಶ್ವಾಸವೂ ಇದೆ. ದೇಶದಲ್ಲಿ ವಂಶ ರಾಜಕಾರಣ, ಭ್ರಷ್ಟ ರಾಜಕಾರಣ ಕಂಡಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದೇವೆ. ರಾಜಕಾರಣದಲ್ಲಿ ಬದ್ಧತೆ ಎಂಬುದು ಮೇಲು ಹಂತದಲ್ಲಿ ಆಗಬೇಕು. ಇದು ಕೆಳಹಂತದವರಿಗೆ ಪಾಠವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಮುಂದಿನ ಸರ್ಕಾರಕ್ಕೆ ಬೆಂಚ್‌ಮಾರ್ಕ್ ಸೃಷ್ಟಿ ಮಾಡಿದ್ದೇವೆ ಎಂದರು. ಶ್ರೀರಾಮ ಮಂದಿರ ನಿರ್ಮಾಣ ಹಾಗೂ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದರು.