ಹುಳಿಯಾರು: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜಿನ ಗ್ರಂಥಾಲಯಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣ ಮಾಡಿ 1 ಕೋಟಿ ಪುಸ್ತಕ ಅಪ್‌ಲೋಡ್ ಮಾಡುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಬುದ್ಧಿವಂತರು ಬಿಎ ಓದಲೂ, ಉದ್ಯೋಗ ಅಗತ್ಯ ಉಳ್ಳವರು ತಾಂತ್ರಿಕ ಶಿಕ್ಷಣ ಓದಲು ಹೋಗುತ್ತಿದ್ದರು. ಈಗ ಎಲ್ಲರಲ್ಲೂ ತಾಂತ್ರಿಕ ಶಿಕ್ಷಣ ಓದುವ ಆಸಕ್ತಿ ಬೆಳೆದಿದ್ದು, ಇಲ್ಲಿ ಅವಕಾಶ ಸಿಗದವರು ಬಿ.ಎ, ಬಿ.ಎಸ್‌ಸಿ, ಬಿ.ಕಾಂ ಓದುವುದು ಅನಿವಾರ್ಯವಾಗಿದೆ. ಇಂತಹವರ ಶೈಕ್ಷಣಿಕ ಪ್ರಗತಿಗೆ ನೆರವಾಗಲೆಂದು ಉಚಿತವಾಗಿ ಲ್ಯಾಪ್‌ಟಾಪ್ ನೀಡಲಾಗುತ್ತಿದ್ದು, ಇದರಲ್ಲಿ ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇತರೆ ಭಾಷೆಗಳ ಪಾಂಡಿತ್ಯ ಬೇಕು: ಮಾತೃಭಾಷೆಯಲ್ಲಿ ವಿಷಯ ಅರ್ಥವಾಗುವಂತೆ ಸುಲಭವಾಗಿ ಬೇರೆ ಭಾಷೆಯಲ್ಲಿ ವಿಷಯಗಳು ಅರ್ಥವಾಗುವುದಿಲ್ಲ. ಹಾಗಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಒಳ್ಳೆಯದು. ಆದರೆ ವ್ಯವಹಾರಕ್ಕೆ ಇತರೆ ಭಾಷೆಗಳ ಪಾಂಡಿತ್ಯ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲ್ಯದಲ್ಲೇ ಇಂಗ್ಲಿಷ್, ಹಿಂದಿ ಕಲಿಯುವುದು ಒಳ್ಳೆಯದು. ಬೇರೆ ಬೇರೆ ಭಾಷೆಗಳ ಭಾಷ್ಯ ಜ್ಞಾನಉನ್ನತ ವ್ಯಾಸಂಗ, ಉದ್ಯೋಗಕ್ಕೆ ಸಹಕಾರಿಯಾಗುತ್ತದೆ ಎಂದರು.
ಕಾಲಹರಣ ಮಾಡಬೇಡಿ: ಯೌವನಾವಸ್ಥೆಯಲ್ಲಿ ಉದಾಸೀನ ಮತ್ತು ಕಾಲಹರಣ ಮಾಡಿದರೆ ಮುಂದಿನ ಬದುಕು ಕಷ್ಟಕರವಾಗುತ್ತದೆ. ಹಾಗಾಗಿ ಗುರುಹಿರಿಯರು ಹೇಳುವ ಅನುಭವದ ಮಾತು ಅರ್ಥ ಮಾಡಿಕೊಂಡು ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಅಂಕ ಗಳಿಕೆಗಿಂತ ಅರ್ಥ ಮಾಡಿಕೊಳ್ಳುವುದು ಶ್ರೇಷ್ಠ ಶಿಕ್ಷಣ ಎಂದು ಭಾವಿಸಿ ಶಿಕ್ಷಕರು ಕೊಡುವ ನೋಟ್ಸ್ ಮಾತ್ರ ಓದದೆ ಪುಸ್ತಕ ಓದಿ ಅರ್ಥ ಮಾಡಿಕೊಂಡು ತಾವೇ ನೋಟ್ಸ್ ಮಾಡಿಕೊಳ್ಳುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮರುಳಸಿದ್ಧಪ್ಪ, ಎಲ್.ಆರ್.ಬಾಲಾಜಿ, ನಜರುಲ್ಲಾಖಾನ್, ವಕೀಲರಾದ ರತ್ನ ರಂಜಿನಿ, ಹಿರಿಯ ವಿದ್ಯಾರ್ಥಿಗಳ ಸಂಘದ ಕೆಂಕೆರೆ ನವೀನ್, ಬರಕನಹಾಲ್ ಶಿವಕುಮಾರ್, ವಿಶ್ವನಾಥ್, ಉಪನ್ಯಾಸಕರುಗಳಾದ ಪ್ರೊ.ಮೋಹನ್, ಪ್ರೊ.ವಲಿ, ಪ್ರೊ.ಸುಷ್ಮಾಬೀರಾದಾರ್, ಶಿವಯ್ಯ, ಡಾ.ಲೋಕೇಶ್ ನಾಯ್ಕ ಮತ್ತಿತರರು ಇದ್ದರು.
ಲಾ ಓದಿ ಲಾ ಮಿನಿಸ್ಟರ್ ಆದೆ: ಕಾನೂನು ಅರಿವು ಪಡೆಯುವ ಸಲುವಾಗಿ ಲಾ ಓದಿದೆ. ನನ್ನಲ್ಲಿನ ಓದಿನ ಆಸಕ್ತಿ ಮತ್ತು ತಿಳಿದುಕೊಳ್ಳುವ ಕುತೂಹಲ ಕಾನೂನು ಪಾಂಡಿತ್ಯ ಪಡೆಯಲು ಸಹಕಾರಿಯಾಯಿತು. ಈ ಪಾಂಡಿತ್ಯ ಇಂದು ಲಾ ಮಿನಿಸ್ಟರ್ ಮಾಡಿದ್ದು, ವಿಧಾನಸಭೆಯಲ್ಲಿ ಕಾನೂನಿನ ಬಗ್ಗೆ ಮಾತನಾಡಿ ಹಳ್ಳಿಯವರಿಗೆ ಕಾನೂನಿನ ಬಗ್ಗೆ ಏನು ಗೊತ್ತಿದೆ ಎಂದು ಮೂದಲಿಸುವವರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದೇನೆ. ಹಾಗಾಗಿ ಓದುವುದನ್ನು ಶ್ರದ್ಧೆಯಿಂದ ಓದಿ ಮಾಡುವ ಕೆಲಸ ಶ್ರಮದಿಂದ ಮಾಡಿದರೆ ಇತುವ ಕ್ಷೇತ್ರದಲ್ಲೇ ಹೆಸರು, ಗೌರವ ಸಂಪಾದಿಸಲು ಸಾಧ್ಯ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.