ಬೆಂಗಳೂರು: ತೆರವಿಗೆ ಬಾಕಿ ಇರುವ 634 ಕಾನೂನು ಬಾಹಿರ ಜಾಹಿರಾತು ಫಲಕಗಳನ್ನು ಅಳವಡಿಸುವ ಸ್ಟ್ರಕ್ಚರ್‌ಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಸೋಮವಾರ ಹೈಕೋರ್ಟ್‌ಗೆ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಸ್ಟ್ರಕ್ಚರ್‌ಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಆರ್. ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ “ನೋಟಿಸ್ ಜಾರಿಗೊಳಿಸಿದರೂ 634 ಜಾಹಿರಾತು ಫಲಕಗಳು ತೆರವುಗೊಳಿಸಿಲ್ಲ’ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ನಿಮ್ಮ ಕ್ರಮ ಏನು? ಎಂದು ನ್ಯಾಯಪೀಠ ಪ್ರಶ್ನಿಸಿತು. ಪಾಲಿಕೆಯ ಸಿಬ್ಬಂದಿ ಬಳಸಿ, ಕೋರ್ಟ್‌ಕ್ರಮದಲ್ಲಿ ತೆರವುಗೊಳಿಸಲಾಗುವುದು ಎಂದರು.
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಇರುವ ಒಟ್ಟು 1846 ಸ್ಟ್ರಕ್ಚರ್‌ಗಳ ಪೈಕಿ ಫಲಕಗಳಿಗೆ ಕುರಿತು ಒಟ್ಟು 767 ಎಫ್ಐಆರ್‌ಗಳು ದಾಖಲಾಗಿವೆ ಎಂದು ಬಿಬಿಎಂಪಿ ಪರ ವಕೀಲರು ಹೇಳಿದರು. ಇದಕ್ಕೆ ಪೀಠ ಎಫ್ಐಆರ್‌ಗಳ ಮೇಲೆ ಯಾವ ಕ್ರಮ ಜರುಗಿಸಲಾಗಿದೆ ಎಂಬ ವರದಿ ನೀಡುವಂತೆ ಸೂಚಿಸಿತು.
ಸ್ಕೈವಾಕ್, ಬಸ್ ತಂಗುದಾಣ ಸೇರಿದಂತೆ ವಿವಿಧೆಡೆ ಅಳವಡಿಸುವ ಜಾಹಿರಾತುಗಳ ನಿರ್ದಿಷ್ಟ ಅಳತೆ ಮತ್ತು ವಿಸ್ತರಣೆದ ಬಗ್ಗೆ ನ್ಯಾಯಪೀಠಕ್ಕೆ ಮಾಹಿತಿ ನೀಡಿದ ವಕೀಲರು ಎಲ್ಲದಕ್ಕೂ ಪ್ರತ್ಯೇಕವಾಗಿರುತ್ತದೆ ಎಂದಾಗ, ಇದರ ಬಗೆಗೆ ಪೂರ್ಣ ಮಾಹಿತಿ, ಒಡಂಬಡಿಕೆಗಳ ವಿವರ ಕೊಡುವಂತೆ ಪೀಠ ಸೂಚಿಸಿತು.
ಜಾಹಿರಾತು ಫಲಕಗಳಿಗೆ ಪ್ಲಾಸ್ಟಿಕ್ ಬದಲು ಬಳಸಲಾಗುವ “ಜೈವಿಕ ವಿಘಟನೀಯ ವಸ್ತುಗಳ’ ತಪಾಸಣಾ ವರದಿ ಬರಲು ಕನಿಷ್ಠ 6 ತಿಂಗಳು ಬೇಕು ಎಂದು ವಕೀಲರು ತಿಳಿಸಿದರು. ಬೇಗ ವರದಿ ತರಿಸಿಕೊಳ್ಳಲು ಸೂಚಿಸಿದ ಪೀಠ, ಸಾರ್ವಜನಿಕ ಖಾಸಗಿ ಸಹಭಾಗಿತ್ವದ 8 ಜಾಹಿರಾತು ಸಂಸ್ಥೆಗಳ ಮಾಹಿತಿ ನೀಡುವಂತೆ ಬಿಬಿಎಂಪಿ ಪರ ವಕೀಲರಿಗೆ ಹೇಳಿತು.