Advertisement

ಆಸ್ಪತ್ರೆಗಳ ವಸೂಲಿ ನಿಯಂತ್ರಣಕ್ಕೆ ಶೀಘ್ರ ಮಸೂದೆ

01:31 PM Jun 07, 2017 | Team Udayavani |

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬರುವ ರೋಗಿಗಳಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವುದಕ್ಕೆ ನಿಯಂತ್ರಣ ಹೇರಲು ಶೀಘ್ರವೇ ಮಸೂದೆ ಜಾರಿಗೆ ತರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌ ಹೇಳಿದ್ದಾರೆ.

Advertisement

ನಗರದ ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ ಮಂಗಳವಾರ ಆಯೋಜಿಸಿದ್ದ “ಕಾಕ್ಲಿಯಸ್‌ ಇನ್‌ಪ್ಲ್ರಾಂಟ್‌ ಯೋಜನೆ’ಗೆ ಚಾಲನೆ ನೀಡಿ ಮತ್ತು 25 ಹಾಸಿಗೆಗಳ ಡಯಾಲೀಸ್‌ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

“ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಲು ರಚಿಸಲಾದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್‌ಸೇನ್‌ ಅವರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಕರಡು ವಿಧೇಯಕ ಸಿದ್ಧಪಡಿಸಲಾಗಿದೆ. ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅದಕ್ಕೆ ಅನುಮೋದನೆ ಪಡೆಯಲಾಗುವುದು,’ ಎಂದರು.

“ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಮಾನದಂಡವಿಲ್ಲದೆ ಮನಸ್ಸಿಗೆ ಬಂದಂತೆ ಶುಲ್ಕ ವಿಧಿಸಿ ಬಡ ರೋಗಿಗಳನ್ನು ಸುಲಿಗೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಾಯ್ದೆ ರೂಪಿಸಲಾಗುತ್ತಿದ್ದು, ಅದು ಅಂತಿಮಗೊಳಿಸುವವರೆಗೆ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಇದು ಬಡವರ ಪರ ಮತ್ತು ಬಲಿಷ್ಠ ಕಾನೂನು ಆಗಲಿದೆ,’ ಎಂದು ಭರವಸೆ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಅವಶ್ಯಕತೆ ಇಲ್ಲದಿದ್ದರೂ ಅನಗತ್ಯ ಪರೀಕ್ಷೆ ಮಾಡುತ್ತಾರೆ. ಹಣವಿಲ್ಲದಿದ್ದರೆ ಹೆಣ ಕೂಡ ಕೊಡುವುದಿಲ್ಲ. ಇದೆಲ್ಲ ತಿಳಿದಿದ್ದರೂ ಜನರು ಪುನಃ ಅಲ್ಲಿಗೆ ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ದೇವಾಲಯವಿದ್ದಂತೆ.

Advertisement

ದೊಡ್ಡ ಆಸ್ಪತ್ರೆಗಳನ್ನು ನಡೆಸುವಾಗ ಸಣ್ಣಪುಟ್ಟ ಲೋಪಗಳು ಇರುತ್ತವೆ. ಅದನ್ನು ಸರಿಪಡಿಸಿ ತಿದ್ದಿಕೊಳ್ಳಬಹುದು. ಅದರೆ, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಅಪಪ್ರಚಾರ ಮಾಡುವುದಕ್ಕೆಂದೇ ಗುಂಪೊಂದು ಇದೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಜೀವಂತ ಬರುವುದಿಲ್ಲ ಎಂದು ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಇಂತಹ ಘಟನೆಗಳು ಗಮನಕ್ಕೆ ಬಂದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. 

ಕಾಕ್ಲಿಯಸ್‌ ಇನ್‌ಪ್ಲ್ರಾಂಟ್‌ ಯೋಜನೆ ರಾಜ್ಯವನ್ನು ಶ್ರವಣದೋಷ ಮುಕ್ತ ಮಾಡುವ ಗುರಿ ಹೊಂದಿದೆ. ಆರಂಭದಲ್ಲಿ ಈ ರೋಗಕ್ಕೆ ಹಣ ಖರ್ಚು ಮಾಡುವ ಬಗ್ಗೆ ಆತಂಕವಿತ್ತು. ಪ್ರತಿ ರೋಗಿಗಳಿಗೆ ಸುಮಾರು 5 ಲಕ್ಷ ರೂ.ಖರ್ಚಾಗಲಿದೆ. ಈ ಯೋಜನೆಯಲ್ಲಿ ಹಣ ದುರುಪಯೋಗಬಾರದು ಎಂಬ ಕಾರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶ್ರವಣದೋಷ ಇರುವ ಮಕ್ಕಳನ್ನು ಗುರುತಿಸಲು ರಾಜ್ಯಾದ್ಯಂತ ವ್ಯಾಪಕ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. 

ಸಚಿವ ದಿನೇಶ್‌ಗುಂಡೂರಾವ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಸಂಸದೀಯ ಕಾರ್ಯದರ್ಶಿ ಉಮೇಶ್‌ ಜಿ.ಜಾಧವ್‌, ಕೆ.ಸಿ.ಜನರಲ್‌ ಆಸ್ಪತ್ರೆ ಆಧೀಕ್ಷಕ ಡಾ.ಎಚ್‌.ರವಿಕುಮಾರ್‌, ಬಿಬಿಎಂಪಿ ಸದಸ್ಯ ಆರ್‌.ಎಸ್‌.ಸತ್ಯನಾರಾಯಣ್‌, ಆರೋಗ್ಯ ಇಲಾಖೆ ಆಯುಕ್ತ ಸುಭೋದ್‌ ಯಾದವ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next