Advertisement

ವಿದ್ಯುತ್‌ ಮಾಹಿತಿಗೆ ಶೀಘ್ರ “ಆ್ಯಪ್‌’ : MESCOM ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್

09:17 AM Jul 03, 2020 | Team Udayavani |

ಮಂಗಳೂರು: ವಿದ್ಯುತ್‌ ಸಂಬಂಧಿತ ಸಮಗ್ರ ಮಾಹಿತಿ ಹಾಗೂ ಬಿಲ್‌ ಪಾವತಿಗೆ ಅವಕಾಶ ಕಲ್ಪಿಸುವ ಆ್ಯಪ್‌ ಒಂದನ್ನು ಬೆಸ್ಕಾಂ ಮಾದರಿಯಲ್ಲಿ ಮೆಸ್ಕಾಂನಲ್ಲೂ 2 ತಿಂಗಳೊಳಗೆ ಜಾರಿಗೆ ತರಲಾಗುವುದು. ಜತೆಗೆ ಡಿಜಿಟಲ್‌ ಮೀಟರ್‌ ಅಳವಡಿಕೆ ಹಾಗೂ ದ.ಕ. ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ವಯರ್‌ಗಳಿಗೆ ಕವರ್‌ ಕಂಡಕ್ಟರ್‌ ಹಾಕಲು ನಿರ್ಧರಿಸಲಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ಪತ್ರಿಕಾ ಸಂವಾದದಲ್ಲಿ ತಿಳಿಸಿದರು. ಮಳೆಗಾಲದಲ್ಲಿ ತುರ್ತು ಕೆಲಸಗಳ ನಿರ್ವಹಣೆಗಾಗಿ 851 ಸಿಬಂದಿಯ ವಿಶೇಷ ಪಡೆಯನ್ನು ರಚಿಸಲಾಗಿದೆ. 46 ವಾಹನಗಳನ್ನು ಮಂಜೂರು ಮಾಡಲಾಗಿದೆ. ದ.ಕ.ದಲ್ಲಿ 234, ಉಡುಪಿಯಲ್ಲಿ 207, ಶಿವಮೊಗ್ಗದಲ್ಲಿ 225, ಚಿಕ್ಕಮಗಳೂರಿನಲ್ಲಿ 185 ಸಿಬಂದಿ ವಿಶೇಷ ಪಡೆಯಲ್ಲಿರುತ್ತಾರೆ ಎಂದರು.

Advertisement

ಭೂಗತ ಕೇಬಲ್‌ ನಗರಕ್ಕೆ ಪೂರಕ
ಮಲೆನಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಮರ ಬಿದ್ದು ವಿದ್ಯುತ್‌ ಸಮಸ್ಯೆಯಾಗುವ ಕಾರಣ ಅಲ್ಲಿ ಭೂಗತ ಕೇಬಲ್‌ ಅಳವಡಿಸಬಹುದಲ್ಲ ಎಂಬ ಸುದ್ದಿಗಾರರ ಸಲಹೆಗೆ ಉತ್ತರಿಸಿದ ಅವರು, ಅಲ್ಲಿ ಭೂಗತ ಕೇಬಲ್‌ನ ನಿರ್ವಹಣೆ ಕಷ್ಟ; ವೆಚ್ಚವೂ ಅಧಿಕ. ನಗರ ಪ್ರದೇಶಕ್ಕಷ್ಟೇ ಅದು ಪೂರಕ ಎಂದರು.

ವಿದ್ಯುತ್‌ ಆಘಾತ ಸಮಸ್ಯೆಗೆ ಪರಿಹಾರ
ಮಂಗಳೂರು ವಲಯದ ಮುಖ್ಯ ಎಂಜಿನಿಯರ್‌ ಮಂಜಪ್ಪ ಮಾತನಾಡಿ, ವಿದ್ಯುತ್‌ ಆಘಾತ ಸಮಸ್ಯೆ ಪರಿಹಾರಕ್ಕಾಗಿ ರೈತರು, ಗೃಹ ಬಳಕೆದಾರರು ಅರ್ಥ್ ಲೀಕೇಜ್‌ ಸರ್ಕಿಟ್‌ ಬ್ರೇಕರ್‌ ಅಳವಡಿಸಬೇಕು ಎಂದರು. ತಾಂತ್ರಿಕ ನಿರ್ದೇಶಕರಾದ ಪದ್ಮಾವತಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಸ್ವಾಗತಿಸಿದರು. ಪತ್ರಕರ್ತ ಬಿ.ಎನ್‌. ಪುಷ್ಪರಾಜ್‌ ವಂದಿಸಿದರು.

ಮಳೆ ಹಾನಿ: 12.31 ಕೋ.ರೂ. ನಷ್ಟ
ಕಳೆದ ವರ್ಷ ನೆರೆ/ ಮಳೆಯಿಂದಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ 33.61 ಕೋ.ರೂ. ನಷ್ಟವಾಗಿತ್ತು. ಈ ವರ್ಷ ಎಪ್ರಿಲ್‌ನಿಂದ ಜೂನ್‌ ಅಂತ್ಯದ ವರೆಗೆ ದ.ಕ.ದಲ್ಲಿ 5.26 ಕೋ.ರೂ., ಉಡುಪಿಯಲ್ಲಿ 2.02 ಕೋ.ರೂ., ಶಿವಮೊಗ್ಗದಲ್ಲಿ 2.30 ಕೋ.ರೂ., ಚಿಕ್ಕಮಗಳೂರಿನಲ್ಲಿ 2.71 ಕೋ.ರೂ. ಸೇರಿದಂತೆ ಒಟ್ಟು 12.31 ಕೋ.ರೂ. ನಷ್ಟವಾಗಿದೆ. ಕಳೆದ ವರ್ಷ ವಿದ್ಯುತ್‌ ಅಪಘಾತದಿಂದ 65 ವ್ಯಕ್ತಿಗಳು ಮೃತಪಟ್ಟಿದ್ದು 56.26 ಲಕ್ಷ ರೂ. ಪರಿಹಾರ ನೀಡಲಾಗಿದೆ. ಗಾಯಗೊಂಡ 33 ಮಂದಿಗೆ 0.75 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸ್ನೇಹಲ್‌ ವಿವರಿಸಿದರು.

ಕಂದಾಯ ಸಂಗ್ರಹ ಕುಸಿತ
ಲಾಕ್‌ಡೌನ್‌ ಅವಧಿಯಲ್ಲಿ ಕೈಗಾರಿಕೆಗಳಿಂದ ವಿದ್ಯುತ್‌ ಬೇಡಿಕೆ ಶೇ. 60ರಷ್ಟು ಕಡಿಮೆಯಾಗಿ, ಗೃಹಬಳಕೆ ಸಾಮಾನ್ಯ ಪ್ರಮಾಣಕ್ಕಿಂತ ಶೇ. 30ರಷ್ಟು ಏರಿಕೆಯಾಗಿತ್ತು. ಪ್ರತೀ ತಿಂಗಳಿಗೆ 330 ಕೋ.ರೂ. ಸರಾಸರಿ ಕಂದಾಯ ಸಂಗ್ರಹ ನಿರೀಕ್ಷೆಯಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಶೇ. 50ರಷ್ಟು ಮಾತ್ರ ಸಂಗ್ರಹವಾಗಿದೆ. ಸದ್ಯ ಕೈಗಾರಿಕೆಗಳ ವಿದ್ಯುತ್‌ ಬೇಡಿಕೆ ಶೇ. 70ಕ್ಕೆ ಏರಿದೆ ಎಂದು ಸ್ನೇಹಲ್‌ ತಿಳಿಸಿದರು.

Advertisement

24×7 ಉಚಿತ ಸಹಾಯವಾಣಿ – 1912

Advertisement

Udayavani is now on Telegram. Click here to join our channel and stay updated with the latest news.

Next