ಹೆಬ್ರಿ: ಈ ಭಾಗದ ವೋಲ್ಟೇಜ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಆ. 27ರಂದು ಹೆಬ್ರಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಬಳಿಕ ಹೆಬ್ರಿ ರಾಮ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಸಚಿವರಾದ ಮೇಲೆ ರಾಜ್ಯಾದ್ಯಂತ ತಿರುಗಾಡಬೇಕಾದ್ದರಿಂದ ಜವಾಬ್ದಾರಿ ಹೆಚ್ಚಿದೆ. ಆದರೂ ಹೆಬ್ರಿ ಮತ್ತು ಕಾರ್ಕಳ ಕ್ಷೇತ್ರದ ಜನರ ಸಮಸ್ಯೆಗೆ ಸದಾ ಸ್ಪಂದಿಸುತ್ತೇನೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಪರಿಹರಿಸುವುದರ ಜತೆಗೆ ಉಡುಪಿ ಜಲ್ಲೆಯ ಅಭಿವೃದ್ಧಿಗೆ ಹೊಸ ಯೋಜನೆಯನ್ನು ರೂಪಿಸಲಾಗುವುದು.ಹೆಬ್ರಿ ತಾಲೂಕಿಗೆ ಪೂರ್ಣ ಪ್ರಮಾಣದ ಇಲಾಖೆ ಬರುವಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಚೆನ್ನೈ-ಮುಂಬೈಗೆ ಬಸ್ ಸಂಚಾರ ಪುನಾರಂಭ
ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರತ್ನಾಕರ ಅಮೀನ್, ಪಂ. ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು, ಜಿ.ಪಂ. ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಮೇಶ್ ಕುಮಾರ್, ಕಾರ್ಕಳ ತಹಶೀಲ್ದಾರ್ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು. ಗುರುದಾಸ್ ಶೆಣೈ ಪ್ರಸ್ತಾವನೆಗೈದರು. ಹೆಬ್ರಿ ಪಿಡಿಒ ಸದಾಶಿವ ಸೇರ್ವೆಗಾರ ಸ್ವಾಗತಿಸಿ, ಪ್ರಸಾದ್ ಶೆಟ್ಟಿ ನಿರೂಪಿಸಿ ವಂದಿಸಿದರು.
ವಿವಿಧ ಗ್ರಾ.ಪಂ.ಗೆ ಭೇಟಿ
ಇದೇ ಸಂದರ್ಭದಲ್ಲಿ ಸಚಿವರು ಶಿವಪುರ, ಚಾರ, ಬೇಳಂಜೆ, ನಾಡ್ಪಾಲು, ಮುದ್ರಾಡಿ ಗ್ರಾಮ ಪಂಚಾಯತ್‌ಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.