Advertisement

ವಿಜ್ಞಾನದ ಸಾಧನೆಗಳನ್ನೂ ಪ್ರಶ್ನಿಸಿ

12:32 PM Mar 10, 2017 | Team Udayavani |

ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಯನ್ನು ಸುಮ್ಮನೆ ಒಪ್ಪಿಕೊಳ್ಳುವ ಬದಲು ಅದನ್ನು ಪ್ರಶ್ನಿಸುವ ಜತೆಗೆ ಅದರಿಂದಾಗುವ ಪ್ರಯೋಜನವೇನು ಎಂಬುದನ್ನು ಅರಿತುಕೊಳ್ಳ ಬೇಕು ಎಂದು ಗಾಂಧಿಮಾರ್ಗಿ ಹಾಗೂ ಜಮುನ ಲಾಲ್‌ ಪ್ರಶಸ್ತಿ ಪುರಸ್ಕೃತ ಡಾ. ಸುರೇಂದ್ರ ಕೌಲಗಿ ಹೇಳಿದರು.

Advertisement

ಮೈಸೂರು ವಿಶ್ವವಿದ್ಯಾನಿಲಯ, ಗಾಂಧಿ ಭವನದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ, ಸಂತ ಜೋಸೆಫ್ ಪ್ರಥಮ ದರ್ಜೆ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗಾಂಧಿ ಸುವರ್ಣ ಸಂಭ್ರಮದ ಸಮಾರೋಪ‌ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಉಪಗ್ರಹಗಳ ಉಡಾವಣೆ ಮಾಡಿರುವ ವಿಜ್ಞಾನಿಗಳು ಚಂದ್ರಯಾನವನ್ನು ಮಾಡಿದ್ದು, ಚಂದ್ರಗ್ರಹದಲ್ಲಿ ಲಭ್ಯವಿರುವ ಬೆಟ್ಟಗುಡ್ಡಗಳು, ನೀರಿನ ಮೂಲಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಆದರೆ, ಭೂಮಿಯ ಮೇಲೆ ಲಭ್ಯವಿರುವ ನೀರು ಹಾಗೂ ಬೆಟ್ಟಗುಡ್ಡಗಳು ನಶಿಸಿ ಹೋಗುತ್ತಿದ್ದರೂ ಇದರ ಉಳಿವಿಗಾಗಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ವಿಜ್ಞಾನದಲ್ಲಿ ಸಾಧನೆಯನ್ನು ಸುಮ್ಮನೆ ಒಪ್ಪಿಕೊಳ್ಳುವ ಬದಲು ಅದರಿಂದಾಗುವ ಪ್ರಯೋಜನವೇನು ಎಂದು ಅರಿತುಕೊಳ್ಳಬೇಕಿದೆ ಎಂದರು.

ಎಷ್ಟು ಸಮಂಜಸ?: ದೇಶದ ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಇಸ್ರೋ ಮೂಲಕ ದೇಶದ ಸಾವಿರಾರು ವಿಜ್ಞಾನಿಗಳು ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಅಲ್ಲದೆ ಭಾರತೀಯ ವಿಜ್ಞಾನಿಗಳ ಈ ಸಾಧನೆಯನ್ನು ಮೆಚ್ಚಿಕೊಂಡಿರುವ ದೇಶದ ಜನತೆ ಇದು ಇನ್ನಷ್ಟು ಹೆಚ್ಚಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ಯಂತ್ರಗಳನ್ನು ಕಟುವಾಗಿ ವಿರೋಧಿಸಿದ್ದ ಗಾಂಧೀಜಿ, ಯಂತ್ರಗಳ ಶಕ್ತಿಗಿಂತ ಮಾನವನ ಶಕ್ತಿ ಹೆಚ್ಚಾಗಬೇಕೆಂದು ಬಯಸಿದ್ದರು.

ಈ ನಿಟ್ಟಿನಲ್ಲಿ ವಿಜ್ಞಾನಿಗಳ ಸಾಧನೆಯ ಕುರಿತು ಗಾಂಧಿ ವಿಚಾರದ ಬೆಳಕಿನಲ್ಲಿ ವಿಮರ್ಶೆ ಮಾಡುವ ಮೂಲಕ ಈ ಸಾಧನೆ ಎಷ್ಟು ಸಮಂಜಸ, ಅದರಿಂದ ಏನು ಪ್ರಯೋಜನ ಎಂಬುದರ ಜತೆಗೆ ಇದಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಬೇಕಾದ ಅಗತ್ಯವಿದೆಯೇ? ಎಂಬ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

Advertisement

ಬೇಸರ ವ್ಯಕ್ತ: ಹೆಚ್ಚಾಗುತ್ತಿರುವ ವಿಜ್ಞಾನದ ಬೆಳವಣಿಗೆಯಿಂದಾಗಿ ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣಿಗಳಿಗಿಂತ ಮುಖ್ಯವಾಗಿ ಇಸ್ರೋ, ನಾಸಾ ಅಂತಹ ಸಂಸ್ಥೆಗಳು ರಾಜ್ಯಬಾರ ಮಾಡುತ್ತಿದ್ದು, ಪ್ರತಿಯೊಬ್ಬರನ್ನು ತನ್ನದೇ ಹಾದಿಯಲ್ಲಿ ಕರೆದೊಯ್ಯುತ್ತಿವೆ. ಹೀಗಾಗಿ ಇಂದು ಯಂತ್ರಗಳು ಜೀವನದ ಅಂಗವಾಗಿದ್ದು, ಯಂತ್ರಗಳು ಹಾಗೂ ವಿಜ್ಞಾನವನ್ನು ಪ್ರಶ್ನಿಸಲು ಸಾಧ್ಯವಾಗದೆ, ಅವುಗಳ ಹಾದಿಯಲ್ಲೇ ನಾವೆಲ್ಲರೂ ಹೋಗುವಂತಾಗಿದೆ. ಇದರ ಪರಿಣಾಮ ವಾಡಿಕೆ ವಿಷಯದ ಕುರಿತ ಚಿಂತನೆಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಏನು ಉತ್ಪಾದಿಸದ ಪರಿಸ್ಥಿತಿ: ಮತ್ತೂಂದೆಡೆ ದೇಶದಲ್ಲಿ ಜಾಗತೀಕರಣ ಹಾಗೂ ಉದಾರೀಕರಣದ ಪ್ರಭಾವ ಹೆಚ್ಚಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶವನ್ನು ಕಟ್ಟಲು ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ನಾವು ಏನನ್ನು ಉತ್ಪಾದನೆ ಮಾಡಲಾಗದ ಸ್ಥಿತಿಗೆ ತಲುಪಿದ್ದು, ದೇಶದಲ್ಲಿ ನಾವುಗಳೇ ದ್ವಿತೀಯ ದರ್ಜೆ ಪ್ರಜೆಗಳಾಗುತ್ತಿದ್ದೇವೆ. ಇದರಿಂದಾಗಿ ದೇಶ ದಲ್ಲಿ ಗಾಂಧಿ ಮಾರ್ಗಿಗಳು ಮಾತ್ರವಲ್ಲದೆ, ಪ್ರತಿ ಯೊಬ್ಬ ವಿದ್ಯಾರ್ಥಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಗಾಂಧಿ ಮಾರ್ಗ ಮರೆಗೆ: ಮೈಸೂರು ವಿವಿ ಕುಲಪತಿ ಪ್ರೊ. ಬಿ. ದಯಾನಂದ ಅಪ್ಪಣ್ಣ ಮಾನೆ ಮಾತನಾಡಿ, ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಗಾಂಧಿ ಮಾರ್ಗವನ್ನು ಮರೆಯುತ್ತಿದ್ದು, ನಿರ್ದಿಷ್ಟ ದಿನಗಳಂದು ಮಾತ್ರ ಗಾಂಧೀಜಿ ಅವರನ್ನು ನೆನೆಯಲಾಗುತ್ತಿದೆ. ಆದರೆ ಗಾಂಧಿಯನ್ನು ಮರೆಯುವುದು ದುರಂತದ ಸಂಗತಿಯಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಕಾಲೇಜು ಗಳಲ್ಲಿ ಕಡ್ಡಾಯವಾಗಿ ಗಾಂಧಿ ಕುರಿತ ಕಡ್ಡಾಯ ವಾಗಿ ಪಠ್ಯವಾಗಬೇಕಿದೆ ಎಂದ ಅವರು, ಗಾಂಧೀಜಿ ರಾಜಕೀಯ ಸನ್ಯಾಸಿ, ಪ್ರಶ್ನಾತೀತ ನಾಯಕ ರಾಗುವ ಮೂಲಕ ಜಗತ್ತಿನ ಅನೇಕ ನಾಯಕರು ಗಳಿಗೆ ಪ್ರೇರಣೆಯಾಗಿದ್ದಾರೆ. ಹೀಗಾಗಿ ಜಗತ್ತಿನಲ್ಲಿ ಸೂರ್ಯ, ಚಂದ್ರ ಇರುವವರೆಗೂ ಗಾಂಧೀಜಿ ಪ್ರಸ್ತುತರಾಗಿರುತ್ತಾರೆ ಎಂದು ಬಣ್ಣಿಸಿದರು.

ಸಮಾರಂಭದ ಅಂಗವಾಗಿ ಗಾಂಧಿ ಮಾರ್ಗಿ ಗಳಾದ ಡಾ. ಎಂ.ಜಿ. ಕೃಷ್ಣಮೂರ್ತಿ, ವೇಮಗಲ್‌ ಸೋಮಶೇಖರ್‌, ಎಚ್‌.ಎಂ. ಶಿವಣ್ಣ ಹಾಗೂ ಡಾ. ಸುರೇಂದ್ರ ಕೌಲಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ. ಆರ್‌. ರಾಜಣ್ಣ, ಪರೀûಾಂಗ ಕುಲಸಚಿವ ಪ್ರೊ. ಜೆ. ಸೋಮಶೇಖರ್‌, ಹಣಕಾಸು ಅಧಿಕಾರಿ ಪ್ರೊ. ಬಿ.ಮಹದೇವಪ್ಪ, ಪ್ರೊ. ಎಸ್‌. ಶಿವರಾಜಪ್ಪ, ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪಿ.ಎಸ್‌. ಸುರೇಶ್‌, ಸಂತಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ಮಣಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next