Advertisement

Earth Science: ಅರಣ್ಯ ಉತ್ಪನ್ನದಿಂದ ಕಬ್ಬಿಣ ಅದಿರು ಹೊರಕ್ಕೆ: ಸಿಎಂ ಸಿದ್ದರಾಮಯ್ಯ ಸೂಚನೆ

03:16 AM Oct 31, 2024 | Team Udayavani |

ಬೆಂಗಳೂರು: ಬೇರೆ ರಾಜ್ಯಗಳಲ್ಲಿ ಇರುವಂತೆ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸದೆ ಇರುವ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸುವಂತೆ ಸಿಎಂ ಸಿದ್ದರಾಮಯ್ಯ ಅರಣ್ಯ ಹಾಗೂ ಗಣಿ-ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ರಾಜಸ್ವ ಸಂಗ್ರಹಣೆ ಹೆಚ್ಚಳದ ಭಾಗವಾಗಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗಣಿ, ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಈ ಸೂಚನೆ ನೀಡಿದರು. ಅರಣ್ಯ ಇಲಾಖೆಯೊಂದಿಗಿನ ಗೊಂದಲಗಳನ್ನು ನಿವಾರಿಸಿಕೊಂಡು ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ ಅವರು, ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸಬೇಡಿ. ನಮ್ಮ ರಾಜ್ಯದಲ್ಲಿ ಇದೇ ಮಾದರಿ ಅಳವಡಿಸಿಕೊಳ್ಳಲು ಮುಂದಿನ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ತನ್ನಿ ಎಂದು ಸೂಚಿಸಿದ್ದಾರೆ.

ಆದರೆ, ಈ ಸೂಚನೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತುಸು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ತಿದ್ದುಪಡಿ ಮಾಡಿದರೆ ಈಗಿರುವ ಪ್ರತೀ ಲಾರಿಗೆ 100 ರೂ.ನಂತೆ ಫಾರೆಸ್ಟ್‌ ಚೆಕ್‌ಪೋಸ್ಟ್‌ನಲ್ಲಿ ಸಲ್ಲಿಸುವ ಪದ್ಧತಿ ನಿಲ್ಲಿಸಬೇಕಾಗುತ್ತದೆ. ಇದರಿಂದ ಸರಕಾರಕ್ಕೆ ಆದಾಯ ಖೋತಾವಾಗುತ್ತದೆಯೇ ವಿನಾ ಲಾಭವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಇದಕ್ಕೆ ಕಾನೂನು ತಿದ್ದುಪಡಿ ಮಾಡಿ ಸದನದ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸಭೆಯಲ್ಲಿ ಗಣಿ ಭೂವಿಜ್ಞಾನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ವಾಣಿಜ್ಯ ಮತ್ತು ಗಣಿ ಇಲಾಖೆ ಕಾರ್ಯದರ್ಶಿ ವಿಪುಲ್‌ ಬನ್ಸಾಲ್‌, ಅರಣ್ಯ, ಜೀವಿ ಪರಿಸ್ಥಿತಿ ಅಪರ ಮುಖ್ಯ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜಸ್ವ ಸಂಗ್ರಹಣೆ ಇಳಿಕೆ
ಗಣಿ ಇಲಾಖೆ ಪ್ರಗತಿಯು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 54ರಷ್ಟು ಇತ್ತು. ಪ್ರಸಕ್ತ ಸಾಲಿನಲ್ಲಿ ಶೇ. 46 ರಾಜಸ್ವ ಸಂಗ್ರಹಣೆ ಆಗಿದೆ. ಅರಣ್ಯ ಇಲಾಖೆಯೊಂದಿಗಿನ ಇರುವ ಗೊಂದಲಗಳನ್ನು ನಿವಾರಿಸಿಕೊಂಡು ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಸಕ್ತ ಸಾಲಿಗೆ ರಾಜಸ್ವ ಸಂಗ್ರಹಣೆ ಗುರಿ 9,000 ಕೋಟಿ ರೂ. ಅಕ್ಟೋಬರ್‌ವರೆಗಿನ ರಾಜಸ್ವ ಸಂಗ್ರಹಣೆ 4070.22 ಕೋಟಿ ರೂ. ರಾಜ್ಯದ ಅಭಿವೃದ್ಧಿಗೆ ಹಿತಾಸಕ್ತಿಗೆ ಪ್ರಾಮುಖ್ಯತೆ ನೀಡಿ. ರಾಜ್ಯದ ಹಿತಾಸಕ್ತಿಗೆ, ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ. ನಿಯಮ ಉಲ್ಲಂ ಸಿದೆ ಕ್ರಿಯಾಶೀಲತೆ ತೋರಿ ಎಂದು ಅರಣ್ಯ ಇಲಾಖೆ ಪಿಸಿಸಿಎಫ್ ಅವರಿಗೆ ಸಿಎಂ ಸೂಚನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next