Advertisement

ತುಳುನಾಡ ದರ್ಶನ ಅಪರೂಪದ ಸಂಗ್ರಹಗಾರ

11:00 AM Dec 22, 2018 | |

 ನಾಡಿನ ಅಪರೂಪದ ತುಳು ಅಧ್ಯಯನ ಕೇಂದ್ರ ಮಂಗಳೂರಿನ ಬಿ.ಸಿ.ರೋಡಿನಲ್ಲಿರುವ ಸಂಚಯ ಗಿರಿಯಲ್ಲಿದೆ. ನೂರಾರು ಅತ್ಯಪರೂಪ ವಸ್ತುಗಳ ಸಂಗ್ರಹ ಇಲ್ಲಿದೆ. ಇದನ್ನು ನೋಡುತ್ತಿದ್ದರೆ ಕರಾವಳಿಯ ಸಂಸ್ಕೃತಿಯ ದರ್ಶನವಾಗುತ್ತದೆ. 

Advertisement

ಒಳಗೆ ಕಾಲಿಟ್ಟರೆ ಯಾವುದೋ ಒಂದು ಸಾಂಸ್ಕೃತಿಕ ನಗರಕ್ಕೆ ಹೋದಂತಾಗುತ್ತದೆ.  ಅಲ್ಲಿರುವುದೆಲ್ಲಾ   ನಾವು ಕಂಡಿಲ್ಲದ ವಸ್ತುಗಳೇ. ಒಂದೊಂದು ವಸ್ತುಗಳ ಹಿಂದೆಯೂ ಒಂದೊಂದು ಇತಿಹಾಸ, ಸಂಸ್ಕೃತಿ ಹರಡಿಕೊಂಡಿದೆ. ನೋಡುತ್ತಾ ಹೋದಂತೆ ವಿಶಿಷ್ಟ ಮಾಹಿತಿಗಳು ತಿಳಿಯುತ್ತಾ ಹೋಗುತ್ತದೆ. 

ಇದುವೇ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ವಸ್ತು ಸಂಗ್ರಹಾಲಯ.ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್‌ನ‌ ಸಂಚಯ ಗಿರಿಯಲ್ಲಿ ಈ ಅಧ್ಯಯನ ಕೇಂದ್ರವಿದೆ. ನಾಶಗೊಂಡಿರುವ, ಕಣ್ಮರೆಯಾಗಬಹುದಾದ ತುಳು ಸಂಸ್ಕೃತಿಯನ್ನು ಭೌತಿಕ, ಸಾಂಸ್ಕೃತಿಕ ರೂಪದಲ್ಲಿ ಕಾಪಿಡುವ ತವರು ನೆಲೆಯಂತಿದೆ ಈ ಅವಳಿ ಸಂಸ್ಥೆ. 

Advertisement

ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಮೂರು ಸಾವಿರಕ್ಕೂ ಹೆಚ್ಚು ಇತಿಹಾಸ ಹಾಗೂ ಜಾನಪದ ವಸ್ತುಗಳ ಸಂಗ್ರಹವನ್ನು ಇಲ್ಲಿ ಕಾಣಬಹುದು. ಸ್ವಾತಂತ್ರ್ಯ ಹೋರಾಟಗಾರ್ತಿ ಅಬ್ಬಕ್ಕಳ  ಹೆಸರಿನಲ್ಲಿ ಕೇಂದ್ರ ತೆರೆಯಬೇಕು ಎಂಬ ಉದ್ದೇಶದಿಂದ ಅಬ್ಬಕ್ಕಳ ಹೆಸರನ್ನೇ ಈ ಕೇಂದ್ರಕ್ಕೆ ನಾಮಕರಣ ಮಾಡಲಾಗಿದೆಯಂತೆ. ಈ ತುಳು ಅಧ್ಯಯನ ಕೇಂದ್ರದ ರೂವಾರಿ ಬಂಟ್ವಾಳದ ಪೊ›. ತುಕಾರಾಂ ಪೂಜಾರಿ. ಅವರು ಸ್ವಂತ ದುಡಿಮೆಯಿಂದಲೇ ಈ ಕನಸಿನ ಕೂಸನ್ನು ಸಾಕುತ್ತಿದ್ದಾರೆ. 

ಈ ಸಂಗ್ರಹಾಲಯ ಸ್ಥಾಪನೆಯಾದದ್ದು 1995ರಲ್ಲಿ. 2008 ರಲ್ಲಿ ಶಾಶ್ವತ ಕಟ್ಟಡ ದೊರಕಿತು.  2011ರಲ್ಲಿ ರಾಣಿ ಅಬ್ಬಕ್ಕ ಕಲಾಗ್ಯಾಲರಿ ಉದ್ಘಾಟನೆಯಾಯಿತು.  ಎಸ್‌ಯು ಪಣಿಯಾಡಿ ಗ್ರಂಥಾಲಯ ಮತ್ತು ನಾಣ್ಯಶಾಸ್ತ್ರ ವಿಭಾಗ  2017ರಲ್ಲಿ ವಿಸ್ತರಣೆಗೊಂಡಿತು.

ಏನೇನಿದೆ?
ಇಲ್ಲಿರುವ ವಾಟರ್‌ ಕ್ಲಾಕ್‌ ಹಿಂದಿನ ಕಾಲದಲ್ಲಿ ಸಮಯ ತಿಳಿಯಲು ಬಳಸುತ್ತಿದ್ದ ತುಳುವ ಗಡಿಯಾರ.  16 ನೇ ಶತಮಾನದಲ್ಲಿ ಬ್ಯಾಬಿಲೋನಿಯ ಮತ್ತು ಈಜಿಪ್ಟ್ಗಳಲ್ಲಿ ಬಳಸುತ್ತಿದ್ದ ಈ ಮಾದರಿಯ ಗಡಿಯಾರವನ್ನು ತುಳುವರೂ ಬಳಸುತ್ತಿದ್ದರಂತೆ. , ನೀರಿನ ನಿರ್ಧಿಷ್ಟ ಹರಿವಿನ ಆಧಾರದ ಮೇಲೆ ಸಮಯ ತಿಳಿದುಕೊಳ್ಳುತ್ತಿದ್ದರಂತೆ. 

ತುಳುವರ ಮರದ ತೊಟ್ಟಿಲು ಹೇಳುವ ಕಥೆಯೇ ಬೇರೆ.  ತೊಟ್ಟಿಲ ನಿರ್ಮಾಣದಲ್ಲೂ ವಿಶೇಷತೆಯಿದೆ. ರಾಜ ಮಹಾರಾಜರ ಅರಮನೆಗಳಲ್ಲಿ ಮಗುವಿಗೆ ಚಿನ್ನದ ಲೋಹದ ತೊಟ್ಟಿಲುಗಳನ್ನು ಬಳಸುತ್ತಿದ್ದರೆ, ಬಡವರು ಆಯದ ಮರದ ತೊಟ್ಟಿಲನ್ನು ಬಳಸುತ್ತಿದ್ದರು. ಆಯದ ತೊಟ್ಟಿಲು ಅಂದ್ರೆ ಇಂತಿಷ್ಟೇ ಉದ್ದ ಅಗಲ ಇರಬೇಕು ಎಂಬ ಲೆಕ್ಕಾಚಾರವಿದೆ. ಈ ಆಯದ ತೊಟ್ಟಿಲ ನಿರ್ಮಾಣಕ್ಕೆ ಮಾವು, ಹಲಸು, ಕಾಸರಕ ಹಾಳೆ, ಕೊಂದೆ ಹೀಗೆ ಐದು ಜಾತಿಯ ಮರಗಳನ್ನು ಬಳಸುತ್ತಿದ್ದರಂತೆ. ತಲೆಯ ಭಾಗ, ಕೆಳಭಾಗ, ಎಡ ಬದಿ ಇಂಥದ್ದೇ ಮರಗಳನ್ನು ಬಳಸಬೇಕು ಎಂಬ ಕ್ರಮವಿತ್ತಂತೆ. ಅಲ್ಲದೆ, ತೊಟ್ಟಿಲ ಕೆಳಭಾಗಕ್ಕೆ ಬಳಸಲಾಗುತ್ತಿದ್ದ ಮರ 
ಯಾವುದೆಂದು ತಿಳಿದುಕೊಂಡರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಈ ತೊಟ್ಟಿಲಿನ ಜೊತೆ ತುಳು ಶವಸಂಸ್ಕಾರದ ಮತ್ತೂಂದು ಕಥೆ ಸೇರಿಕೊಳ್ಳುತ್ತದೆ. ತುಳುವರ ಶವಸಂಸ್ಕಾರದಲ್ಲಿ ಅದೇ ದಿನ ಹಸಿ ಮಾವಿನ ಮರವನ್ನು ಕಡಿದು, ಕಾಷ್ಠದ ತಳಬಾಗದಲ್ಲಿ ಬಳಸಲಾಗುತ್ತದಂತೆ. ಹೀಗೆ ಅರೆಬೆಂದ ಮಾವಿನ ಮರದ ತುಂಡನ್ನು ತೊಟ್ಟಿಲು ನಿಮಾಣದಲ್ಲಿ ಬಳಸುವ ಕ್ರಮವಿತ್ತಂತೆ.

ರಾತ್ರಿ ಕೃಷಿ ಕೆಲಸ ಮುಗಿಸಿ ಮನೆಗೆ ಹಿಂದಿರುವಾಗ ಪ್ರಾಣಿಗಳನ್ನು ಹೆದರಿಸಲು ಬಳಸಲಾಗುತ್ತಿದ್ದ ಮೂತಗೋಲು, ಕಪ್ಪಲು, ನೇಗಿಲು, ನಡರ್‌ (ಮಣ್ಣಿನ ಒಲೆ), ಕದಿಕೆ, ಕಣಜ (ಭತ್ತ ಸಂಗ್ರಹ ಮಾಡುವುದು), ಪಲಾಯಿ (ಗ¨ªೆ ಉತ್ತ ಬಳಿಕ ಸಮತಟ್ಟು ಮಾಡುವ ಸಾಧನ), ಎತ್ತರದ ಜಾಗದಲ್ಲಿ ಮಣ್ಣನ್ನು ಜಾರಿಸುವುದಕ್ಕಾಗಿ ಉಪಯೋಗಿಸುತ್ತಿದ್ದ ಓಡ ಮರಾಯಿ, ಕರ ಕೈಲ… ಬಿದಲೆ ನೆಸಲೆ, ಅಡ್ಯರ ಪಲ್ಲಯಿ ಗದ್ದವು ಬಾವಡೆ ಇಂಥಹ ಸಾವಿರಾರು ಅಧ್ಯಯನಯೋಗ್ಯ ವಸ್ತುಗಳು ಈ ಕೇಂದ್ರದ ಆಕರ್ಷಣೆ. 

ಭಯಂಕರ ಸೌಂಡು ಮಾಡುವ ಹುಲಿ ಓಡಿಸುವ ಪುಟ್ಟ ಸಾಧನದ ಹಿಂದೆ ಹುಲಿ ಪುಕ್ಕಲ ಪ್ರಾಣಿ ಎನ್ನುವಲ್ಲಿಂದ ಹಿಡಿದು, 2000 ಹುಲಿ ಹೊಡೆದ ಫ‌ಕೀರ ಗೌಡನವರೆಗೆ ಹತ್ತು ಹಲವು ಸಂಸ್ಕೃತಿಯ ಮುಖ, ತುಳು ಬದುಕಿನ ಕಥೆಗಳನ್ನು ಹೇಳುವ ವಸ್ತುಗಳು ಇಲ್ಲಿ ಅನಾವರಣಗೊಂಡಿವೆ. 

ಈ ಅಪರೂಪದ ಅಧ್ಯಯನ ಕೇಂದ್ರದ ಕುರಿತು ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಹಾಗಾಗಿ, ಎಷ್ಟೋಜನಕ್ಕೆ ಇಂಥದೊಂದು ಅಪರೂಪದ  ಸಂಸ್ಥೆ ಇದೆ ಅನ್ನೋದೇ ತಿಳಿದಿಲ್ಲ ಎನ್ನುವುದು ಪೂಜಾರಿ ಅವರ ಆರೋಪ. 

ಶುಭಾಷಯ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next