ಬೆಂಗಳೂರು: ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮೂಲಕ ಬಂಡೆ ಕ್ವಾರಿಯನ್ನು ಉದ್ಯಾನವಾಗಿ ಪರಿವರ್ತಿಸಿರುವ ಬಾಗಲೂರಿನ ಕ್ವಾರಿ ಪ್ರದೇಶಕ್ಕೆ ಮೇಯರ್ ಆರ್.ಸಂಪತ್‌ರಾಜ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ ಯಲಹಂಕ ವಲಯದ ಬೆಳ್ಳಳ್ಳಿ, ಮಿಟ್ಟಗಾನಹಳ್ಳಿ ಹಾಗೂ ಬಾಗಲೂರು ಬಂಡೆ ಕ್ವಾರಿಗಳಿಗೆ ಭೇಟಿ ನೀಡಿದ ಅವರು, ಬಂಡೆ ಕ್ವಾರಿಯನ್ನು ಉದ್ಯಾನವಾಗಿ ಪರಿವರ್ತಿಸಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಗಲೂರು ಬಳಿಯ 12 ಎಕರೆ ಪ್ರದೇಶದಲ್ಲಿನ ಎರಡು ಕ್ವಾರಿಗಳನ್ನು ವೈಜ್ಞಾನಿಕವಾಗಿ ಭರ್ತಿ ಮಾಡಿ ಉದ್ಯಾನ ಹಾಗೂ ಆಟದ ಮೈದಾನ ನಿರ್ಮಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ರಾಜ್ಯ ಸರ್ಕಾರ 16 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಎರಡು ಕ್ವಾರಿಗಳ ಪೈಕಿ ಈಗಾಗಲೇ 1.32 ಎಕರೆ ಪ್ರದೇಶದ ಕ್ವಾರಿಯನ್ನು ತ್ಯಾಜ್ಯದಿಂದ ಭರ್ತಿ ಮಾಡಿ ಉದ್ಯಾನವಾಗಿ ಪರಿವರ್ತಿಸಿದ್ದು, ನೂರಾರು ಪ್ರಭೇದದ ಗಿಡಗಳನ್ನು ನೆಟ್ಟು ಉದ್ಯಾನದ ಮಧ್ಯ ಭಾಗದಲ್ಲಿ ಲಾನ್ ಬೆಳೆಸಿ, ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ.
ವೈಜ್ಞಾನಿಕ ಭೂ ಭರ್ತಿ ವಿಧಾನ : ಮೊದಲಿಗೆ ಕ್ವಾರಿಯಲ್ಲಿನ ತ್ಯಾಜ್ಯ ಹಾಗೂ ನೀರು ತೆಗೆದು, ಮಣ್ಣಿನಿಂದ ಆ ಪ್ರದೇಶವನ್ನು ಸಮತಟ್ಟುಗೊಳಿಸಲಾಗುತ್ತದೆ. ನಂತರ ತ್ಯಾಜ್ಯದಿಂದ ಸೃಷ್ಟಿಯಾಗುವ ಲೀಚೆಟ್ ನೀರು ಸಂಗ್ರಹಿಸಲು ಟ್ಯಾಂಕ್ ನಿರ್ಮಿಸಿ, ಭೂಮಿಯೊಳಗೆ ಯಾವುದೇ ರೀತಿಯ ಲೀಚೆಟ್ ಪ್ರವೇಶಿಸದಂತೆ ವೈಜ್ಞಾನಿಕವಾಗಿ ಕ್ಲೇ ಲೈನರ್, ಎಚ್‌ಡಿಪಿಇ ಮೆಂಬ್ರೇನ್ ಹಾಗೂ ಜಿಇಒ ಮೆಂಬ್ರೇನ್ ಎಂಬ ಪದರಗಳನ್ನು ಹಾಕಲಾಗುತ್ತದೆ.
ಆನಂತರದಲ್ಲಿ ನಿರಂತರವಾಗಿ ಕ್ವಾರಿ ಭರ್ತಿಯಾಗುವವರೆಗೆ ಒಂದು ಪದರ ಮಣ್ಣು, ಮತ್ತೂಂದು ಪದರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಕ್ವಾರಿ ಭರ್ತಿಯಾದ ಬಳಿಕ ತ್ಯಾಜ್ಯ ಹಾಗೂ ಮಣ್ಣು ಹದವಾಗಲು ನಾಲ್ಕು ತಿಂಗಳು ಬಿಟ್ಟು, ಮುಂದಿನ ದಿನಗಳಲ್ಲಿ ಪದರ ಕುಸಿಯದಂತೆ ಬೃಹತ್ ರೋಲರ್ ಮೂಲಕ ಪ್ರದೇಶವನ್ನು ಸಮತಟ್ಟು ಮಾಡಲಾಗುತ್ತದೆ. ಬಳಿಕ ಆದರ ಮೇಲೆ ಎರಡು ಮೀಟರ್ ಗುಣಮಟ್ಟದ ಮಣ್ಣು ಸುರಿದು ಹದ ಮಾಡಿ ಉದ್ಯಾನ ನಿರ್ಮಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ಯಾಸ್ ಪೈಪ್‌ಲೈನ್ ಅಳವಡಿಕೆ: ಕ್ವಾರಿಯಲ್ಲಿ ಸಾವಿರಾರು ಟನ್ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಮಿಥೇನ್ ಗ್ಯಾಸ್ ಉತ್ಪತ್ತಿಯಾಗುವ ಸಾಧ್ಯತೆಯಿದೆ. ಹಾಗಾಗಿ ಕ್ವಾರಿ ಪ್ರದೇಶದಲ್ಲಿ ಉತ್ಪತ್ತಿಯಾಗುವ ಮಿಥೇನ್ ಗ್ಯಾಸ್ ಹೊರಬರಲು ವೈಜ್ಞಾನಿಕವಾಗಿ ಗ್ಯಾಸ್ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದ್ದು, ಪೈಪ್‌ಗ್ಳ ಮೂಲಕ ಹೊರಬರುವ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಲು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.
ಬಾಗಲೂರಿನ ಕ್ವಾರಿಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ 1.36 ಎಕರೆ ಪ್ರದೇಶದ ಕ್ವಾರಿಯನ್ನು ಉದ್ಯಾನವಾಗಿ ಪರಿವರ್ತಿಸಲಾಗಿದೆ. ಉಳಿದ ಕ್ವಾರಿಗಳನ್ನು ಸಹ ವೈಜ್ಞಾನಿಕವಾಗಿ ಭೂ ಭರ್ತಿ ಮಾಡಿ ಸಾರ್ವಜನಿಕರಿಗೆ
ಉಪಯೋಗವಾಗುವಂತೆ ಆಟದ ಮೈದಾನ ಅಥವಾ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು.
●ಆರ್.ಸಂಪತ್‌ರಾಜ್, ಮೇಯರ್