ಬೆಂಗಳೂರು: ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಈಗ ಪಾಲಿಕೆಯ ಆಡಳಿತದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇಲ್ಲಿಯವರೆಗೆ ನಗರದಲ್ಲಿ ಸೋಂಕು ತಡೆಯುವಲ್ಲಿ ಪಾಲಿಕೆಯ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಈಗ ಪಾಲಿಕೆಯ ಕೇಂದ್ರ ಕಚೇರಿಯ ಸಂಪರ್ಕದಲ್ಲಿದ್ದ ಅಧಿಕಾರಿಗಳಿಗೂ ಸೋಂಕು ಆತಂಕ ಎದುರಾಗಿದೆ.
ಪಾದರಾಯನಪುರದ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಾಲಿಕೆಯ ವಿಶೇಷ ಆಯುಕ್ತ ರವೀಂದ್ರ ಹಾಗೂ ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ನಾಗೇಂದ್ರ ನಾಯಕ್ ಅವರನ್ನು ಸದ್ಯ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಪಾಲಿಕೆಯ ಸಹಾಯ ಕಂದಾಯ ಅಧಿಕಾರಿಯೊಬ್ಬರ ಪತ್ನಿಗೂ ಭಾನುವಾರ ಸೋಂಕು ದೃಢಪಟ್ಟಿದೆ.
ಪಾಲಿಕೆಯ ವಿಶೇಷ ಆಯುಕ್ತ ರವೀಂದ್ರ ಹಾಗೂ ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತ ನಾಗೇಂದ್ರ ನಾಯಕ್ ಅವರು ಇತ್ತೀಚೆಗೆ ಬಿಬಿಎಂಪಿಯ ವಿವಿಧ ಅಧಿಕಾರಿಗಳನ್ನು ಭೇಟಿಯಾಗಿದ್ದರು ಇದು ಈಗ ಪಾಲಿಕೆಯ ಆಡಳಿತ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಈ ಅಧಿಕಾರಿಗಳೊಂದಿಗೆ ನೇರ ಮತ್ತು ಪರೋಕ್ಷ ಸಂಪರ್ಕದಲ್ಲಿದ್ದ ಅಧಿಕಾರಿಗಳಿಗೂ ಸೋಂಕು ಭೀತಿ ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳು ಆಡಳಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಪಾಲಿಕೆ ಸದಸ್ಯ ಇಮ್ರಾನ್ ವಿರುದ್ಧ ಎಫ್‌ಐಆರ್
ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗುವಂತೆ ತಿಳಿಸಲು ಹೋದ ವೈದ್ಯಕೀಯ ಸಿಬ್ಬಂದಿಯ ಸೂಚನೆ ಗಳನ್ನು ನಿರಾಕರಿಸಿ ಸರ್ಕಾರದ ಆದೇಶಗಳನ್ನು ಉಲ್ಲಂ ಸಿದ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ವಿರುದ್ಧ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಬಿಎಂಪಿ ವೈದ್ಯರಾದ ಡಾ. ಯೋಗೇಶ್ ನೀಡಿದ ದೂರಿನ ಅನ್ವಯ ಇಮ್ರಾನ್ ಪಾಷಾ ಮತ್ತಿತರರ ವಿರುದ್ಧ ಸರ್ಕಾರದ ಆದೇಶಗಳ ಉಲ್ಲಂಘನೆ, ಕಾನೂನುಬಾಹಿರವಾಗಿ ಜನರನ್ನು ಗುಂಪು ಸೇರಿಸಿರುವುದು,
ಸಾಮಾಜಿಕ ಅಂತರ ಕಾಪಾಡದ ಆರೋಪ ಹಿನ್ನೆ ಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿ ಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಿ ತಿಳಿಸಿದ್ದಾರೆ. ಸೋಂಕು ಧೃಡವಾದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷಾ ಅವರನ್ನು ಆಸ್ಪತ್ರೆಗೆ ದಾಖಲಾಗಲು ಸಹಕಾರ ನೀಡಿರಲಿಲ್ಲ. ಜತೆಗೆ ಹಲವು ಜನ ಗುಂಪು ಸೇರಿ ಸಾಮಾಜಿಕ ಅಂತರ ಪಾಲಿಸದೆ ಗಲಾಟೆ ನಡೆಸಿದ್ದಾರೆ ಎಂಬ ಆರೋಪವಿದೆ.