ಹುಬ್ಬಳ್ಳಿ: ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉತ್ಪನ್ನಗಳು ಗ್ರಾಹಕರ ಮನ ಗೆಲ್ಲಬೇಕಾದರೆ ಗುಣಮಟ್ಟ, ಮಾರ್ಕೆಟಿಂಗ್, ವಿಭಿನ್ನತೆ, ಹೊಸತನ ಹೊಂದಿರುವುದು ಬಹಳ ಮುಖ್ಯವೆಂದು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ ಹೇಳಿದರು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಆಯೋಜಿಸಿರುವ ಉದ್ಯಮಿ ಮೆಗಾ ಉತ್ಸವ ಹಾಗೂ ಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ(ಎಸ್‌ಎಸ್‌ಪಿಸಿಎಲ್) 2ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉತ್ಪಾದಕರು ಉತ್ಪನ್ನಗಳನ್ನು ಗುಣಮಟ್ಟದೊಂದಿಗೆ ಯಾವ ರೀತಿ ವಿಭಿನ್ನವಾಗಿ ಸಿದ್ಧಪಡಿಸಿಕೊಳ್ಳಬೇಕೆಂಬುದು ಮುಖ್ಯ. ಗುಣಮಟ್ಟದಲ್ಲಿ ಯಾವುದೇ ರೀತಿ ಹೊಂದಾಣಿಕೆ ಮಾಡಿಕೊಳ್ಳದೆ ಹೊಸತನ ಅಳವಡಿಸಿಕೊಂಡು ತಯಾರಿಸಬೇಕು. ಅಂದಾಗ ಕೊಳ್ಳುವವರನ್ನು ಸೆಳೆಯಲು ಸಾಧ್ಯ. ಉತ್ಪನ್ನಗಳಲ್ಲಿನ ಸುಧಾರಣೆ ನಿರಂತರವಾಗಿರಬೇಕು. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ಪನ್ನಗಳ ಪ್ರಚಾರ ಮಾಡುವುದು ಅತೀ ಅವಶ್ಯ. ಶೀಘ್ರವೇ ಎಸ್‌ಎಸ್‌ಪಿಸಿಎಲ್‌ನ ಆನ್‌ಲೈನ್ ಪೋರ್ಟಲ್ ಬಿಡುಗಡೆ ಮಾಡಲಾಗುವುದು ಎಂದರು.
ದೇಶಪಾಂಡೆ ಫೌಂಡೇಶನ್ ಸಿಇಒ ಕಚೇರಿ ಕಾರ್ಯನಿರ್ವಾಹಕ ಸಂದೀಪ ಸಬರವಾಲ ಮಾತನಾಡಿ, ಉತ್ಪನ್ನಗಳನ್ನು ತಯಾರಿಸುವ ಮಹಿಳಾ ಗುಂಪುಗಳು ತೆಗೆದುಕೊಳ್ಳುವ ಸಾಲಕ್ಕೆ ಕೇಂದ್ರ ಸರಕಾರ ಶೇ.50 ಸಬ್ಸಿಡಿ ನೀಡುತ್ತಿದೆ. ಬಡ್ಡಿದರ ಶೇ.8.5ರಷ್ಟಾಗಿದೆ. ಮಹಿಳಾ ಉದ್ಯಮದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಸ್‌ಎಸ್‌ಪಿಸಿಎಲ್ 254 ಸದಸ್ಯರನ್ನು ಹೊಂದಿದ್ದು, ಈ ಸಂಸ್ಥೆಯು ಸಹಿತ ಲಿಜ್ಜತ್ ಪಾಪಡ್ ಕಂಪನಿ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು. ಇನ್ನೈದು ವರ್ಷಗಳಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಹೆಸರು ಮಾಡಬೇಕು ಎಂದರು.
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಕಾರ್ಯಕ್ರಮದ ಸಹಾಯಕ ವ್ಯವಸ್ಥಾಪಕಿ ರಾಜೇಶ್ವರಿ ಲದ್ದಿ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಎಸ್‌ಎಸ್‌ಪಿಸಿಎಲ್‌ಗೆ ಹೊಸ ನಿರ್ದೇಶಕರನ್ನು ನೇಮಿಸಲಾಯಿತು. ಮಹಿಳಾ ಉದ್ಯಮದಾರರಿಗೆ ಬಿಸಿನೆಸ್ ಸಖೀ (ಬಿ-ಸಖೀ) ಗೌರವ ನೀಡಲಾಯಿತು. ಈರಣ್ಣ ರೊಟ್ಟಿ, ಪುಷ್ಪಾಂಜಲಿ, ಸುನಿತಾ ಪಾಟೀಲ, ಸಂಜನಾ ಪಾಯದೆ, ಚಿನ್ಮಯಿ ಪಾಟೀಲ, ಶಾರದಾ, ರುದ್ರಮ್ಮ, ಸುನಂದಾ ಮೊದಲಾದವರಿದ್ದರು. ಪ್ರವೀಣಕುಮಾರ ನಿಶಾನಿಮಠ ನಿರೂಪಿಸಿದರು. ಉತ್ಸವದಲ್ಲಿ70ಕ್ಕೂ ಹೆಚ್ಚು ಮಳಿಗೆಗಳು ಇವೆ. ಮಾ. 15ರ ವರೆಗೆ ನಡೆಯಲಿದೆ.