Advertisement

ಗುಣಾತ್ಮಕ ಸಂಶೋಧನೆ ಬರ್ತಿಲ್ಲ

03:12 PM Feb 01, 2018 | Team Udayavani |

ಚಿತ್ರದುರ್ಗ: ದೇಶದಲ್ಲಿ 121 ಕೋಟಿ ಜನಸಂಖ್ಯೆಯ ಮೆದುಳುಗಳಿದ್ದರೂ ಗುಣಾತ್ಮಕ ಸಂಶೋಧನೆಗಳು ಹೊರಬರುತ್ತಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಜೋಶಿ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ “ವಿಶ್ವದೆಡೆಗೆ ಪಯಣ’ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ನೆರೆ ದೇಶ ಚೀನಾದಲ್ಲಿ ಗುಣಾತ್ಮಕ ವಿಜ್ಞಾನದ ಸಂಶೋಧನೆಗಳು ಹೊರ ಹೊಮ್ಮುತ್ತಿದೆ. ಅದರ ಫಲ ಆ ದೇಶಕ್ಕೆ ಸಿಗುತ್ತಿದೆ. ಇಡೀ ಭಾರತದಲ್ಲಿ 1 ಲಕ್ಷ ಸಂಶೋಧನೆ ಮಾಡಿದ ಡಾಕ್ಟರೆಟ್‌ ಪದವೀಧರರಿದ್ದಾರೆ. ಇವರಲ್ಲಿ 91 ಸಾವಿರ ಸಂಶೋಧನಾ ಡಾಕ್ಟರೆಟ್‌ ಪದವೀಧರರು ವಿದೇಶಗಳಲ್ಲಿ ಹೋಗಿ ನೆಲೆಸಿದ್ದಾರೆ. ಅವರನ್ನು ವಾಪಸ್‌ ದೇಶಕ್ಕೆ ಕರೆಸುವ ಪ್ರಯತ್ನ ಮಾಡಿದಾಗ ಕೇವಲ 362 ಮಂದಿ ವಾಪಸ್‌ ದೇಶಕ್ಕೆ ಆಗಮಿಸಿದ್ದಾರೆ. ಇದು ನಮ್ಮ ದೇಶದ ಸಂಶೋಧನಾ ವಿದ್ಯಾರ್ಥಿಗಳ ಮನಸ್ಥಿತಿ ಎಂದರು.

ಯಾಂತ್ರಿಕ ಚಿಂತನೆಗಳ ಫಲವಾಗಿ ಹೊಸ ಸಂಶೋಧನೆ, ಹೊಸತನ ಸೃಷ್ಟಿಯಾಗುತ್ತಿಲ್ಲ. ತಂತ್ರಜ್ಞಾನದಲ್ಲಿ ಚೀನಾ ಅತಿವೇಗವಾಗಿ ಬೆಳೆಯುತ್ತಿದೆ ಎನ್ನುವುದರಲ್ಲೇ ನಮ್ಮ ಕಾಲ ವ್ಯರ್ಥ ಮಾಡುತ್ತಿದ್ದೇವೆ. ಚೀನಾದವರು 2012ರಲ್ಲಿ 980 ಸಂಶೋಧನಾ ಪ್ರಬಂಧ ಮಂಡಿಸಿದರೆ, ನಮ್ಮವರು ಕೇವಲ 153 ಮಂಡಿಸಿದ್ದಾರೆ. ಶ್ರಮ ವಹಿಸಿ ಕೆಲಸ ಮಾಡಿದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಚೀನಾ ಪ್ರತಿ ಹಂತದಲ್ಲಿ ಸಾಕ್ಷೀಕರಿಸುತ್ತಿದೆ ಎಂದು ತಿಳಿಸಿದರು.

ಸಾಮಾನ್ಯಜ್ಞಾನ ವೃದ್ಧಿಸಿಕೊಳ್ಳದ ವಿದ್ಯಾರ್ಥಿಗಳು ಹಳೆ ನೋಟ್ಸ್‌ಗಳಿಗೆ ಗಂಟು ಬಿದ್ದು ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ. ಮಳೆ ಹೇಗೆ ಬರುತ್ತೆ, ಬರ ಏಕೆ ಬರುತ್ತೆ, ಆಗಸದಲ್ಲಿ ಮೋಡ ಹೇಗೆ ಏಳುತ್ತೇವೆ ಎನ್ನುವ ಸಂಪೂರ್ಣ ಚಿತ್ರಣ ಯಾರಲ್ಲೂ ಇಲ್ಲ. ಈ ರೀತಿಯ ಹೊಸ ಚಿಂತನೆಗಳನ್ನು ವಿಜ್ಞಾನ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದರು. ಹೊಸ ವಿಷಯ ತಿಳಿದು ಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. ನಿಮ್ಮಲ್ಲಿನ ಸೋಂಬೆರಿತನ ಬಿಟ್ಟು ಸಾಮರ್ಥ್ಯ ಅರಿತುಕೊಂಡರೆ ಸಾಕು, ಅಸಾಧ್ಯ ಎನ್ನುವುದೇ ಇರುವುದಿಲ್ಲ. ಸುಖಾ ಸುಮ್ಮನೆ ಮಾತು, ಆರೋಪಗಳಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು ಕೆಲಸದ ಕಡೆ ಗಮನಹರಿಸಬೇಕು ಎಂದು ಹೇಳಿದರು.

ಭಾರತ ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಯಲ್ಲಿ ಶೇ. 44ರಷ್ಟು ಯುವಕರ ಪಾಲಿದೆ. 35 ವಯಸ್ಸಿನೊಳಗೆ ಸಾಧನೆ ಮಾಡಿ ಮುಗಿಸಬೇಕು. ಆದ್ದರಿಂದ ಪ್ರತಿ ಕ್ಷಣವೂ ಬಹು ಮುಖ್ಯ. ವಿದ್ಯಾರ್ಥಿಗಳು ಸದಾ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಕಂಡರೆ ಹೆದರಿ ಹೋಗಬೇಕು. ಆ ರೀತಿ ನೀವು ಅವರನ್ನು ಕಾಡಿಸಬೇಕು. ಆಗ ಮಾತ್ರ ಅವರು ನಿತ್ಯ ಓದಿಕೊಂಡು ತರಗತಿಗೆ ಬರುತ್ತಾರೆ ಎಂದರು. 

Advertisement

ಕೃತಕ ಉಪಗ್ರಹಗಳು, ಬಾಹ್ಯಾಕಾಶ ಹಾಗೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಮಾಡೆಲ್‌, ಪೇಂಟಿಂಗ್‌, ಚಿತ್ರಕಲೆ, ಬಾಹ್ಯಕಾಶಯಾನದಲ್ಲಿ ಭಾರತದ ಸಾಧನೆ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ, ಬಾಹ್ಯಾಕಾಶ ಮತ್ತು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ರಸಪ್ರಶ್ನೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ವಿಜ್ಞಾನಿಗಳಾದ ಬೆಂಗಳೂರು ವಿವಿಯ ಡಾ| ಕಂಸಾಲಿ ನಾಗರಾಜ್‌, ಪ್ರೊ| ಬಿ.ವಿ. ಅಪ್ಪಾರಾವ್‌, ಡಾ| ಕೆ.ಕೆ. ಕಾಮಾನಿ, ಪ್ರಾಚಾರ್ಯೆ ಪ್ರೊ| ಟಿ.ವಿ. ಸಣ್ಣಮ್ಮ ಇದ್ದರು. 

ದಿನದ 24 ಗಂಟೆ ಪುಸ್ತಕ ಹಿಡಿರುತ್ತೇನೆ ಎನ್ನುವವರಿದ್ದಾರೆ. ಆದರೆ ಎಷ್ಟು ಗಂಟೆಗಳ ಕಾಲ ಗುಣಾತ್ಮಕವಾಗಿ ಓದಿದೆ ಎನ್ನುವವರ ಸಂಖ್ಯೆ ವಿರಳ. ಇಂದಿಗೂ ಮತ್ತೂಬ್ಬ ವಿಶ್ವೇಶ್ವರಯ್ಯನವರನ್ನು ಸೃಷ್ಟಿಸಲು ನಮ್ಮಿಂದ ಆಗಿಲ್ಲ.
 ಶ್ರೀನಾಥ್‌ ಜೋಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next