Advertisement

ಇಂಡೋ ಪೆಸಿಫಿಕ್‌ ಪ್ರಾಂತ್ಯದಲ್ಲಿ ಚೀನ ದರ್ಪ ಅಂತ್ಯಕ್ಕೆ ಕ್ವಾಡ್‌ ಸಂಕಲ್ಪ

10:41 AM Oct 07, 2020 | sudhir |

ಹೊಸದಿಲ್ಲಿ: ಇಂಡೋ ಪೆಸಿಫಿಕ್‌ ಪ್ರಾಂತ್ಯದಲ್ಲಿ ಚೀನದ ಉದ್ಧಟತನವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ನೀಡಲು ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಟ್ರೇಲಿಯಾ ನಿರ್ಧರಿಸಿವೆ.

Advertisement

ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್‌, ಅಮೆರಿಕ ರಾಷ್ಟ್ರಗಳ ವಿದೇಶಾಂಗ ಸಚಿವರ ಚತುಷ್ಕೋನ ಭದ್ರತಾ ಸಮ್ಮೇಳನ (ಕ್ವಾಡ್‌ ಸಮ್ಮೇಳನ)ದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಭೆಯಲ್ಲಿ, ಭಾರತದ ವಿದೇಶಾಂಗ ಸಚಿವ ಜೈಶಂಕರ್‌, ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪಿಯೂ , ಆಸ್ಟ್ರೇಲಿಯಾದ ಮ್ಯಾರಿಸ್‌ ಪಾಯ್ನೆ ಹಾಗೂ ಜಪಾನ್‌ನ ತೊಷಿಮಿಟ್ಸು ಮೊಟೆಗಿ ಉಪಸ್ಥಿತರಿದ್ದರು. ಸಮ್ಮೇಳನದ ಅನಂತರ ಅಧಿಕೃತ ಪ್ರಕಟನೆ ಹೊರಡಿಸಿರುವ ಜಪಾನ್‌, “ಇಂಡೋ ಪೆಸಿಫಿಕ್‌ ಪ್ರಾಂತ್ಯದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಕ್ವಾಡ್‌ ರಾಷ್ಟ್ರಗಳು ಸಮ್ಮತಿಸಿವೆ’ ಎಂದಿದೆ.

ಪರಸ್ಪರ ಗೌರವದ  ಸೂತ್ರದ ವಿಶ್ವಕ್ಕೆ ಕಟಿಬದ್ಧ
ಸಮ್ಮೇಳನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್‌, “”ವಿಶ್ವದಲ್ಲಿ ಎಲ್ಲ ದೇಶಗಳು ಪರಸ್ಪರರ ಭಾವನೆಗಳನ್ನು ಗೌರವಿಸುವ, ಗಡಿ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವಂಥ, ನಿರ್ದಿಷ್ಟ ನಿಯಮಿತ ರೂಪದಲ್ಲಿ ಸಾಗುತ್ತಿರುವಂಥ ವಾತಾವರಣ ನಿರ್ಮಾಣವಾಗಬೇಕು. ಅಂಥದ್ದೊಂದು ಸೂತ್ರದಡಿ ಇಡೀ ವಿಶ್ವ ಮುನ್ನಡೆಯುವಂತಿರಬೇಕು. ಅಂಥ ನಿಯಮ ಬದ್ಧ ಜಗತ್ತಿನ ನಿರ್ಮಾಣಕ್ಕೆ ಭಾರತ ಎಂದಿಗೂ ಕಟಿಬದ್ಧವಾಗಿದೆ” ಎಂದರು.
“”ವೈವಿಧ್ಯಮಯ ಸಂಸ್ಕೃತಿಗಳು, ಬಹು ಸಮುದಾಯಗಳ ಆಶ್ರಯದಾಣಗಳಾಗಿರುವ ಭಾರತ, ಜಪಾನ್‌, ಅಮೆರಿಕ ಹಾಗೂ ಆಸ್ಟ್ರೇಲಿಯಾ ದೇಶಗಳು, ಗಡಿ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಬಯಸುತ್ತವೆ.

ನಮ್ಮ ಈ ಔದಾರ್ಯವನ್ನು ಇತರ ರಾಷ್ಟ್ರಗಳು ಗೌರವಿಸಬೇಕು” ಎಂದು ಚೀನ, ಪಾಕಿಸ್ಥಾನದ ಹೆಸರೆತ್ತದೆ ಜೈಶಂಕರ್‌ ತಾಕೀತು ಮಾಡಿದರು.

Advertisement

ಚೀನ ದರ್ಪ ತಗ್ಗಿಸಬೇಕು: ಮೈಕ್‌
ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪಿಯೂ ಮಾತನಾಡಿ, “”ಚೀನದ ಕಮ್ಯೂನಿಸ್ಟ್‌ ಪಾರ್ಟಿಯ ಶೋಷಣೆಯಿಂದ ಅಮೆರಿಕ ತನ್ನ ಪ್ರಜೆಗಳನ್ನು ರಕ್ಷಿಸಬೇಕಿದೆ. ಅಂಥದ್ದೇ ದಬ್ಟಾಳಿಕೆಯ ವಾತಾವರಣವನ್ನು ನಾವು ಚೀನ ಸಮುದ್ರದ ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿ ಕಾಣುತ್ತಿದ್ದೇವೆ. ಏಷ್ಯಾದ ಪೂರ್ವ ಭಾಗದ ಮೆಕಾಂಗ್‌ನಲ್ಲಿ, ಹಿಮಾಲಯದಲ್ಲಿ, ತೈವಾನ್ ನ ಲ್ಲಿಯೂ ಚೀನ ಶಕ್ತಿ ಪ್ರದರ್ಶನ ಮಾಡಲಾರಂಭಿಸಿದೆ. ಚೀನದ ದರ್ಪಕ್ಕೆ ಇವು ಕೇವಲ ಉದಾಹರಣೆಗಳಷ್ಟೇ. ಆದಷ್ಟು ಬೇಗನೇ ಇದನ್ನು ತಗ್ಗಿಸಬೇಕಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next