Advertisement
ಮಧ್ಯಪ್ರಾಚ್ಯ ರಾಷ್ಟ್ರಗಳ ಸಹಿತ ಜಗತ್ತಿನ ವಿವಿಧ ರಾಷ್ಟ್ರ ಗಳ ನಡುವೆ ರಾಜತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿ ಸಂಘರ್ಷದ ವಾತಾವರಣ ನಿರ್ಮಾಣವಾದಾಗ ಮಧ್ಯ ಪ್ರಾಚ್ಯದ ಕೆಲವು ದೇಶಗಳು ಮಧ್ಯಸ್ಥಿಕೆದಾರನ ಪಾತ್ರ ವಹಿಸಿ ಎರಡು ರಾಷ್ಟ್ರಗಳ ನಡುವೆ ಸಂಧಾನ ಮಾತುಕತೆ ನಡೆಸಲು ಆಸಕ್ತಿ ತೋರಿವೆ. ಈ ಪೈಕಿ ಈಜಿಪ್ಟ್, ಒಮಾನ್, ಕುವೈಟ್, ಕತಾರ್ ಪ್ರಮುಖವಾದವು. ಅದರಲ್ಲಿ ಕತಾರ್ ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಸಂಧಾನಕಾರನ ಪಾತ್ರವನ್ನು ನಿರ್ವಹಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಅದು ರಾಷ್ಟ್ರಗಳ ನಡುವೆ ಇರಲಿ ಅಥವಾ ಯಾವುದೇ ಭಯೋತ್ಪಾದಕ, ಪ್ರತ್ಯೇಕ ತಾವಾದ ಮತ್ತು ಜನಾಂಗೀಯ ಸಂಘಟನೆಗಳಿರಲಿ ಇವೆಲ್ಲವುಗಳೊಂದಿಗೆ ಸಂಪರ್ಕ ಹೊಂದುವ ಮೂಲಕ ಮಧ್ಯಸ್ಥಿಕೆದಾರನ ಪಾತ್ರವಹಿಸಿ ಉದ್ವಿಗ್ನತೆಯನ್ನು ಶಮನ ಗೊಳಿಸುವಲ್ಲಿ ಕತಾರ್ ಯಶಸ್ವಿಯಾಗಿದೆ. ಕತಾರ್‌ನ ಈ ಶಾಂತಿ ಮಂತ್ರ ಈಗ ಹಮಾಸ್ ಮತ್ತು ಇಸ್ರೇಲ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಿಸುವಲ್ಲಿಯೂ ಕಾರಣೀಭೂತವಾಗಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕತಾರ್‌ನ ಆಡಳಿತ ತನ್ನ ಸಂಧಾನ ಮಾತುಕತೆಗಳನ್ನು ಮುಂದುವರಿಸಿದೆ.
Related Articles
Advertisement
ಕತಾರ್‌ನ ಈ ಮಧ್ಯಸ್ಥಿಕೆ ನೀತಿ ಅದರ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿದೆ. ಸಂಧಾನಕಾರನ ಪಾತ್ರ ನಿರ್ವಹಿಸುವಾಗಲೆಲ್ಲ ಕತಾರ್, ತನ್ನ ಆಂತರಿಕ ಸಾಮರ್ಥ್ಯದ ಜತೆಜತೆಯಲ್ಲಿ ಬಾಹ್ಯ ಶಕ್ತಿಗಳನ್ನೂ ಬಳಸಿ ಕೊಂಡಿದೆ. ಇದಕ್ಕಾಗಿ ರಾಜತಾಂತ್ರಿಕ ಮತ್ತು ಗುಪ್ತಚರ ತರಬೇತಿಯ ಸಹಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಭಾರೀ ಪ್ರಮಾಣದಲ್ಲಿ ಹಣವನ್ನೂ ವ್ಯಯಿಸಿದೆ. ಇವೆಲ್ಲದರಲ್ಲೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಯಾವುದೇ ಸಂಘರ್ಷ, ಬಿಕ್ಕಟ್ಟು ತಲೆದೋರಿದಾಗ ರಾಜತಾಂತ್ರಿಕ ಮತ್ತು ಸಂಧಾನ ಮಾರ್ಗದ ಮೂಲಕ ಶಾಂತಿಯುತ ಪರಿಹಾರ ಕಂಡು ಕೊಳ್ಳಲು ಗರಿಷ್ಠ ಆದ್ಯತೆಯನ್ನು ನೀಡುತ್ತ ಬಂದಿದೆ.
ಹೂಡಿಕೆಯಲ್ಲೂ ಮುಂದೆ: ಭೌಗೋಳಿಕವಾಗಿ ಅತೀ ಚಿಕ್ಕ ರಾಷ್ಟ್ರವಾಗಿರುವ ಕತಾರ್ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಆದರೆ ಕತಾರ್ ಈಗ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ವಿಶ್ವ ರಾಷ್ಟ್ರಗಳಿಗೆ ದ್ರವೀಕೃತ ಅನಿಲ ಪೂರೈಕೆಯಲ್ಲಿ ಮುಂಚೂಣಿ ಯಲ್ಲಿರುವ ಮತ್ತು ಅಧಿಕ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪವನ್ನು ಹೊಂದಿರುವ ವಿಶ್ವದ 3ನೇ ಅತೀ ದೊಡ್ಡ ರಾಷ್ಟ್ರ ಕತಾರ್. ತಲಾ ಆದಾಯದಲ್ಲೂ ವಿಶ್ವದಲ್ಲಿ ಆರನೇ ಸ್ಥಾನದಲ್ಲಿದ್ದರೆ, ಅರಬ್ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿದೆ. ನೈಸರ್ಗಿಕ ಅನಿಲ ರಫ್ತಿನಲ್ಲಿ ಕತಾರ್ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಕತಾ ರ್‌ನ ಒಟ್ಟಾರೆ ರಫ್ತು ಆದಾಯದಲ್ಲಿ ಶೇ. 85ರಷ್ಟು ಹೈಡ್ರೋಕಾರ್ಬನ್‌ಗಳಿಂದ ಸಂಗ್ರಹವಾಗುತ್ತಿದೆ. ನೈಸ ರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರಾ ಟದಿಂದ ಸಂಗ್ರಹಿಸಿದ ಮೊತ್ತವನ್ನು ಕತಾರ್, ಅಮೆರಿಕನ್ ಟ್ರೆಜರಿ ಬಿಲ್(ಟಿ -ಬಿಲ್)ಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದರಿಂದಾಗಿ ಅಮೆರಿಕ ಮತ್ತು ಕತಾರ್ ಪರಸ್ಪರ ಅವಲಂ ಬಿತ ದೇಶಗಳಾಗಿ ಮಾರ್ಪಟ್ಟಿವೆ.
ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿರುವ ಕತಾರ್, ಆಹಾರ ಭದ್ರತೆಯ ನಿಟ್ಟಿನಲ್ಲಿ ದಾಪುಗಾಲು ಇರಿಸಿದೆ. ಇನ್ನು ಇರಾಕ್‌ನ ತೈಲ ಕೈಗಾರಿಕೆಯಲ್ಲಿ ಶೇ. 25ರಷ್ಟು ಹೂಡಿಕೆ ಮಾಡುವ ಮೂಲಕ ಪಾಶ್ಚಾತ್ಯ ದೇಶಗಳಿಗೆ ಸಡ್ಡು ಹೊಡೆದಿದೆ. ದಕ್ಷಿಣ ಇಂಗ್ಲೆಂಡ್‌ನಲ್ಲಿ ಕ್ಲೈಮೇಟ್ ಟೆಕ್ ಯುನಿಕಾರ್ನ್ಗಳ ಸ್ಥಾಪನೆಗಾಗಿ 4 ಬಿಲಿಯನ್ ಸ್ಟರ್ಲಿಂಗ್ ಪೌಂಡ್‌ಗಳಷ್ಟು ಹೂಡಿಕೆಯನ್ನು ಮಾಡಿದೆ. ಇದೇ ವೇಳೆ ಜಾಗತೀಕರಣದ ಪಾಲುದಾರ ರಾಷ್ಟ್ರವಾಗಿ ಜಾಗತಿಕ ಉತ್ಪಾದನ ಜಾಲ ಮತ್ತು ಪೂರೈಕೆ ಸರಪಳಿಯ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಜಾಗತಿಕ ಎಲ್‌ಎನ್‌ಜಿ ಮಾರುಕಟ್ಟೆಯಲ್ಲಿ ಪ್ರಮುಖ ಪೂರೈಕೆದಾರ ರಾಷ್ಟ್ರವಾಗುವ ಗುರಿಯೊಂದಿಗೆ 2018ರಲ್ಲಿ ಒಪೆಕ್‌ನಿಂದ ಹೊರಬಂದು ಕ್ಷೇತ್ರದಲ್ಲಿ ಸ್ವಾವಲಂಬನೆಯ ದಿಸೆಯಲ್ಲಿ ಸಾಗಿದೆ.
ವಿರೋಧಿಗಳಿಗೂ ಶಾಂತಿ ಮಂತ್ರದ ಪಾಠ: ನೆರೆಯ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇ, ಕತಾರ್‌ನ ವಿಷಯದಲ್ಲಿ ಪದೇಪದೆ ಮಧ್ಯಪ್ರವೇಶಿಸಲು ಪ್ರಯತ್ನಗಳನ್ನು ನಡೆಸುತ್ತ ಬಂದಿದೆಯಾದರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕತಾರ್, ವಿಶ್ವದ ಎಲ್ಲ ರಾಷ್ಟ್ರ ಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದೆ. ಆದರೆ ಕತಾರ್‌ನ ಈ ನಡೆ 2017-21ರ ಅವಧಿಯಲ್ಲಿ ಸೌದಿ ಅರೇಬಿಯಾದ ಕೆಂಗಣ್ಣಿಗೆ ಗುರಿಯಾಗಿ ಕತಾರ್ ಮೇಲೆ ನಿರ್ಬಂಧ ಹೇರಿತ್ತು. ಕತಾರ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೊಂದಿರುವ ನಂಟಿನ ಬಗೆಗೆ ಸೌದಿ, ಯುಎಇ ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಆದರೆ ಈ ಎರಡು ರಾಷ್ಟ್ರಗಳ ಸಹಿತ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳೊಂದಿಗಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಕತಾರ್ ಎಚ್ಚರಿಕೆಯ ಹೆಜ್ಜೆಯನ್ನು ಇರಿಸಿದೆ.
ಹರೀಶ್ ಕೆ.