ಲೆಬನಾನ್: ಲೆಬನಾನ್(Lebanon) ನಲ್ಲಿ ವಾಕಿಟಾಕಿ ಮತ್ತು ಪೇಜರ್ ಸ್ಫೋಟಗೊಂಡು 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೆ ಬೈರೂತ್ ರಫೀಕ್ ಹರ್ರಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನಗಳಲ್ಲಿ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವುದನ್ನು ಕತಾರ್ (Qatar Airways) ಏರ್ ವೇಸ್ ನಿಷೇಧಿಸಿದೆ.
ಈ ನಿರ್ಬಂಧ ಪ್ರಯಾಣಿಕರ ಲಗೇಜ್ ಹಾಗೂ ಸರಕುಗಳಿಗೂ ಅನ್ವಯವಾಗಲಿದ್ದು, ಮುಂದಿನ ಸೂಚನೆಯವರೆಗೂ ಪೇಜರ್ ಮತ್ತು ವಾಕಿಟಾಕಿ ಒಯ್ಯಲು ಅನುಮತಿ ಇಲ್ಲ ಎಂದು ಕತಾರ್ ಏರ್ ವೇಸ್ ತಿಳಿಸಿದೆ.
ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ ಆಫ್ ದ ರಿಪಬ್ಲಿಕ್ ಲೆಬನಾನ್ ನಿಂದ ನಮಗೆ ನಿರ್ದೇಶನ ಬಂದಿದ್ದು, ಅದರಂತೆ ತಕ್ಷಣವೇ ಜಾರಿಯಾಗುವಂತೆ ಬೈರೂತ್ ನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಪೇಜರ್ಸ್, ವಾಕಿಟಾಕಿ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ ಎಂದು ಕತಾರ್ ಏರ್ ವೇಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಲೆಬನಾನ್ ನಲ್ಲಿ ಪೇಜರ್ಸ್ ಸ್ಫೋಟದ ನಂತರ ವಾಕಿಟಾಕಿ ಸ್ಫೋಟಗೊಂಡು 30ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರಂತದ ನಂತರ ಪೇಜರ್ಸ್ ಮತ್ತು ವಾಕಿಟಾಕಿ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.