ಪುತ್ತೂರು: ಭೂಪಟದಲ್ಲಿ ಪಾಕಿಸ್ಥಾನ ಮರೆಯಾದರೆ ಮಾತ್ರ ಭಯೋತ್ಪಾದನೆ ನಾಶವಾಗಬಹುದು. ಭಯೋತ್ಪಾದನೆಯನ್ನು ಮೂಲೋತ್ಪಾಟನೆಯಿಂದ ಹುತಾತ್ಮ ಸೈನಿಕರಿಗೆ ನೈಜ ಶ್ರದ್ಧಾಂಜಲಿ ಸಲ್ಲುತ್ತದೆ. ಪ್ರತಿಕಾರ ಕೈಗೊಳ್ಳಲು ಸೈನಿಕರಿಗೆ ಬೆಂಬಲವಾಗಿ ನಾವಿದ್ದೇವೆ ಎಂದು ಬಜರಂಗದಳ ದಕ್ಷಿಣ ಪ್ರಾಂತೀಯ ಸಹ ಸಂಯೋಜಕ ಮರಳೀಕೃಷ್ಣ
ಹಸಂತಡ್ಕ ಹೇಳಿದರು.
ಅವೊಂತಿಪೋರಾದಲ್ಲಿ ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರಗಾಮಿ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವತಿಯಿಂದ ನಗರದ ಗಾಂಧೀ ಕಟ್ಟೆಯ ಬಳಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಗತ್ತಿಗೆ ಮಾರ್ಗದರ್ಶನ ನೀಡಿದ ಭಾರತಕ್ಕೆ ಪಾಕಿಸ್ಥಾನ ಪ್ರಾಯೋಜಿತ ಉಗ್ರರು ಕಂಟಕಪ್ರಾಯರಾಗಿದ್ದಾರೆ. ನಮ್ಮ ದೇಶದ ಅನ್ನ, ನೀರು ಕುಡಿದು ಬದುಕುತ್ತಿರುವ ಕ್ರಿಮಿಗಳೇ ಈ ಕೃತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಸೈನಿಕರ ಮೇಲೆ ಆಕ್ರಮಣ ನಡೆಸುತ್ತಿದ್ದು, ನಾವೆಲ್ಲರೂ ಒಂದಾಗಿ ಭಯೋತ್ಪಾದನೆಯ ಮೂಲಕ ದೇಶದ ಸ್ವಾಭಿಮಾನ ಕೆಡಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರಬೇಕಿದೆ ಎಂದರು.
ಸೈನ್ಯಕ್ಕೆ ಸ್ವಾಯತ್ತೆ ನೀಡಿ
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ| ಕೃಷ್ಣಪ್ರಸನ್ನ ಮಾತನಾಡಿ, ಪಾಕಿಸ್ಥಾನದ ಕುಮ್ಮಕ್ಕಿನಿಂದ ಜಿಹಾದಿಗಳು ಭಯೋತ್ಪಾದನೆ ನಡೆಸುತ್ತಿದ್ದಾರೆ. ಅಂತಹ ರಾಕ್ಷಸರಿಗೆ ಮಾನವೀಯತೆ ತೋರುವ ಅಗತ್ಯವಿಲ್ಲ. ಪಾಕಿಸ್ಥಾನಕ್ಕೆ ಹರಿಯುತ್ತಿರುವ ನೀರನ್ನೂ ನಿಲ್ಲಿಸಬೇಕು. ಮತ್ತೂಮ್ಮೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಭಯೋತ್ಪಾದನ ಕೃತ್ಯವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಸೈನ್ಯಕ್ಕೆ ಸ್ವಾಯತ್ತೆ ನೀಡಬೇಕು ಎಂದು ಆಗ್ರಹಿಸಿದರು.
ನಿವೃತ್ತ ಸೈನಿಕ ಸುರೇಶ್ ಶೆಣೈ ಮಾತನಾಡಿ, ನಿರಾಯುಧರಾಗಿದ್ದ ಸೈನಿಕರನ್ನು ಶಿಖಂಡಿಗಳಂತೆ ಹತ್ಯೆ ಮಾಡಿದ್ದಾರೆ. ಇದೊಂದು ಯೋಜನಾಬದ್ಧ ಕೃತ್ಯ. ಸ್ಥಳೀಯರು ಸೈನಿಕರಿಗೆ ಕಲ್ಲು ಹೊಡೆಯುವ ಮೂಲಕ ಹತ್ಯೆ ಮಾಡಿರುವ ದುಷ್ಟರು ತಪ್ಪಿಸಿಕೊಂಡು ಹೋಗಲು ನೆರವಾಗುತ್ತಿದ್ದಾರೆ ಎಂದು ಆರೋಪಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯ ದರ್ಶಿ ಸತೀಶ್ ಬಿ.ಎಸ್., ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಬಜರಂಗ ದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಪ್ರಮುಖರಾದ ವಿಶಾಖ್ ರೈ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆಯ ಸದಸ್ಯ ಮನೋಹರ್ ಕಲ್ಲಾರೆ, ಮಾತೃ ಮಂಡಳಿ ದುರ್ಗಾವಾಹಿನಿಯ ಅರ್ಪಣಾ, ಮೋಹಿನಿ ದಿವಾಕರ್, ಪುರಸಭೆ ಮಾಜಿ ಸದಸ್ಯ ಉದಯ ಎಚ್. ಉಪಸ್ಥಿತರಿದ್ದರು.
ಮೌನ ಏಕೆ?
ರಾಷ್ಟ್ರ ಭಕ್ತರು ಒಂದಾಗಿ ಭಯೋತ್ಪಾದಕ ಕೃತ್ಯ ಖಂಡಿಸಿ ಹೋರಾಡುವ ಮೂಲಕ ಮೃತ ಸೈನಿಕರ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬುವ ಮತ್ತು ಸಹಾಯ ಮಾಡುವ ಕೆಲಸ ಮಾಡಬೇಕಾಗಿದೆ. ಆದರೆ, ದೇಶಭಕ್ತರೆಂದು ಹೇಳಿಕೊಳ್ಳುತ್ತಿರುವ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಮೌನವಾಗಿರುವ ಬದಲು ಸೈನಿಕರಿಗೆ ಮತ್ತು ರಾಷ್ಟ್ರಕ್ಕೆ ಬೆಂಬಲವಾಗಿದ್ದೇವೆ ಎಂಬುದನ್ನು ಬಹಿರಂಗವಾಗಿ ಹೇಳುವ ತಾಕತ್ತು ತೋರಿಸಿಲಿ ಎಂದು ಮುರಳೀಕೃಷ್ಣ ಹಸಂತಡ್ಕ ಸವಾಲು ಹಾಕಿದರು.