ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಹತ್ತು ದಿನಗಳ ವಾರ್ಷಿಕ ಜಾತ್ರೆಯ ಅಂಗವಾಗಿ ರವಿವಾರ ಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು. ಕ್ಷೇತ್ರದ ತಂತ್ರಿ ಕುಂಟಾರು ರವೀಶ್ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಅನಂತರ ಶ್ರೀ ದೇವರ ಬಲಿ ಉತ್ಸವದ ಬಳಿಕ ಧ್ವಜಸ್ತಂಭ ಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.
ನೂತನವಾಗಿ ನಿರ್ಮಿಸಿದ ಯಾಗಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ರುದ್ರ ಹವನ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೀಣಾ ಬಿ.ಕೆ., ಡಾ|ಸುಧಾ ಶ್ರೀಪತಿ ರಾವ್, ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಕೆ.ಎಸ್., ರಾಮದಾಸ ಗೌಡ ಎಸ್., ಶೇಖರ ನಾರಾವಿ, ರಾಮಚಂದ್ರ ಕಾಮತ್, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸುವಸ್ತುಗಳಿಂದ ಧ್ವಜಸ್ತಂಭದ ಅಲಂಕಾರ ಜಾತ್ರೆಯ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಅಡಿಕೆ, ಸೀಯಾಳ, ಬಾಳೆಗೊನೆ, ಕಬ್ಬು, ಮಾವಿನಕಾಯಿಯ ಗೊಂಚಲು, ಹಲಸಿನ ಕಾಯಿ, ಹಿಂಗಾರ ಮೊದಲಾದ ಸುವ ಸ್ತುಗಳನ್ನು ದೇವಾಲಯಕ್ಕೆ ತಂದೊಪ್ಪಿಸಿದ್ದು ಸುವಸ್ತುಗಳನ್ನು ಧ್ವಜಸ್ತಂಭದ ಕಟ್ಟೆಗೆ ಸುತ್ತಲೂ ಜೋಡಿಸಿ ಅಲಂಕರಿಸಲಾಯಿತು.
ಮಧ್ಯಾಹ್ನ ಕುರಿಯ ಮಾಡಾವು ಏಳ್ನಾಡು ಗುತ್ತು ವತಿಯಿಂದ ಅನ್ನದಾನ ನಡೆಯಿತು. ಭಗವಾಧ್ವಜಾರೋಹಣ ದೇಗುಲದ ಹೊರಭಾಗದಲ್ಲಿ ಭಗವಾ ಧ್ವಜಾರೋಹಣ ನಡೆಯಿತು. ಸಂಜೀವ ಮಠಂದೂರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಭಗವಧ್ವ ಜಾರೋಹಣ ನೆರವೇರಿಸಿದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಹಿಂದೂ ಸಂಘಟನೆಯ ಮುಂದಾಳುಗಳಾದ ಅರುಣ್ ಕುಮಾರ್ ಪುತ್ತಿಲ, ಮುರಳಿ ಕೃಷ್ಣ ಹಸಂತಡ್ಕ, ಚನಿಲ ತಿಮ್ಮಪ್ಪ ಶೆಟ್ಟಿ, ಅಜಿತ್ ರೈ ಹೊಸ ಮನೆ, ಅಶೋಕ್ ಉಪಸ್ಥಿತರಿದ್ದರು.