ಕುಷ್ಟಗಿ: ಪಟ್ಟಣದ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ಕೋತಿಯೊಂದು ಭಕ್ತರಂತೆ ಬಂದು ದೇವಿಯ ದರ್ಶನ ಪಡೆದಿರುವುದು ಭಕ್ತರಿಗೆ ಆಶ್ಚರ್ಯ ಹುಟ್ಟಿಸಿದೆ.
ನ.8ರ ಶುಕ್ರವಾರ ಶ್ರೀ ದ್ಯಾಮವ್ವ ದೇವಿ ವಿಶೇಷ ಪೂಜೆಯ ಬಳಿಕ, ಭಕ್ತರು ದೇವಿಯ ದರ್ಶನ ಸಂದರ್ಭದಲ್ಲಿ ಕೋತಿ ಪ್ರವೇಶಿಸಿ ಗರ್ಭಗುಡಿ ಹೊಸ್ತಿಲ ಮೇಲೆ ಸ್ವಲ್ಪ ಹೊತ್ತು ಕುಳಿತು ಅಲ್ಲಿದ್ದ ಭಕ್ತಾದಿಗಳನ್ನು ಆಶ್ಚರ್ಯಚಕಿತಗೊಳಿಸಿದೆ.
ನಂತರ ಗರ್ಭಗುಡಿ ಪ್ರವೇಶಿಸಿ ದೇವಿಗೆ ಹಾಕಲಾಗಿದ್ದ ಹೂವಿನ ಎಸಳು ತಿಂದು, ಪುನಃ ಆರತಿ ತಟ್ಟೆಯ ಬಳಿ ಕುಳಿತಿದೆ. ಆ ವೇಳೆ ಭಕ್ತರು ಬಾಳೆ ಹಣ್ಣು ನೀಡಿದರೂ ಸ್ವೀಕರಿಸಲಿಲ್ಲ. ಯಾರಿಗೂ ತೊಂದರೆ ಕೊಡದೇ ಅಲ್ಲಿಂದ ನಿರ್ಗಮಿಸಿದೆ.
ಈ ಕೋತಿ ಭಕ್ತರಂತೆ ಬಂದು ದೇವಿಯ ದರ್ಶನ ಪಡೆದ ದೃಶ್ಯಾವಳಿಯನ್ನು ಸ್ಥಳೀಯರಾದ ನಾಗರಾಜ್ ಭೋವಿ ಎಂಬವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ಕೋತಿ ದೇವಿಯ ವಾರದ ಪೂಜೆ ಸಂದರ್ಭಗಳಲ್ಲಿ ದೇಗುಲಕ್ಕೆ ಆಗಮಿಸಿ ಹೋಗುತ್ತಿರುವುದು ಭಕ್ತಾದಿಗಳು ದೇವಿ ಪವಾಡ ವೆಂದು ನಂಬಿದ್ದಾರೆ. ಸಾಮಾನ್ಯವಾಗಿ ದೇಗುಲಗಳಲ್ಲಿ ಕೋತಿಗಳು ಭಕ್ತರ ಮೇಲೆ ದಾಳಿ ಮಾಡಿ ಭಕ್ತರು ತಂದಿದ್ದ ಹಣ್ಣು ಇತರ ವಸ್ತುಗಳನ್ನು ಕಿತ್ತುಕೊಂಡು ಹೋಗುತ್ತವೆ. ಆದರೆ ಈ ಕೋತಿ ಶ್ರೀ ದ್ಯಾಮವ್ವ ದೇವಿ ಗರ್ಭಗುಡಿ ಪ್ರವೇಶಿಸಿದರೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಅಲ್ಲಿ ತೊಂದರೆ ಸಹ ಮಾಡಿಲ್ಲ. ಸಾಕ್ಷತ್ ಹನುಮ ದೇವರ ಸ್ವರೂಪದ ಈ ವಾನರ ದೇವಿಯ ಗುಡಿಗೆ ಬಂದು ದೇವಿಯ ದರ್ಶನ ಪಡೆದಿರುವುದು ನನಗಂತು ಆಶ್ವರ್ಯವಾಗಿದೆ ಎಂದು ಜೆಸ್ಕಾಂ ಅಧಿಕಾರಿ ಹುಲ್ಲಪ್ಪ ಹಕ್ಕಿ ತಿಳಿಸಿದ್ದಾರೆ.