Advertisement

ಲಂಬಾಣಿ ಸಮುದಾಯ ಮುಖ್ಯವಾಹಿನಿಗೆ ಬರಲಿ

07:50 AM Feb 16, 2019 | |

ಪುತ್ತೂರು: ಲಂಬಾಣಿ ಸಮುದಾಯ ಸಾಕಷ್ಟು ಮುಂದುವರಿದಿದ್ದರೂ ಕುಲ ಕಸುಬನ್ನು ಮರೆತಿಲ್ಲ ಎಂದು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಶ್ಲಾ ಸಿದರು. ಪುತ್ತೂರು ತಾಲೂಕು ಕಚೇರಿಯ ತಹಶೀಲ್ದಾರ್‌ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸಂತ ಸೇವಾಲಾಲ್‌ ಅವರು ನಮಗಾಗಿ ನೀಡಿದ ಆದರ್ಶಗಳ ಮಹತ್ವವನ್ನು ಅರಿತು ಕೊಳ್ಳಬೇಕಿದೆ. ಸಾಮಾನ್ಯ ವ್ಯಕ್ತಿಯಾಗಿ ಜನಿಸಿ, ಸಮಾಜದ ಜತೆ ನಿಂತು ಹೋರಾಡಿ ಆದರ್ಶ ಪುರುಷರಾಗಿ ಮೆರೆದಿದ್ದರು ಎಂದರು.

ಲಂಬಾಣಿ ಸಮುದಾಯ ಜೀವನಕ್ಕಾಗಿ ಅಲೆಮಾರಿಗಳಾಗಿ ಸುತ್ತಾಡುತ್ತಿದೆ. ಸಮುದಾಯದಲ್ಲಿ ಕೆಲವರು ಉನ್ನತ ಸ್ಥಾನಮಾನ ಪಡೆದಿದ್ದರೂ ಎಲ್ಲರೂ ಈ ಸ್ಥಾನಕ್ಕೆ ಹೋಗಿಲ್ಲ. ಆದ್ದರಿಂದ ಉಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಿದೆ ಎಂದರು.

13 ಸಾವಿರ ಜನ
ಉಪನ್ಯಾಸ ನೀಡಿದ ಎಡಮಂಗಲ ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ರಮೇಶ ಪಿ. ನಾಯ್ಕ, 143 ದೇಶಗಳಲ್ಲಿ ಲಂಬಾಣಿ, ಬಂಜಾರ ಸಮುದಾಯದ ಜನರು ನೆಲೆಸಿದ್ದಾರೆ. ನಮ್ಮ ದೇಶದಲ್ಲಿ ಬಂಜಾರಾ, ವಂಜಾರ ಮೊದಲಾದ 29 ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಇವರ ಮೂಲ ಕಸುಬು ವ್ಯಾಪಾರ. ಒಂಟೆ ಮೊದಲಾದ ಪ್ರಾಣಿಗಳ ಮೇಲೆ ಸರಕುಗಳನ್ನು ಹೇರಿಕೊಂಡು ಹೋಗಿ, ಮನೆಮನೆಗೆ ತಲುಪಿಸುತ್ತಿದ್ದರು. ಇಂತಹ ಸಮುದಾಯದಲ್ಲಿ ಹುಟ್ಟಿದ ಪವಾಡಪುರುಷ ಸಂತ ಶ್ರೀ ಸೇವಾಲಾಲ್‌. ರಾಜ್ಯದಲ್ಲಿ 3 ಸಾವಿರದಷ್ಟು ತಾಂಡಗಳಿದ್ದು, 45 ಲಕ್ಷಕ್ಕೂ ಮಿಕ್ಕಿ ಜನರಿದ್ದಾರೆ. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 13 ಸಾವಿರದಷ್ಟು ಮಾತ್ರ ಇದ್ದಾರೆ. ಅದೂ ಬೇರೆ ಜಿಲ್ಲೆಗಳಿಂದ ವಲಸೆ ಬಂದವರು. ಆದ್ದರಿಂದ ದ.ಕ.ದಲ್ಲಿ ಸಂತ ಶ್ರೀ ಸೇವಾಲಾಲ್‌ ಜಯಂತಿ ಮಾಡುವುದು ಹೆಚ್ಚಿನ ಪ್ರಾಧಾನ್ಯ ಪಡೆದುಕೊಂಡಿದೆ ಎಂದರು.

ಕರಾವಳಿ ಶ್ರೀ ಸೇವಾಲಾಲ್‌ ಬಂಜಾರ ಸಂಘದ ಪ್ರಧಾನ ಕಾರ್ಯದರ್ಶಿ ಚಂದು ನಾಯ್ಕ ಮಾತನಾಡಿ, ಸೇವಾಲಾಲ್‌ ಅವರ ಸಂದೇಶ ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾಗಿಲ್ಲ, ನೀರು ಖರೀದಿಯ ವಸ್ತು ಆಗುತ್ತದೆ ಎಂದು 18ನೇ ಶತಮಾನದಲ್ಲೇ ಹೇಳಿಕೊಂಡಿದ್ದರು. ಅವರ ಆದರ್ಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲೂ ಸೇವಾಲಾಲ್‌ ಭವನ ಆಗಬೇಕಿದೆ. ಆದರೆ ಇದಕ್ಕಾಗಿ 10 ಸೆಂಟ್ಸ್‌ ಜಾಗವೂ ಸಿಗುತ್ತಿಲ್ಲ. ಇದಕ್ಕೆ ಕಂದಾಯ ಇಲಾಖೆಯ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು. ಶಾಸಕ ಸಂಜೀವ ಮಠಂದೂರು, ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಶುಭ ಹಾರೈಸಿದರು. ಉಪತಹಶೀಲ್ದಾರ್‌ ಶ್ರೀಧರ್‌ ಕೆ. ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಕರಣಿಕ ಚಂದ್ರ ನಾಯ್ಕ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next