Advertisement

ಪುತ್ತೂರು: ರಬ್ಬರ್‌ ಮಾರಾಟವಾಗದೆ ಬೆಳೆಗಾರರು ಕಂಗಾಲು

09:23 PM Apr 20, 2020 | Sriram |

ವಿಶೇಷ ವರದಿ-ಪುತ್ತೂರು: “ಕೋವಿಡ್‌ 19′ ಲಾಕ್‌ಡೌನ್‌ ಮಧ್ಯೆ ರಬ್ಬರ್‌ ಬೆಳೆಗೆ ಮಾರುಕಟ್ಟೆಯೇ ಇಲ್ಲದಂತಾಗಿದೆ. ಮನೆಯಲ್ಲಿ ಉಳಿಕೆಯಾದ ರಬ್ಬರ್‌ ಶೀಟ್‌ಗೆ ಧಾರಣೆ, ಮಾರಾಟದ ವ್ಯವಸ್ಥೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ರಬ್ಬರ್‌ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ ಬೆಳೆ. ಹಲವು ದಿನಗಳಿಂದ ರಬ್ಬರ್‌ ಬೆಳೆಗೆ ಯಾವುದೇ ಮಾರುಕಟ್ಟೆ ಇಲ್ಲ. ಖಾಸಗಿಯಾಗಿ ರಬ್ಬರ್‌ ಬೆಳೆಯನ್ನು ಬೆಳೆಯು ತ್ತಿರುವ ರೈತರು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಆ ಮೂಲಕ ತಮ್ಮ ಬೆಳೆಯನ್ನು ಮಾರಾಟ ಮಾಡುತ್ತಿದ್ದಾರೆ. ಈ ಸಹಕಾರಿ ಸಂಘಗಳು ಎಂ.ಆರ್‌.ಎಫ್‌. ಕಂಪೆನಿಗೆ ರಬ್ಬರ್‌ ಪೂರೈಕೆ ಮಡುತ್ತಿವೆ. ಇದರ ಕಂಪೆನಿಗಳು ಗೋವಾ, ಕೇರಳ, ವೈಜಾಗ್‌ ಮತ್ತಿತರ ಪ್ರದೇಶಗಳಲ್ಲಿ ಇರುವುದರಿಂದ ಪ್ರಸ್ತುತ ರಬ್ಬರ್‌ ಶೀಟ್‌ಗಳನ್ನು ಒಯ್ಯಲು ಅವಕಾಶ ಇಲ್ಲದಂತಾಗಿದೆ.

ಕೇರಳಕ್ಕೆ ಇಲ್ಲಿನ ಬಹುತೇಕ ರಬ್ಬರ್‌ ಪೂರೈಕೆಯಾಗುತ್ತಿದ್ದು, ಪ್ರಸ್ತುತ ಕೇರಳದ ಗಡಿಯನ್ನು ಕೋವಿಡ್‌ 19 ಹಿನ್ನೆಲೆಯಲ್ಲಿ ಬಂದ್‌ ಮಾಡಿರುವುದರಿಂದ ರಬ್ಬರ್‌ ಶೀಟ್‌ಗಳನ್ನು ಅಲ್ಲಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಬ್ಬರ್‌ ಮಾರುಕಟ್ಟೆಯೇ ಬಿದ್ದು ಹೋಗಿದೆ.

ಪುತ್ತೂರು ತಾಲೂಕಿನ ಸಾವಿರಾರು ರೈತ ಕುಟುಂಬಗಳು ರಬ್ಬರ್‌ ಬೆಳೆಯಿಂದಲೇ ಬದುಕುತ್ತಿವೆ. ಪ್ರಸ್ತುತ ಕಡಬ ತಾಲೂಕಿಗೆ ಸೇರಿದ ಗುಂಡ್ಯ, ಶಿರಾಡಿ, ಕಡಬ, ಸುಳ್ಯ ತಾಲೂಕಿನ ಬೆಳ್ಳಾರೆ ಸಹಿತ ಇಲ್ಲಿನ ಕೆಲವು ಭಾಗಗಳು, ಪುತ್ತೂರು ತಾಲೂಕಿನ ಕೇರಳ ಗಡಿಭಾಗದ ನೆಟ್ಟಣಿಗೆ ಮುಟ್ನೂರು ಭಾಗದಲ್ಲಿ ಅತಿ ಹೆಚ್ಚಿನ ರಬ್ಬರ್‌ ಬೆಳೆಯಲಾಗುತ್ತಿದೆ. ಇವರೆಲ್ಲ ರಬ್ಬರ್‌ ಶೀಟ್‌ಗಳನ್ನು ತಯಾರಿಸಿ ಮನೆಯಲ್ಲಿ ದಾಸ್ತಾನು ಮಾಡಿದ್ದು, ಅವುಗಳು ಹಾಳಾಗುತ್ತಿವೆ.

ಸಂಘವೂ ಅಸಹಾಯಕ
ರಬ್ಬರ್‌ ಬೆಳೆಗಾರರ ಸಹಕಾರಿ ಸಂಘವೂ ರೈತರಿಂದ ರಬ್ಬರ್‌ ಬೆಳೆಯನ್ನು ಕೊಂಡುಕೊಳ್ಳುವ ಸ್ಥಿತಿಯಲ್ಲಿಲ್ಲ. ಕಾರಣ ಮಾರುಕಟ್ಟೆಯೇ ಇಲ್ಲದೆ ರಬ್ಬರ್‌ಗೆ ಬೆಲೆ ನಿರ್ಣಯ ಮಾಡುವುದೇ ಇವರಿಗೆ ದೊಡ್ಡ ಸಮಸ್ಯೆ. ಕನಿಷ್ಠಪಕ್ಷ ಲಾರಿಗಳಲ್ಲಿ ಕೇರಳ, ಗೋವಾ ರಬ್ಬರ್‌ ಕಾರ್ಖಾನೆಗಳಿಗೆ ರಬ್ಬರ್‌ ಒಯ್ಯಲು ಅವಕಾಶ ನೀಡಿದರೆ ಮಾತ್ರ ರೈತರಿಂದ ಸಹಕಾರಿ ಸಂಘಗಳು ರಬ್ಬರ್‌ ಖರೀದಿ ಮಾಡಬಹುದಾಗಿದೆ.

Advertisement

ವಿಶೇಷ ಪ್ಯಾಕೇಜ್‌ ಘೋಷಿಸಲಿ
ಜಿಲ್ಲೆಯಲ್ಲಿ ಸಾವಿರಾರು ಮಂದಿ ರೈತರ ಬದುಕು ನಿರ್ಣಯಿಸುವ ರಬ್ಬರ್‌ ಬೆಳೆಗೆ ಬೆಂಬಲ ಬೆಳೆಯನ್ನು ಕೇರಳ ಮಾದರಿಯಲ್ಲಿ ನೀಡಬೇಕು. ಮೂಲ ಆವಶ್ಯಕತೆಬೇಕಾದ ಆರ್ಥಿಕತೆ ದೊರೆಯುವಂತಾಗಬೇಕು. ರಬ್ಬರ್‌, ಅಡಿಕೆ ಬೆಳೆಯುವ ರೈತವರ್ಗಕ್ಕೆ ಸರಕಾರ ವಿಶೇಷ ಪ್ಯಾಕೇಜ್‌ ನೀಡಬೇಕು.

ಈ ಕುರಿತು ಸಂಸದರು ಮತ್ತು ಮಾಜಿ ಸಚಿವರು, ಹಾಲಿ ಶಾಸಕರ ನಿಯೋಗದೊಂದಿಗೆ ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಆಗ್ರಹಿ ಸಲಾಗುವುದು ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ, ಪುತ್ತೂರು ರಬ್ಬರ್‌ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ತಿಳಿಸಿದ್ದಾರೆ.

ಪರಿಹಾರಕ್ಕೆ ಕ್ರಮ
ಅಧಿಕ ರಬ್ಬರ್‌ ಬೆಳೆಯುವ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸ್ವಲ್ಪಮಟ್ಟಿನ ರಬ್ಬರ್‌ ಖರೀದಿ ನಡೆಯುತ್ತಿದೆ. ಸರಕಾರದ ಜತೆ ಮಾತುಕತೆ ನಡೆಸಿ ರಬ್ಬರ್‌ ಬೆಳೆಗಾರರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡಲಾಗುವುದು.
ಸಂಜೀವ ಮಠಂದೂರು,
ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next