Advertisement

ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವ: ಕಳೆಗಟ್ಟಿದ ರಥಬೀದಿ, ಭಕ್ತರ ಸಂಖ್ಯೆ ಹೆಚ್ಚಳ

01:48 PM Jan 16, 2024 | Team Udayavani |

ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವ ಸಂಭ್ರಮಕ್ಕೆ ಉಡುಪಿ ನಗರ ತೆರೆದುಕೊಂಡಿದ್ದು, ಕೃಷ್ಣ ಮಠ ರಥಬೀದಿಯಲ್ಲಿ ಭಕ್ತರ ಓಡಾಟ ಹೆಚ್ಚಳವಾಗಿದೆ.

Advertisement

ವಿವಿಧ ಜಿಲ್ಲೆ, ಹೊರ ರಾಜ್ಯ,ವಿದೇಶದಿಂದಲೂ ಭಕ್ತರು ಉಡುಪಿಗೆ ಧಾವಿಸಿದ್ದು, ರಥಬೀದಿ ವಾತಾವರಣ ಸಂಪೂರ್ಣ ಕಳೆಗಟ್ಟಿದೆ. ಕೃಷ್ಣಮಠ ರಥೋತ್ಸವ, ಪುತ್ತಿಗೆ ಪರ್ಯಾಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಗರಕ್ಕೆ ಆಗಮಿಸಿದ್ದಾರೆ. ರಥಬೀದಿ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿನ ಆನಂದತೀರ್ಥ ಮಂಟಪದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸಂಜೆಯಾಗುತ್ತಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಪರ್ಯಾಯ ಮಹೋತ್ಸವವು ಸ್ಥಳೀಯ ವ್ಯಾಪಾರದ ಆರ್ಥಿಕ ಚಟುವಟಿಕೆಗೂ ಮೆರುಗು ಬಂದಿದೆ.

ರಥಬೀದಿಯ ಸುತ್ತಮುತ್ತ, ಸಂಪರ್ಕ ರಸ್ತೆಗಳಲ್ಲಿ ಸ್ಥಳೀಯ ವ್ಯಾಪಾರಿಗಳು ಸಹಿತ ಹೊರ ಜಿಲ್ಲೆಗಳಿಂದ, ಜಿಲ್ಲೆಯ ಗ್ರಾಮೀಣ
ಭಾಗದಿಂದ ಆಗಮಿಸಿದ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಕರಕುಶಲ ವಸ್ತು, ಗೃಹಪಯೋಗಿ ವಸ್ತು, ಉಡುಗೆ ವಸ್ತ್ರ, ಆಟಿಕೆ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರದ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ವ್ಯಾಪಾರ ಹೆಚ್ಚಿದ್ದು, ಐದಾರು ತಿಂಗಳ ಹಿಂದೆಯೇ ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರು ನಗರದ ಲಾಡ್ಜ್‌ ಗಳಲ್ಲಿ ಬುಕ್ಕಿಂಗ್‌ ಮಾಡಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ರಥಬೀದಿ, ಕೃಷ್ಣಮಠ, ಪುತ್ತಿಗೆ ಮಠಗಳ ವಿವಿಧ ಬಣ್ಣಗಳ ವಿದ್ಯುತ್‌ ಅಲಂಕಾರ ಪರ್ಯಾಯ ಮೆರುಗನ್ನು ಹೆಚ್ಚಿಸಿದೆ.

ರಥಬೀದಿಯಲ್ಲಿ ವಿದೇಶಿಗರು
ಇಲ್ಲಿನ ಪರಿಸರದಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಅನೇಕ ದೇಶಗಳಿಂದ ಭಾರತಕ್ಕೆ ಪ್ರವಾಸಕ್ಕೆ ಬಂದಿರುವ ವಿದೇಶಿಗರು ಪುತ್ತಿಗೆ ಪರ್ಯಾಯ ಕಣ್ತುಂಬಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾರೆ. ಉದಯವಾಣಿ ಜತೆಗೆ
ಮಾತನಾಡಿದ ಫಿನ್‌ ಲ್ಯಾಂಡ್‌ ದೇಶದ ಮರೀಯ ಅವರು, ಯೋಗ ತರಬೇತಿಗೆ ಉಡುಪಿಗೆ ಆಗಮಿಸಿದ್ದು, ಈ ವೇಳೆ ಇಲ್ಲಿ ಪರ್ಯಾಯ ಮಹೋತ್ಸವ ನಡೆಯುವ ಬಗ್ಗೆಯೂ ಕೇಳಿ ವಿಶೇಷ ಎನಿಸಿತು. ಯೋಗದ ಸಲುವಾಗಿ ಇನ್ನೂ ಒಂದು ವಾರ ಉಡುಪಿಯಲ್ಲಿರುತ್ತೇವೆ. ಈ ನಡುವೆ ಪರ್ಯಾಯೋತ್ಸವವನ್ನು ಕಣ್ತುಂಬಿಕೊಳ್ಳುತ್ತೇವೆ ಎಂದ ಅವರು ಇಲ್ಲಿನ ಕಲೆ, ಆಹಾರ, ಸಾಂಸ್ಕೃತಿಕ ವೈವಿಧ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸ್ವಚ್ಛತೆ, ಮೂಲಸೌಕರ್ಯ ಸಿದ್ಧತೆ
ನಗರದ ಸ್ವಚ್ಛತ ಕಾರ್ಯ ವೇಗ ಪಡೆದುಕೊಂಡಿದ್ದು, ಮುಖ್ಯ ರಸ್ತೆಗಳು, ಕೃಷ್ಣ ಮಠ ಸಂಪರ್ಕ ಒಳ ರಸ್ತೆಗಳ ಸ್ವಚ್ಛತೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. 200 ಮಂದಿ ಸ್ವಚ್ಛತ ಸಿಬಂದಿ ಹಗಲು, ರಾತ್ರಿ ಎರಡು ಪಾಳಿಯಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ.

ಹೊರಗಡೆಯಿಂದ ಬರುವ ಪ್ರವಾಸಿಗರು, ಭಕ್ತರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ಮೊಬೈಲ್‌ ಶೌಚಾಲಯ ಯುನಿಟ್‌ಗಳನ್ನು ಅಲ್ಲಲ್ಲಿ ಇರಿಸುವ ಕೆಲಸ ನಡೆಯುತ್ತಿದೆ. ನಗರದ ಬಹುತೇಕ ರಸ್ತೆಗಳು ಗುಂಡಿ ಮುಕ್ತವಾಗಿದ್ದು, ಡಾಮರು, ಫೇವರ್‌ ಫಿನಿಶಿಂಗ್‌ ಕಾಮಗಾರಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next