Advertisement

Puttige Mutt Paryaya: 2 ಟನ್‌ ಮಟ್ಟುಗುಳ್ಳ, ಕಣ್ಮನ ಸೆಳೆವ ಹೊರೆಕಾಣಿಕೆ ಸಂಗ್ರಹಾಲಯ

01:12 PM Jan 17, 2024 | Team Udayavani |

ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವದ ಅನ್ನದಾಸೋಹಕ್ಕೆ ವಿವಿಧ ಸಂಘ, ಸಂಸ್ಥೆ, ಭಕ್ತರಿಂದ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಹೊರೆ ಕಾಣಿಕೆ ಹರಿದು ಬರುತ್ತಿದೆ. ಕೃಷ್ಣಮಠ ಪಾರ್ಕಿಂಗ್‌ ಪ್ರದೇಶ ಬಳಿಯ ಬೈಲಕೆರೆಯಲ್ಲಿ ರೂಪಿಸಿದ ಹೊರೆಕಾಣಿಕೆ ಸಂಗ್ರಹಾಲಯ ಜನಾಕರ್ಷಣೆಯ ಕೇಂದ್ರವಾಗಿ ಕಣ್ಮನ ಸೆಳೆಯುತ್ತಿದೆ.

Advertisement

ಉಗ್ರಾಣದಲ್ಲಿ ಹಳೆಯ ಕಾಲದ ಕೃಷಿ ಮತ್ತು ತುಳುನಾಡಿನ ಸಂಸ್ಕೃತಿಯ ಪರಿಕರಗಳು ವಿಶೇಷವಾಗಿದೆ. ಕುಂದಾಪುರ ತಾಲೂಕಿನ
ಮಡಾಮಕ್ಕಿಯಿಂದ ತಂದಿರುವ ಎತ್ತಿನಗಾಡಿಯಲ್ಲಿ ಅಕ್ಕಿ ಮುಡಿ, ಅಡಿಕೆ ಕೊನೆಗಳನ್ನು ತುಂಬಿಸಿ ಇಡಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

ಅದೇ ರೀತಿ ಬ್ರಹ್ಮಾವರ ಮಟಪಾಡಿಯ ಗಾಣಿಗ ಸಮುದಾಯದ ಎಣ್ಣೆ ತೆಗೆಯುವ ಮರದ ಗಾಣ ಇರಿಸಿ ಅದರ ಸುತ್ತಲೂ ತೆಂಗಿನಕಾಯಿಗಳ ರಾಶಿಯನ್ನು ಮಾಡಲಾಗಿದೆ. ಅಕ್ಕಿ ಸಂಗ್ರಹಿಸುತ್ತಿದ್ದ ಹಳೆಯ ಕಾಲದ ಪತ್ತಾಸು ಜತೆಗೆ ನಾನಾ ಪುರಾತನ ಪರಿಕರಗಳಿವೆ. ತೆಂಗಿನಕಾಯಿ, ಅಕ್ಕಿ, ಬಾಳೆಗೊನೆ, ತೊಗರಿಬೇಳೆ, ಉದ್ದಿನಬೇಳೆ, ಕಡಲೆಬೇಳೆ, ಕಡಲೆಹಿಟ್ಟು, ರವ, ಗೋದಿ, ತುಪ್ಪ, ಅವಲಕ್ಕಿ, ಬೆಲ್ಲ, ಉಪ್ಪಿನಕಾಯಿ,ಸಕ್ಕರೆ, ಎಣ್ಣೆ, ಕುಂಬಳಕಾಯಿ, ಮರ್ಸಣ ಗೆಡ್ಡೆ, ಸುವರ್ಣ ಗೆಡ್ಡೆ ಸೇರಿದಂತೆ ನಾನಾ ಬಗೆಯ ದಿನಸಿ, ದವಸಧಾನ್ಯ, ಹಣ್ಣುಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತವಾಗಿ ಜೋಡಿಸಿಡಲಾಗಿದೆ.

ಪರ್ಯಾಯಕ್ಕೆ 2 ಟನ್‌ ಮಟ್ಟುಗುಳ್ಳ ಸಮರ್ಪಣೆ
ಕಟಪಾಡಿ: ಸೋದೆ ಮಠದ ಶ್ರೀ ವಾದಿರಾಜ ಯತಿಗಳು ಅನುಗ್ರಹಿಸಿಕೊಟ್ಟಿದ್ದ ಬೀಜದಿಂದ ಸೃಷ್ಟಿಯಾಗಿದೆ ಎಂಬ ಪ್ರತೀತಿ ಹೊಂದಿರುವ ಮಟ್ಟುಗುಳ್ಳವನ್ನು ವಾಡಿಕೆಯಂತೆ ಪ್ರಥಮ ಬೆಳೆಯನ್ನು ಶ್ರೀಕೃಷ್ಣಮಠಕ್ಕೆಅರ್ಪಿಸಿ ಕೃತಾರ್ಥರಾಗಿದ್ದಾರೆ.

Advertisement

ಕೋಟೆ ಗ್ರಾಮದ ಮಟ್ಟು ಪ್ರದೇಶದ ರೈತರ ಪರಿಶ್ರಮದ ಸೇವಾ ಬೆಳೆ ಕಾಣಿಕೆಯಾಗಿದ್ದು, ಪರ್ಯಾಯಕ್ಕೆ ಆಗಮಿಸುವ ಭಕ್ತರಿಗೆ ಸುಗ್ರಾಸ ಭೋಜನದ ಸವಿರುಚಿ ನೀಡುವ ಮಟ್ಟುಗುಳ್ಳವು  2014ರಲ್ಲಿ 3,000 ಕಿಲೋ ಸೇವಾ ರೂಪದಲ್ಲಿ ನೀಡಲಾಗಿತ್ತು. 2016ರ ಪರ್ಯಾಯದಲ್ಲಿ 2,300 ಕಿಲೋ ಸಂದಾಯ ಆಗಿರುತ್ತದೆ. 2018ರ ಪರ್ಯಾಯಕ್ಕೆ 3,800 ಕಿಲೋ, 2020ರಲ್ಲಿ 3,000 ಕಿಲೋ, 2022ರಲ್ಲಿ 1,500 ಕಿಲೋ ಸಮರ್ಪಿಸಲಾಗಿತ್ತು. ಪ್ರಸ್ತುತ ಸಾಲಿನಲ್ಲಿ (2024) ಪ್ರಕೃತಿ ವಿಕೋಪದ ನಡುವೆಯೂ ಬೆಳೆಗಾರರು
2,000 ಕಿಲೋ ಗುಳ್ಳ ವನ್ನು ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್‌ ಬಂಗೇರ ಮಾರ್ಗದರ್ಶನದಲ್ಲಿ ಜ.16ರಂದು ಅರ್ಪಿಸಲಾಯಿತು.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ಜ.17ರ ಸಂಜೆ 4ಕ್ಕೆ ಪಾಡಿಗಾರು
ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಬಳಗದಿಂದ ಭಕ್ತಿ ಸಂಗೀತ, ಸಂಜೆ 5ರಿಂದ 6.30ರವರೆಗೆ “ರಾಮಾಯಣದ ಪ್ರಸ್ತುತಿ ಮತ್ತು ರಾಮ ರಾಜ್ಯ’ ಸಂವಾದದಲ್ಲಿ ರೋಹಿತ್‌ ಚಕ್ರತೀರ್ಥ, ಷಣ್ಮುಖ ಹೆ‌ಬ್ಬಾರ್‌ ಮತ್ತು ರಘುಪತಿ ಭಟ್‌ ಭಾಗವಹಿಸುವರು. ಸಂಜೆ 6.30ರಿಂದ ರಾತ್ರಿ 8ರ ವರೆಗೆ ಬೆಂಗಳೂರಿನ ತರಾನಾ ಬಳಗದಿಂದ ಸಂಗೀತ ಸಂಗಮ, ರಾತ್ರಿ 8ರಿಂದ 9ರ ವರೆಗೆ ಸಭಾ ಕಾರ್ಯಕಮ, ರಾತ್ರಿ 9ರಿಂದ ಸಾಲಿಗ್ರಾಮ ಮೇಳದಿಂದ ಯಕ್ಷಗಾನ ನಡೆಯಲಿದೆ.

ಹೊರೆಕಾಣಿಕೆ ಆವರಣದ ಕನಕದಾಸ ಮಂಟಪದಲ್ಲಿ ರಾತ್ರಿ 7ರಿಂದ 9ರವರೆಗೆ ಬೆಂಗಳೂರಿನ ಸರಿಗಮಪ ಖ್ಯಾತಿಯ ಡಾ|
ಸುಚೇತನಾ ರಂಗಸ್ವಾಮಿ ಮತ್ತು ಬಳಗದಿಂದ ದಾಸವಾಣಿ, ರಾತ್ರಿ 9ರಿಂದ 11ರವರೆಗೆ ಬೆಂಗಳೂರಿನ ಲಯಲಾವಣ್ಯ ಇವರಿಂದ ವಾದ್ಯವೈಭವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next