ಬೆಂಗಳೂರು: ಶೌಚಾಲಯದ ಬಾಗಿಲು ಹಾಕುಕೊಂಡು ಕುಳಿತುಕೋ ಎಂದಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಸತಿ ನಿಲಯದ ಇನ್ನೊಬ್ಬ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಅಂಜನಾನಗರದ ಬಿಇಎಲ್ ಲೇಔಟ್‌ನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ರೋಹಿತ್ (22) ಮೃತ ವಿದ್ಯಾರ್ಥಿ. ಪ್ರಕರಣಕ್ಕೆ ಸಂಬಂಧಿಸಿ ರವೀಶ್(21) ಎಂಬಾತನನ್ನು ಬಂಧಿಸಲಾಗಿದೆ.
ಕುಣಿಗಲ್ ಸಮೀಪದ ಸೋಲೂರಿನ ವಾಸಿಯಾದ ರೋಹಿತ್ ಅಂಜನಾನಗರದಲ್ಲಿರುವ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ 3ನೇ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಆರೋಪಿ ರವೀಶ್ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನನಲ್ಲಿ ಅಂತಿಮ ವರ್ಷದ ಬಿಎ ಓದುತ್ತಿದ್ದಾನೆ. ಹಾಗಾಗಿ ಬಿಇಎಲ್ ಲೇಔಟ್‌ನಲ್ಲಿರುವ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇಬ್ಬರೂ ಉಳಿದುಕೊಂಡಿದ್ದರು.
ನಡೆದಿದ್ದೇನು?: ವಸತಿ ನಿಲಯದಲ್ಲಿ ಇಬ್ಬರೂ ಅಕ್ಕ-ಪಕ್ಕದ ಕೊಠಡಿಯಲ್ಲಿ ವಾಸವಾಗಿದ್ದು, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ರವೀಶ್ ಹಾಸ್ಟೆಲ್‌ಗೆ ಬಂದು ಶೌಚಾಲಯಕ್ಕೆ ತೆರಳಿದ್ದಾನೆ. ಶೌಚಾಲಯದ ಬಾಗಿಲು ಹಾಕದೆ ಶೌಚಕ್ಕೆ ತೆರಳಿದ್ದ ರವೀಶ್‌ನ ವರ್ತನೆಯನ್ನು ರೋಹಿತ್ ಪ್ರಶ್ನಿಸಿ, ಬಾಗಿಲು ಹಾಕಿಕೊಳ್ಳುವಂತೆ ಸೂಚಿಸಿದ್ದಾನೆ. ಇದಕ್ಕೆ ರವೀಶ್ ಆಕ್ಷೇಪ ವ್ಯಕ್ತಪಡಿಸಿದಾಗ ರವೀಶ್ ಬಲವಂತವಾಗಿ ಬಾಗಿಲು ಮುಚ್ಚಲು ಯತ್ನಿಸಿದ್ದಾನೆ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿದ್ದು, ರವೀಶ್ ಕೊಠಡಿಯಿಂದ ಚಾಕು ತಂದು ರೋಹಿತ್‌ನ ಕುತ್ತಿಗೆ ಇರಿದಿದ್ದಾನೆ. ಈ ವೇಳೆ ರಕ್ಷಣೆಗೆ ಹೋದ ಮತ್ತೂಬ್ಬ ವಿದ್ಯಾರ್ಥಿ ಅಮರೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ವಸತಿ ನಿಲಯದ ಮೇಲ್ವಿಚಾರಕರು ರೋಹಿತ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.