Advertisement
ನಗರದ ಬಿಜೈಯಲ್ಲಿರುವ ಮೆಸ್ಕಾಂ ಕಾರ್ಪೋರೆಟ್ ಕಚೇರಿ ಆವರಣದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಿ. ಪದ್ಮಾವತಿ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಮೆಸ್ಕಾಂ ನೌಕರರು ಕಂಪೆನಿಯ ಹಿತ, ಗ್ರಾಹಕರ ತೃಪ್ತಿಯನ್ನು ಗಮನದಲ್ಲಿಟ್ಟು ಕೊಂಡು ಕೆಲಸ ಮಾಡುವುದರ ಜತೆಗೆ ಸುರಕ್ಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕಾಗಿದೆ. ಕಂಪೆನಿಯವತಿಯಿಂದ ತಮಗೆ ನೀಡಿರುವ ಸುರಕ್ಷೆ ಸಾಮಗ್ರಿಗಳನ್ನು ಕರ್ತವ್ಯದ ಅವಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.
ಮಂಗಳೂರು ವಿಭಾಗ ವ್ಯಾಪ್ತಿಯ ಪವರ್‌ಮನ್‌ಗಳ ಜಾಥಾವು ಬಿಜೈಯಿಂದ ಬಲ್ಲಾಳ್‌ಬಾಗ್, ಲೇಡಿಹಿಲ್ ಮೂಲಕ ಸಾಗಿತು. ಸುರಕ್ಷೆಯ ಬಗ್ಗೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು. ವಿದ್ಯುತ್ ಸುರಕ್ಷೆ ಜಾಗೃತಿ ಕಾರ್ಯ ಕ್ರಮದ ಅಂಗವಾಗಿ ಮೆಸ್ಕಾಂ ವ್ಯಾಪ್ತಿ ಯಲ್ಲಿ ಮುಂದಿನ 1 ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.