Advertisement

ಮಹಾನಗರದಲ್ಲಿ  ಪುರ್ಸೊತ್ತಿಜ್ಜಿ ಯಶಸ್ವಿ ಪ್ರಯೋಗ

02:36 PM Jan 16, 2018 | |

ಮುಂಬಯಿ ಮಹಾನಗರದಲ್ಲಿ ಮುಖ್ಯವಾಗಿ ತುಳು ಕನ್ನಡಿಗರು ತಮ್ಮ ಉದ್ಯಮ ಹಾಗೂ ಉದ್ಯೋಗದೊಂದಿಗೆ ಬಿಡುವಿನ ಸಮಯದಲ್ಲಿ ತಮ್ಮಲ್ಲಿನ ಪ್ರತಿಭೆಯನ್ನು ಹಲವಾರು ವಿಧಗಳಲ್ಲಿ ಪ್ರದರ್ಶಿಸುತ್ತಿರುವುದು ಅಭಿನಂದನೀಯ.  ಕನ್ನಡ ಹಾಗೂ ತುಳು ರಂಗಮಂಚದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದವರು ಅನೇಕರು.  ಇತ್ತೀಚೆಗೆ ತೀಯಾ ಸಮಾಜ ಮುಂಬಯಿಯ ಮಾಸ ಪತ್ರಿಕೆಯ 15 ನೆಯ ವಾರ್ಷಿಕ ಸಮಾರಂಭದಲ್ಲಿ ನಗರದ ಅಭಿನಯ ಮಂಟಪದ ಕಲಾವಿದರು ಸಾದರಪಡಿಸಿದ ಕರುಣಾಕರ ಕಾಪು ನಿರ್ದೇಶನದ ತುಳು ನಾಟಕ ಪುರ್ಸೊತ್ತಿಜ್ಜಿ ಇದರ ಪ್ರಥಮ ಪ್ರದರ್ಶನವು ಯಶಸ್ವಿಯಾಯಿತು.

Advertisement

ನಾಟಕದ ಆರಂಭದಲ್ಲಿ ಚಲನಚಿತ್ರ ಹಾಗೂ ಅನುಭವೀ ರಂಗನಟ ರಾಜಕುಮಾರ್‌  ಕಾರ್ನಾಡ್‌ ರಾಜಣ್ಣನಾಗಿ ಮತ್ತು ಮಲಯಾಳ ಚಿತ್ರದಲ್ಲಿ ಅಭಿನಯಿಸಿದ ರಂಗಭೂಮಿ ನಟಿ ಪ್ರತಿಮಾ ಬಂಗೇರ  ಮುದುಕಿ ಸರಸಕ್ಕರಾಗಿ ಪ್ರವೇಶಿಸುತ್ತಿದ್ದಂತೆ ಮುಂದೆ ಈ ನಾಟಕವು ಉತ್ತಮ ಪ್ರದರ್ಶನವನ್ನು ನೀಡಿ ಒಳ್ಳೆಯ ಸಂದೇಶವನ್ನು ನೀಡುವುದರಲ್ಲಿ ಸಂದೇಹವಿಲ್ಲ ಎಂಬಂತಿತ್ತು.

ಅಲ್ಲಿಯವರೆಗೆ ನಿರಂತರ ಭಾಷಣ, ಮಧ್ಯೆ ಸ್ವಲ್ಪ ಸಮಯ ನೃತ್ಯವನ್ನು ನೋಡಿ ನಾಟಕಕ್ಕಾಗಿ ಸಾಂತಾಕ್ರೂಜ್‌  ಪೂರ್ವ ಬಿಲ್ಲವ ಭವನ ತುಂಬಿದ ನಾರಾಯಣ ಗುರು ಸಭಾಗೃಹದಲ್ಲಿ ಕಾಯುತ್ತಿದ್ದ ಕಲಾಭಿಮಾನಿಗಳು ಒಮ್ಮೆಲೇ ಉಲ್ಲಾಸದಿಂದ ಆರಂಭದಲ್ಲೇ  ನಗು ನಗುತ್ತಾ ಕರತಾಡನದೊಂದಿಗೆ ಕಲಾವಿದರನ್ನು ಸ್ವಾಗತಿಸಿದ್ದು ಕಲಾವಿದರಲ್ಲೂ ಒಂದು ರೀತಿಯ ಪ್ರೋತ್ಸಾಹ ತಂದಿದೆ.

ರಾಜಣ್ಣ ಮತ್ತು ಸರಸಕ್ಕನಿಗೆ ಮೂವರು ಮಕ್ಕಳು, ದೊಡ್ಡವ ಮಾಧವನ ಪಾತ್ರದಲ್ಲಿ ಶ್ರೀಕಾಂತ್‌ ಶೆಟ್ಟಿ ಉತ್ತಮವಾಗಿ ನಿಭಾಯಿಸಿದ್ದಾರೆ. ಇನ್ನೋರ್ವ ಪುತ್ರ ನವೀನ್‌ ಶೆಟ್ಟಿ ಇನ್ನಬಾಳಿಕೆಯವರು ರಾಜೇಶನ ಪಾತ್ರ ಹಾಗೂ ಪತ್ನಿ ಲಲಿತಾಳ ಪಾತ್ರದಲ್ಲಿ ವಿಜಯಲಕ್ಷ್ಮೀ ಉದ್ಯಾವರ ಉತ್ತಮವಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಇನ್ನೋರ್ವ ಪುತ್ರ ಧರ್ಮನ ಪಾತ್ರದಲ್ಲಿ ಸುನೀಲ್‌ ಪೂಜಾರಿ ಅವರು  ಕುಡುಕನಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.  ರಾಜೇಶನ ಪತ್ನಿ ಮುದಿ ಪ್ರಾಯದ ತಂದೆ ತಾಯಿಯಂದಿರನ್ನು ನಾವೇ ಯಾಕೆ ನೋಡಬೇಕು, ಇನ್ನುಳಿದ ಇಬ್ಬರು ಮಕ್ಕಳಿರುವಾಗ ಎನ್ನುತ್ತಾ ಪತಿಗೆ ಆಗಾಗ ತೊಂದರೆ ಕೊಟ್ಟು ಕೌನ್ಸಿಲರ್‌  ಕೇಶವನಿಗೆ  (ಜನಪ್ರಿಯ ಹಾಸ್ಯ ಕಲಾವಿದ ಪಿ. ಬಿ. ಚಂದ್ರಹಾಸ) ಮನೆ ಮತ್ತು ಇತರ ಆಸ್ತಿಯನ್ನು ಮಾರಿ ಸಾಲ ತೀರಿಸಿ ಉಳಿದ ಹಣವನ್ನು ಮೂವರು ಗಂಡು ಮಕ್ಕಳಿಗೆ ಪಾಲು ಮಾಡಿಕೊಡಲಾಗುತ್ತದೆ. ಅನಂತರ  ವೃದ್ದ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವ ಆ ಸನ್ನಿವೇಶವು ಕಲಾಭಿಮಾನಿಗಳಿಗೆ ಒಂದು ರೀತಿಯ ವಿಶೇಷ ಅನುಭವ ನೀಡಿತ್ತು. ಒಟ್ಟಿನಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳಲು ಮಕ್ಕಳಿಗೆ ಪುರ್ಸೊತ್ತಿಜ್ಜಿ ಎಂಬ ಶೀರ್ಷಿಕೆಯು ಉತ್ತಮ ಸಂದೇಶವನ್ನು ನೀಡಿತು. 

Advertisement

ಹೀಗೆ ಇಂದಿನ ಮಹಾನಗರದಲ್ಲಿನ ದೈನಂದಿನ ಜೀವನ ಕ್ರಮದ ಹಲವಾರು ಘಟನೆಗಳನ್ನು ಪ್ರತಿಬಿಂಬಿಸುವ  ಒಂದು ಸಂದೇಶಭರಿತ ಹಾಸ್ಯ ಮಯ ನಾಟಕವಿದು. ಇದರಲ್ಲಿ ಅಭಿನಯಿಸಿದ ಹೆಚ್ಚಿನವರು ಅನುಭವಿ ಕಲಾವಿದರು ಎಂಬುವುದು ಗಮನಾರ್ಹ.

ಡಾ| ಉತ್ತಪ್ಪನಾಗಿ ಗೌತಮ್‌ ದೇವಾಡಿಗ, ಉಮಾನಾಥನಾಗಿ ಅಶೋಕ್‌ ಕುಮಾರ್‌ ಕೊಡ್ಡಡ್ಕ,  ರಮಾನಾಥನಾಗಿ ನವೀನ್‌ ಸುವರ್ಣ, ಕೇಬಲ್‌ ಮ್ಯಾನ್‌ ಆಗಿ ಜಯಂತ್‌ ಸುವರ್ಣ ಇವರ ಪಾತ್ರ ಮೆಚ್ಚತಕ್ಕದ್ದು, ದಿವ್ಯಾಳಾಗಿ ದೀûಾ ದೇವಾಡಿಗ ಇನ್ನೂ ಹೆಚ್ಚಿನ ಪ್ರಯತ್ನ ಮಾಡಬಹುದಿತ್ತು. ರಾಜ್‌ ಕುಮಾರ್‌ ಕಾರ್ನಾಡ್‌ ಅವರ ಹಾಡು, ಗೌತಮ್‌ ಮೂರೂರು ಮತ್ತು ಸುದರ್ಶನ ಕೋಟ್ಯಾನ್‌ ಸಂಗೀತ, ಮಂಜುನಾಥ ಶೆಟ್ಟಿಗಾರ ಇವರ ಮೇಕಪ್‌ ನಾಟಕಕ್ಕೆ ಪೂರಕವಾಗಿತ್ತು. ವೇದಿಕೆಯಲ್ಲಿ ಸ್ಥಳಾವಕಾಶ ಸ್ವಲ್ಪ ಕಡಿಮೆ ಇದ್ದರೂ ಅಭಿನಯ ಹಾಗೂ ಸಂಭಾಷಣೆಯಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ. ನಾಟಕಕಾರರಿಗೆ ಪುರ್ಸೊತ್ತು ಇಲ್ಲದಿದ್ದರೂ ದೀಪ ಸಂಯೋಜನೆ ಸರಿಯಾಗಿತ್ತು. ನಿರ್ದೇಶಕರು ಈ ನಾಟಕವನ್ನು ಇನ್ನೂ ಉನ್ನತ ಮಟ್ಟಕ್ಕೆ ತರುವುದರೊಂದಿಗೆ ಪುರ್ಸೊತ್ತಿಜ್ಜಿ ನಾಟಕವನ್ನು ಮುಂಬಯಿ ಪರಿಸರದಲ್ಲಿ ಮಾತ್ರವಲ್ಲ ನಾಡಿನಲ್ಲಿ ಹಾಗೂ ವಿದೇಶದಲ್ಲೂ ಪ್ರದರ್ಶನಗೊಳ್ಳುವಂತೆ ಮಾಡಿ ಈ ನಾಟಕದ ಅರ್ಥಪೂರ್ಣ ಸಂದೇಶವು ಎಲ್ಲೇಡೆ ಪ್ರಸಾರವಾಗುವಂತಾಗಲಿ.

ಲೇಖಕ :  ಈಶ್ವರ ಎಂ.ಐಲ್‌.

Advertisement

Udayavani is now on Telegram. Click here to join our channel and stay updated with the latest news.

Next