ಹೊನ್ನಾವರ: ಭಾರತದಲ್ಲಿ ಜೇನುತುಪ್ಪದ ಪರಿಶುದ್ಧತೆ ಪರೀಕ್ಷಿಸುವ ಅತ್ಯಾಧುನಿಕ ವ್ಯವಸ್ಥೆ ಇಲ್ಲ. ಇರುವ ವ್ಯವಸ್ಥೆಯ ಕಣ್ತಪ್ಪಿಸಿ ಕಲಬೆರಕೆ ಜೇನುತುಪ್ಪ ಮಕ್ಕಳ ಔಷಧಕ್ಕೂ, ದೇವರ ಅಭಿಷೇಕಕ್ಕೂ ಬಳಸಲ್ಪಡುತ್ತಿವೆ.
ವಿದೇಶಿ ಕಂಪನಿಯೊಂದು ದೇಶದ 22 ಮಾದರಿಗಳಲ್ಲಿ 5 ಮಾತ್ರ ಪರಿಶುದ್ಧ ಎಂದು ಹೇಳಿದ್ದು ದೇಶದ ಪ್ರಸಿದ್ಧ ಬ್ರಾಂಡ್ ಜೇನುತುಪ್ಪಗಳು ಅಸಲಿ ಜೇನುತುಪ್ಪಗಳಲ್ಲ. ಪೇಟೆಯಲ್ಲಿರುವ ಶೇ. 77 ಜೇನುತುಪ್ಪಗಳಲ್ಲಿ ಸಕ್ಕರೆ ಪಾಕ ಬಳಸಲಾಗಿದೆ ಎಂದು ಹೇಳಿರುವುದು ಜೇನುಪೇಟೆ ಕೋಲಾಹಲಕ್ಕೆ ಕಾರಣವಾಗಿದೆ.
ಔಷಧ, ಆರೋಗ್ಯವರ್ಧಕ ಎಂದು ಬಳಸಲ್ಪಡುವ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿದಂತೆ ಕಲಬೆರಕೆ ಜೇನುತುಪ್ಪ ಪೇಟೆಗೆ ಪ್ರವೇಶಿಸಿತು. ಈಗ ಸ್ವಲ್ಪ ಅಸಲಿ ತುಪ್ಪದ ಜೊತೆಗೆ ವಿವಿಧ ರೂಪದಲ್ಲಿ ಕಾಳಸಂತೆಯಲ್ಲಿ ದೊರೆಯುವ ಸಕ್ಕರೆ ಬಳಸಲಾಗುತ್ತಿದೆ. ಇವುಗಳಲ್ಲಿ ಮೊಲಾಸಸ್ ಎಂಬುದು ಕಬ್ಬಿನ ಸಂಸ್ಕರಣೆಯಲ್ಲಿ ಪಡೆದ ದಪ್ಪ ದ್ರವವಾಗಿದ್ದು ಗಾಢ ಬಣ್ಣದಲ್ಲಿರುತ್ತದೆ. ಇದನ್ನು ಕಾಡು ಜೇನುತುಪ್ಪದೊಂದಿಗೆಬೆರಸಲಾಗುತ್ತದೆ. ದ್ರವ ಗ್ಲೂಕೋಸ್ ಎಂಬುದು ಕ್ಯಾಂಡಿ ತಯಾರಿಕೆಯಲ್ಲಿ ಬಳಸುವ ದಪ್ಪದಾದ ಹೊಳೆಯುವ ದ್ರವ. ಇದು ಸುಲಭವಾಗಿ ದೊರೆಯುವುದರಿಂದ ಜೇನುತುಪ್ಪಕ್ಕೆ ಸೇರಿಸಿ ಮಾರಲಾಗುತ್ತದೆ.
ಇನ್ವರ್ಟ್ ಶುಗರ್ ಎಂಬುದು ಸಕ್ಕರೆ ಆಧಾರಿತ ಕಬ್ಬಿನ ಉತ್ಪನ್ನವಾಗಿದ್ದು ಜೇನುತುಪ್ಪಕ್ಕೆ ತುಂಬ ಹೋಲುತ್ತದೆ. ಇದನ್ನು ಮಿಠಾಯಿ ಮತ್ತು ಬೇಕರಿ ತಿಂಡಿಗಳಲ್ಲಿ ಬಳಸಲಾಗುತ್ತಿದ್ದು ಇದನ್ನೂ ಕೂಡ ಜೇನುತುಪ್ಪಕ್ಕೆ ಬೆರಸಿ ಮಾರಲಾಗುತ್ತಿದೆ. ಹೈಫ್ಸ್ ಕ್ಟೋಸ್ ಕಾರ್ನ್ ಸಿರಪ್ ಇದು ಜೇನು ತುಪ್ಪಕ್ಕೆ ಬಳಸುವ ಇನ್ನೊಂದು ಮಿಶ್ರಣವಾಗಿದ್ದು, ಜೇನುತುಪ್ಪದಂತೆ ತೋರುವ ಇದನ್ನು ವಿದೇಶದಿಂದ ಆಮದು ಮಾಡಿಕೊಂಡು ಮೆಕ್ಕೆಜೋಳವನ್ನು ಸಂಸ್ಕರಿಸಿ ಅನೇಕ ಜೇನುತುಪ್ಪದ ಕಂಪನಿಗಳು ಇದನ್ನು ಬಳಸುತ್ತವೆ. ಇತ್ತೀಚಿನ ವರ್ಷದಲ್ಲಿ ಚೀನಾದಲ್ಲಿ ತಯಾರಾಗುವ ಅಕ್ಕಿಯ ಸಿರಪ್‌ನ್ನು ಬಳಸಿಜೇನುತುಪ್ಪಕ್ಕೆ ಸೇರಿಸಿ ಮಾರಲಾಗುತ್ತದೆ. ಇವುಗಳು ಮಧುಮೇಹ ಮತ್ತು ಹೃದಯ ಸಮಸ್ಯೆಗಳಿಗೆ ಸಂಬಂಧಿಸಿ ತೀವ್ರ ಅಡ್ಡಪರಿಣಾಮ ಬೀರುತ್ತವೆ. ಸಾಸಿವೆ, ಲೀಚಿ, ಸೂರ್ಯಕಾಂತಿ, ಅಂಟವಾಳ, ಮಾವು, ಅಕೇಶಿಯಾ, ಮೊದಲಾದ ಹೂವುಗಳಿಂದ ರಬ್ಬರ್ ಚಿಗುರಿನಿಂದ ಪಡೆಯುವ ಅಸಲಿ ಜೇನುತುಪ್ಪ ಮೊನೊಫ್ಲೋರಾ ಹನಿ ಅನಿಸಿಕೊಳ್ಳುತ್ತದೆ. ಕಾಡಿನ ಪ್ರದೇಶದಿಂದ ನೂರಾರು ವಿಧದ ಗಿಡದ ಮಕರಂದಗಳಿಂದ ಸಂಗ್ರಹಿಸಲ್ಪಡುವ ಜೇನು ಮಲ್ಪಿಫ್ಲೋರಾ ಜೇನು ಎಂದು ಕರೆಸಿಕೊಳ್ಳುತ್ತದೆ.
ಸ್ಥಳೀಯವಾಗಿ ಜೇನುತುಪ್ಪ ಪರೀಕ್ಷಿಸುವ ಎಲ್ಲ ಪದ್ಧತಿಗಳ ಕಣ್ಣುತಪ್ಪಿಸಿ ಜೇನುತುಪ್ಪದ ಹೆಸರಿನಲ್ಲಿ ಹಲವಾರು ರೀತಿಯಸಿಹಿ ಜೇನುಪ್ರಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ದೊಡ್ಡ ಕಂಪನಿಗಳ ಕಥೆ ಹೀಗಾದರೆ ಮುಕ್ಕಾಲು ಬಾಟಲಿ ನೀರು ತುಂಬಿಸಿ ಮೇಲೆ ಅರ್ಧ ಲೋಟ ಜೇನುತುಪ್ಪ, ಮೇಣ ಕರಗಿಸಿ ಹಾಕಿ ಮಾರುವ ಹಳ್ಳಿಗರಿದ್ದಾರೆ.
ಕಾಡು ಜೇನಿಗೆ ಸಾಕಿದ ಜೇನು ತುಪ್ಪವನ್ನು ಬೆರೆಸುವವರಿದ್ದಾರೆ. ಹೆಜ್ಜೇನು ಎತ್ತರದಲ್ಲಿ ಬಹುಮಹಡಿ ಮೇಲೆ ಗೂಡು ಕಟ್ಟುತ್ತದೆ. ಕೆಲವು ದುಷ್ಟಬುದ್ಧಿಯ ಸಾಹಸಿಗಳು ಇದನ್ನು ಸಂಗ್ರಹಿಸಿ ಕೊಡುವುದಾಗಿ ಹೇಳಿ ಸಾವಿರಾರು ರೂ. ಗೆ ಗುತ್ತಿಗೆ ಮಾಡುತ್ತಾರೆ. ಹುಳಕಡಿಯುತ್ತದೆ ಎಂದು ಕಟ್ಟಡ ಮಾಲಿಕನನ್ನು ದೂರ ನಿಲ್ಲಿಸಿ ಇವರು ಅರ್ಧ ಬಾಲ್ಡಿ ನೀರು ತುಂಬಿಕೊಂಡು ಕಟ್ಟಡ ಏರಿ ಒಂದೆರಡು ತುಪ್ಪದ ಎರಿಗಳನ್ನು ಹಾಕಿ ಉಳಿದ ಖಾಲಿ ಮತ್ತು ಮರಿಮೊಟ್ಟೆ ಎರಿಯನ್ನು ತುಂಬಿಸಿ ಒಂದು ಬಾಲ್ಡಿ ಜೇನುತುಪ್ಪ ಬಂತು ಎಂದು ಕೊಟ್ಟು ಹೋಗುತ್ತಾರೆ. ಕರ್ನಾಟಕದ ಕೆಲವೆಡೆಗಳಲ್ಲಿ ಅರ್ಧ ಶತಮಾನದ ಹಿಂದೆ ಹುಟ್ಟಿಕೊಂಡ ಕೆಲವು ಜೇನು ಉತ್ಪಾದಕರ ಸಹಕಾರಿ ಸಂಘಗಳು ತಮ್ಮ ಜಿಲ್ಲೆಯ ಸಂಗ್ರಹದ ಜೊತೆ ಬಿಹಾರ, ಗುಜರಾತ್‌ಗಳಿಂದಲೂ ಜೇನುತುಪ್ಪ ತಂದು ತಮ್ಮ ಬ್ರಾಂಡ್ ನಲ್ಲಿ ಮಾರುತ್ತಾರೆ.
ಹಾಲಿನ ಸಾಚಾತನ ಪರೀಕ್ಷಿಸುವ ಉಪಕರಣದಂತೆ ಜೇನುತುಪ್ಪದ ಪರೀಕ್ಷೆಗೂ ಒಂದು ಉಪಕರಣ ಬರುವವರೆಗೆ ನಕಲಿ ಜೇನುತುಪ್ಪದ ಹಾವಳಿ ಇರುತ್ತದೆ. ಪರಿಶುದ್ಧ ಬೇಕಾದರೆ ರೈತ ಜೇನು ತುಪ್ಪ ತೆಗೆಯುವಲ್ಲಿ ಹೋಗಬೇಕು. ಬೇಡಿಕೆಗೂ, ಪೂರೈಕೆಗೂ ಅಗಾಧ ಅಂತರ ಇರುವುದರಿಂದ ಕೋವಿಡ್ ಕಾಲದಲ್ಲಿ ಜೇನು ರೋಗನಿರೋಧಕ ಶಕ್ತಿ ಹೆಚ್ಚುವ ಪ್ರಚಾರ ಜೋರಾದ ಕಾರಣ ನಕಲಿ ಜೇನಿನ ವ್ಯಾಪಾರ ಜೋರಾಗಿಯೇ ನಡೆದಿದೆ. ಮಾಧ್ಯಮದಲ್ಲಿ ಬರುತ್ತಿರುವ ವರದಿಗಳಲ್ಲಿ ಸತ್ಯತೆ ಇದೆ ಎಂದು ಅನುಭವಿ ಜೇನು ಸಾಕಾಣಿಕೆದಾರರು ಅಭಿಪ್ರಾಯಪಡುತ್ತಿರುವುದು ಕೋಲಾಹಲಕ್ಕೆ ಕಾರಣವಾಗಿದೆ.
–ಜೀಯು, ಹೊನ್ನಾವರ