ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಭತ್ತ ಹಾಗೂ ರಾಗಿಯನ್ನು ಖರೀದಿಸುವ ಸಲುವಾಗಿ ಡಿ. 15ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ತೂಕ ಮತ್ತು ಅಳತೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಖರೀದಿ ಪ್ರಕ್ರಿಯೆ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಕೊಠಡಿಯಲ್ಲಿ ಗುರುವಾರ ನಡೆದ 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ಭತ್ತ ಮತ್ತು ರಾಗಿಯನ್ನು ಖರೀದಿಸಲು ಡಿ.15ರಿಂದ ರೈತರ ನೋಂದಣಿ ಕಾರ್ಯ ಆರಂಭಿಸಬೇಕು.2023ರ ಜನವರಿ 1ರಿಂದ ಮಾ.23ರವರೆಗೆ ನಿಗದಿಗೊಳಿಸಲಾಗಿರುವ ಖರೀದಿ ಕೇಂದ್ರಗಳಲ್ಲಿ ಭತ್ತ ಹಾಗೂ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ) ಅವರಣದಲ್ಲಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗುತ್ತಿದೆ. ಕಳೆದ ಸಾಲಿನಲ್ಲಿ ಭತ್ತ ಖರೀದಿ ಪ್ರತಿ ಕ್ವಿಂಟಲ್‌ಗೆ 1940 ರೂ. ಹಾಗೂ ರಾಗಿ ಪ್ರತಿ ಕ್ವಿಂಟಲ್‌ಗೆ 3377 ರೂ. ಗಳನ್ನು ನಿಗದಿ ಮಾಡಲಾಗಿತ್ತು. ಪ್ರಸಕ್ತ ವರ್ಷ ಸಾಮಾನ್ಯ ಭತ್ತ ಖರೀದಿಗೆ ಪ್ರತಿ ಕ್ವಿಂಟಲ್‌ಗೆ 2040 ರೂ. ಹಾಗೂ ಗ್ರೇಡ್-ಎ ಭತ್ತ ಪ್ರತಿ ಕ್ವಿಂಟಲ್‌ಗೆ 2060 ರೂ. ಮತ್ತು ರಾಗಿ ಪ್ರತಿ ಕ್ವಿಂಟಲ್‌ಗೆ 3578 ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದರು.
ಸರ್ಕಾರವು ರಾಜ್ಯ ಕೃಷಿ ಮಾರಾಟ ಮಂಡಳಿ ಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದ್ದು ಭತ್ತ ಹಾಗೂ ರಾಗಿ ಖರೀದಿ ಪ್ರಕ್ರಿಯೆಯು ಈ ಏಜೆನ್ಸಿ ಮೂಲಕ ನಡೆಯಲಿದೆ. ಪ್ರತಿಯೊಬ್ಬ ರೈತರು ಖರೀದಿ ಕೇಂದ್ರಗಳಿಗೆ ಮಾರಾಟಕ್ಕಾಗಿ ತಂದ ಭತ್ತದ ಗ್ರೇಡ್ ಅನ್ನು ಪ್ಯಾರಾಮೀಟರ್ ಮೂಲಕ ನಿರ್ಧರಿಸಲಾಗುತ್ತದೆ. ಭತ್ತ, ರಾಗಿ ಖರೀದಿ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಖರೀದಿ ವೇಳೆ ತೂಕ, ಅಳತೆಯಲ್ಲಿ ರೈತರಿಗೆ ಸೂಕ್ತ ಮಾಹಿತಿ ನೀಡಿ
ಯಾವುದೇ ಲೋಪಗಳಿಗೆ ಅಸ್ಪದವಾಗದಂತೆ ನೋಡಿ ಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಭತ್ತವನ್ನು ಮಾರಾಟ ಮಾಡುವ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡಿಕೊಳ್ಳದಿದ್ದಲ್ಲಿ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಭತ್ತವನ್ನು ಮಾರಾಟ ಮಾಡಬಹುದಾಗಿದೆ ಎಂದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಇದೇ ತಿಂಗಳ 15ರಿಂದ ರೈತರ ನೋಂದಣಿ ಪ್ರಾರಂಭಿಸಲಾಗುತ್ತಿದ್ದು, ಈ ಸಂಭಂಧ ಮಾಹಿತಿ, ವಿವರಗಳಿಗಾಗಿ ರೈತರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರನ್ನು (ಮೊ. 9449864455) ಸಂಪರ್ಕಿಸುವಂತೆ ಮನವಿ ಮಾಡಿದರು.