ಚಿಕ್ಕಮಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಬಿಳಿಜೋಳ ಹಾಗೂ ರಾಗಿಯನ್ನು ಖರೀದಿ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ರಾಗಿ ಹಾಗೂ ಬಿಳಿಜೋಳ ಖರೀದಿ ಹಾಗೂ ಸಂಗ್ರಹಣೆ ಕುರಿತು ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ರೈತರು ಬೆಳೆದಿರುವರಾಗಿ ಮತ್ತು ಬಿಳಿಜೋಳವನ್ನು ಸರ್ಕಾರದ ನಿರ್ದೇಶನದಂತೆ ಖರೀದಿಸಲು ತೀರ್ಮಾನಿಸಿದ್ದು,ಬಿಳಿಜೋಳ ಹೈಬ್ರಿಡ್‌ಗೆ ಪ್ರತಿ ಕ್ವಿಂಟಲ್‌ಗೆ ರೂ.2,620ಬಿಳಿಜೋಳ ರೂ.2,640 ರಂತೆ, ರಾಗಿ ಪ್ರತಿ ಕ್ವಿಂಟಲ್‌ಗೆರೂ.3,295 ರಂತೆ ಖರೀದಿಸಲಾಗುವುದು. ಜಿಲ್ಲೆಯಲ್ಲಿ ತರೀಕೆರೆ, ಚಿಕ್ಕಮಗಳೂರು, ಕಡೂರು, ಮತ್ತು ಪಂಚನಹಳ್ಳಿ ಎ.ಪಿ.ಎಂ.ಸಿ. ಯಾರ್ಡ್‌ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಪ್ರತಿ ರೈತರಿಂದಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್ ಬಿಳಿ ಜೋಳವನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ರೈತರು ಇಂದಿನಿಂದ 31ನೇ ಜನವರಿ 2021 ರವರೆಗೆ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರುಗಳನ್ನುಸಲ್ಲಿಸಿ ನೋಂದಣಿ ಮಾಡಬಹುದಾಗಿದ್ದು, ನೋಂದಾಯಿತ ರೈತರಿಂದ 15ನೇ ಡಿಸೆಂಬರ್ 2020 ರಿಂದ 15ನೇ ಮಾರ್ಚ್ 2021ರ ವರೆಗೂ ಅಗತ್ಯದಾಖಲಾತಿಗಳನ್ನು ಪಡೆದು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗನುಗುಣವಾಗಿ ಖರೀದಿ ಮಾಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಆಹಾರ ಇಲಾಖೆ ದೂ:08262-237715, ಕೃಷಿ ಇಲಾಖೆ ದೂ:08262-220526 ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ದೂ: 08262-295623 ನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಹೇಳಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.