Advertisement

ಭ್ರಮರಿ ನೃತ್ಯದಲ್ಲಿ ಅನಾವರಣಗೊಂಡ ಪುರಂದರ-ತ್ಯಾಗರಾಜ ವೈಚಾರಿಕ ಸಾಮ್ಯ

03:06 PM Feb 02, 2018 | Team Udayavani |

ನಾದನೃತ್ಯ ಸಂಸ್ಥೆಯ ನಿರ್ದೇಶಕಿ ನೃತ್ಯ ವಿದುಷಿ ಭ್ರಮರಿ ಶಿವಪ್ರಕಾಶ್‌ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಭಕ್ತಿ ಮಾರ್ಗ ಸಂಗೀತ ರಚನೆಕಾರರಾದ ಶ್ರೀ ಪುರಂದರದಾಸರು ಹಾಗೂ ವಾಗ್ಗೇಯಕಾರರಾದ ತ್ಯಾಗರಾಜರ ಭಕ್ತಿ ಪರಂಪರೆಯ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಕಂಡುಬರುವ ವೈಚಾರಿಕ ಸಾಮ್ಯವನ್ನು ಪರಿಚಯಿಸುವ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. 

Advertisement

ಈ ಕಾರ್ಯಕ್ರಮದಲ್ಲಿ ಯುವ ಸಂಗೀತ ಕಲಾವಿದ ವಿದ್ವಾನ್‌ ಕೃಷ್ಣ ಪವನ್‌ ಕುಮಾರ್‌ ಸಂಗೀತದಲ್ಲಿ, ಭ್ರಮರಿ ಶಿವಪ್ರಕಾಶ್‌ ನೃತ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಲಾ ಪ್ರದರ್ಶನ ನೀಡಿದರು.

ಪ್ರಾರಂಭದಲ್ಲಿ ಕೃಷ್ಣ ಪವನ್‌ ಕುಮಾರ್‌ ಪುರಂದರದಾಸರ ಗಜವದನಾ ಬೇಡುವೆ ದೇವರನಾಮ ಮತ್ತು ತ್ಯಾಗರಾಜರ ಅಭೀಷ್ಟವರದ ಕೃತಿಯನ್ನು ಹಾಡಿ ಇವೆರಡರ ಸಾಹಿತ್ಯದಲ್ಲಿರುವ ಭಕ್ತಿ ಮಾರ್ಗದ ಹೋಲಿಕೆಯನ್ನು ಸಾದರ ಪಡಿಸಿದರು. ಬಳಿಕ ರಾಮ ಸಂಕೀರ್ತನ ಮಹತ್ವ ತಿಳಿಸುವ ಪುರಂದರದಾಸರ ರಚನೆಗಳಿರುವ ರಾಮ ಮಂತ್ರವ ಜಪಿಸೊ ಹಾಗೂ ನಾರಾಯಣ ನಿನ್ನ ನಾಮದ ಸ್ಮರಣೆ ದೇವರ ನಾಮಗಳನ್ನು ಮತ್ತು ತ್ಯಾಗರಾಜರ ಅಠಾಣ ರಾಗದ ರಾಮ ನಾಮಮು ಜನ್ಮ ರಕ್ಷಕ ಕೀರ್ತನೆಯನ್ನು ಹಾಡಿ ಇವುಗಳ ಹೋಲಿಕೆಯ ವಿವರಣೆ ನೀಡಿದರು. ನಂತರ ವೈಚಾರಿಕವಾಗಿಯೂ ಸಾಹಿತ್ಯಿಕವಾಗಿಯೂ ಸಾಮ್ಯವಿರುವ ಪುರಂದರದಾಸರ ಓಡಿಬಾರಯ್ಯ ವೈಕುಂಠ ಪತಿ ಎಂಬ ಕೀರ್ತನೆ ಹಾಡಿದ ಬಳಿಕ ತ್ಯಾಗರಾಜರ ಮೋಹನ ರಾಗದ ನನ್ನು ಪಾಲಿಂಪ ಕೃತಿ ಹಾಡಿ ತೋರಿಸಿದರು. ಕೊನೆಗೆ ಪುರಂದರದಾಸರ ಕ್ಷೇತ್ರ ಮಹಾತ್ಮೆಯ ರಚನೆಯಾದ ವೆಂಕಟಾಚಲ ನಿಲಯಂ ಕೀರ್ತನೆ ಹಾಗೂ ತ್ಯಾಗರಾಜರ ಕ್ಷೇತ್ರ ಮಹಾತ್ಮೆಯ ಕೃತಿಯನ್ನು ಹಾಡುತ್ತ ಇವುಗಳ ಹೋಲಿಕೆಗಳ ಸಮರ್ಥನೆ ನೀಡಿದರು. ಗುರು ವಿದ್ವಾನ್‌ ರವಿಕುಮಾರ್‌ ಮೃದಂಗ ಮತ್ತು ವಿದ್ವಾನ್‌ ಗಣೇಶ್‌ ಕಾರ್ಲೆ ಪಿಟೀಲಿನಲ್ಲಿ ಸಾಥ್‌ ನೀಡಿದರು. 

ಉತ್ತರಾರ್ಧದಲ್ಲಿ ಭ್ರಮರಿ ಶಿವಪ್ರಕಾಶ್‌ ಭರತನಾಟ್ಯ ಪ್ರದರ್ಶನಕ್ಕೆ ಪುರಂದರದಾಸರ ಮತ್ತು ತ್ಯಾಗರಾಜರ ಭಕ್ತಿ ಪರಂಪರೆಯ ವೈಚಾರಿಕ ಸಾಮ್ಯದ ಕೀರ್ತನೆಗಳನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿತ್ತು.ಮೊದಲ ನೃತ್ಯ ಮೇಳ ಪ್ರಾಪ್ತಿಯಲ್ಲಿ ಖಂಡ ಏಕ ತಾಳಕ್ಕೆ ಹೊಂದಿಸಿ ಪುರಂದರದಾಸರ ಉಗಾಭೋಗ ಮತ್ತು ತ್ಯಾಗರಾಜರು ತಮ್ಮ ಪ್ರಹ್ಲಾದ ಭಕ್ತಿ ವಿಜಯ ಎಂಬ ಗೇಯ ನಾಟಕದಲ್ಲಿ ಪುರಂದರದಾಸರ ಮಹಿಮೆಯನ್ನು ಧ್ಯಾನಿಸಿ ಅಭಿನಯಿಸಿದರು. 

ಮುಂದಿನ ನೃತ್ಯ ಬಂಧದಲ್ಲಿ ಶ್ರೀ ರಾಮ ಸ್ವರೂಪಿ ವಿಷ್ಣುನಾಮ ಮಹಾತ್ಮೆಯನ್ನು ವಿವರಿಸುವ ವರಾಳಿ ರಾಗದ ಈ ಮೇನು ಕಲಿಗಿನಂದುಕು ಸೀತಾರಾಮ ನಾಮಮೆ ಬಲ್ಕವಲೆನು ಕೀರ್ತನೆಯ ಸಾರವನ್ನು ವಿದ್ವಾಂಸರು ಪುರಂದರದಾಸರ ರಚನೆಗಳಾದ ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ, ಭಯ ನಿವಾರಣವು ಶ್ರೀ ಹರಿಯ ನಾಮ, ನಾರಾಯಣ ನಿನ್ನ ನಾಮವ ನೆನೆದರೆ ಇವಕ್ಕೆ ಹೋಲಿಸಿರುವರು. ಇಲ್ಲಿ ವೈಚಾರಿಕ ಸಾಮ್ಯವಿರುವ ಕೀರ್ತನೆಯಲ್ಲಿ ಮುನಿ ಶಾಪದಿಂದ ಮೊಸಳೆಯಾಗಿದ್ದ ಅಪ್ಸರೆಯು ಹನುಮಂತನಿಂದ ಶ್ರೀ ರಾಮ ನಾಮದ ಸ್ತುತಿ ಕೇಳಿ ಶಾಪ ವಿಮೋಚನೆಗೊಳಗೊಂಡ ಈ ಭಾಗವನ್ನು ಸಂಚಾರಿ ಭಾವದಲ್ಲಿ ಅಭಿನಯದೊಡನೆ ಸಾದರಪಡಿಸಿದರು.

Advertisement

 ಪುರಂದರದಾಸರ ಕೀರ್ತನೆಗಳಲ್ಲಿ ಕೃಷ್ಣ ಗೋಪಿಕೆಯರ ಪ್ರೇಮ ಸಂಕೇತವಿರುವ ವಿಷಯಗಳಿಗೆ ಪದವರ್ಣದಲ್ಲಿರಬೇಕಾದ ಆತ್ಮ-ಪರಮಾತ್ಮನ ಸಮ್ಮಿಲನದ ನಾಯಕಿ- ನಾಯಕ ಭಾವಗಳನ್ನು ಅಭಿನಯದ ಮೂಲಕ ಪ್ರಸ್ತುತಪಡಿಸಿರುವುದು ಸ್ತುತ್ಯವೆನಿಸಿದೆ. ಈ ಬಂಧಕ್ಕೆ ವಿದುಷಿ ಶೀಲಾದಿವಾಕರವರ ಸಂಗೀತ ಸಂಯೋಜನೆಯೂ ಸೈ ಎನಿಸಿಕೊಂಡಿದೆ. ಬಳಿಕ ತ್ಯಾಗರಾಜರ ಯದುಕುಲಕಾಂಭೋಜಿ ರಾಗ ಆದಿತಾಳದ ದಯಸೇಯವಯ್ಯ ಇದರ ಅಭಿನಯದಲ್ಲಿ ಸೀತೆಯು ನಾಯಕಿಯಾಗಿ ಅನುಭವಿಸಿದ ತುಮುಲಗಳ ಸುಖದ ಕೊಂಚಭಾಗವನ್ನಾದರು ನನಗೆ ಕರುಣಿಸು ಎಂಬ ದೈನ್ಯ ಭಾವವನ್ನು ಅಭಿನಯದ ಮೂಲಕ ವ್ಯಕ್ತಪಡಿಸುವಲ್ಲಿ ಭ್ರಮರಿಯವರು ನೈಜತೆಯನ್ನು ಕಾಪಾಡಿಕೊಂಡರು. 

ಬಳಿಕ ತ್ಯಾಗರಾಜರ ಪ್ರಸಿದ್ಧ ಪಂಚರತ್ನ ಕೀರ್ತನೆಗಳÇÉೊಂದಾದ ನಾಟಿರಾಗ – ಆದಿತಾಳದ ಜಗದಾನಂದಕಾರಕ ಈ ಕೀರ್ತನೆಯಲ್ಲಿ ರಾಮನ ವೃತ್ತಾಂತ, ಅಹಲ್ಯಾ ಶಾಪವಿಮೋಚನೆ ರಾವಣ ಸಂಹಾರ ಕಥಾಭಾಗಗಳನ್ನು ಸಂಚಾರಿ ಭಾವಗಳಲ್ಲಿ ಬಳಸಿಕೊಂಡು ಪ್ರದರ್ಶನವಿತ್ತರು.

ಕೊನೆಗೆ ವದನದ್ಯುತಿಜಿತ ಸೋಮ ತ್ಯಾಗರಾಜಸನ್ನುತ ಪಾಹಿ ಎಂಬ ತ್ಯಾಗರಾಜರ ಶೋಭಾನೆಗೆ ಸಂವಾದಿಯಾಗಿ ಪುರಂದರದಾಸರು ರಚಿಸಿದ ಭೂದೇವಿಯರಸಗೆ ಶೋಭಾನ ಶೋಭಾನವೆ ಎಂದು ಶೋಭಾನೆ ಹಾಡಿಗೆ ಮಂಗಳ ನೃತ್ಯ ಮಾಡಿ ಸಮಾಪನಗೊಳಿಸಿದರು. 

ಹಿಮ್ಮೇಳದಲ್ಲಿ ಶೀಲಾ ದಿವಾಕರ್‌ ಹಾಡುಗಾರಿಕೆ, ವಿದ್ವಾನ್‌ ಹರಿಕೃಷ್ಣನ್‌ ನಟ್ಟುವಾಂಗ, ವಿದ್ವಾನ್‌ ರವಿಕುಮಾರ್‌‌ ಮೃದಂಗ, ವಿದ್ವಾನ್‌ ಮುರಳೀಧರ್‌ ಕೊಳಲಗಾನದಲ್ಲಿ ಸಾಥ್‌ ನೀಡಿದರು.ಡಾ| ವಸುಂಧರಾ ದೊರೆಸ್ವಾಮಿ ನೃತ್ಯ ಸಂಯೋಜಿಸಿದರು. 

ಉಳ್ಳಾಲ ಮೋಹನ ಕುಮಾರ

Advertisement

Udayavani is now on Telegram. Click here to join our channel and stay updated with the latest news.

Next