Advertisement

ಪುಂಜಾಲಕಟ್ಟೆ -ಚಾರ್ಮಾಡಿ ದ್ವಿಪಥ ರಸ್ತೆ; 2ನೇ ಹಂತದ ಅಭಿವೃದ್ಧಿ ಕಾಮಗಾರಿ ಚುರುಕು

12:08 PM Apr 24, 2023 | Team Udayavani |

ಬೆಳ್ತಂಗಡಿ: ಬಹು ನಿರೀಕ್ಷೆಯ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ 73ರ ದ್ವಿಪಥ ರಸ್ತೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಚುರುಕು ಪಡೆದಿದೆ.

Advertisement

ಸುಮಾರು 718 ಕೋಟಿ ರೂ. ಅನುದಾನದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ 40 ಕಿ.ಮೀ. ನಿಂದ 75 ಕಿ.ಮೀ.ವರೆಗಿನ 33.1 ಕಿಮೀ ವ್ಯಾಪ್ತಿಯ ದ್ವಿಪಥ ರಸ್ತೆ ರಚನೆಗೆ ಪೂರಕವಾಗಿ ಪ್ರಾಥಮಿಕ ಹಂತದ ಭೂ ಸಮತಟ್ಟು ಕೆಲಸಗಳು ಆರಂಭಗೊಂಡಿವೆ. ರಾಷ್ಟ್ರೀಯ ಹೆದ್ದಾರಿಯಿಂದ ಈಗಾಗಲೆ‌ ರಚನೆಗೊಂಡ ನೀಲ ನಕಾಶೆಯನ್ನು ಗುತ್ತಿಗೆದಾರರು ಮರು ಪರಿಶೀಲನೆ ನಡೆಸುವ ಕೆಲಸವೂ ಪ್ರಗತಿಯಲ್ಲಿದೆ. ಅದರಂತೆ ರಸ್ತೆ ವಿಸ್ತರಣೆ ವೇಳೆ ತೆರವುಗೊಳ್ಳಬೇಕಾದ ಮರ,
ಕಟ್ಟಡಗಳ ಗುರುತಿಸುವಿಕೆ ಅಗತ್ಯ ಸ್ಥಳಗಳಲ್ಲಿ ಸೇತುವೆ ನಿರ್ಮಾಣದ ರೂಪುರೇಖೆ ಇತ್ಯಾದಿ ಸಿದ್ಧಗೊಂಡಿದೆ.

ಅಧಿಸೂಚನೆಗೆ ಬಾಕಿ: ಈಗಾಗಲೆ ರಸ್ತೆ ವ್ಯಾಪ್ತಿಯನ್ನು ಗುರುತಿಸಿ ಸರಕಾರಿ ಜಾಗದ ಮೂಲಕ ಹಾದು ಹೋಗುವ ರಸ್ತೆಯ ಸ್ಥಳಗಳ
ಗಿಡಗಂಟಿ ತೆರವು ಮಾಡಿ ಮಾರ್ಕಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದಂತೆ ಈಗಾಗಲೇ ಗುರುತಿಸಿರುವ ಅಂದಾಜು
25 ಹೆಕ್ಟೇರ್‌ ಖಾಸಗಿ ಸ್ಥಳದ ಸ್ವಾಧೀನ ನಡೆಯಬೇಕಿದ್ದು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕಿದೆ.

ಮುಂಡಾಜೆ ಸೀಟು ಸಮೀಪ ವಿಸ್ತರಣೆ; ನಾಗಪುರದ ಗುತ್ತಿಗೆದಾರರಾದ ಡಿ.ಬಿ. ಜೈನ್‌ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಈ ಹಿಂದೆ ಮಡಂತ್ಯಾರು ಸಮೀಪದಿಂದ ಹೆದ್ದಾರಿ ಪಕ್ಕ ಪೊದೆಗಳ ತೆರವು ಕಾಮಗಾರಿ ನಡೆದಿತ್ತು. ಇದೀಗ ಸರಕಾರಿ ಸ್ಥಳವಿರುವಲ್ಲಿ ರಸ್ತೆ ವಿಸ್ತರಣೆಗೆ ಗುತ್ತಿಗೆದಾರರಿಗೆ ಅನುಮೋದನೆ ದೊರೆತಿದ್ದು ಪ್ರಸಕ್ತ ಮುಂಡಾಜೆ ಗ್ರಾಮದ ಸೀಟು ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲಾಗಿದೆ. ಮುಖ್ಯ ರಸ್ತೆಯ ಸೆಂಟ್ರಲ್‌ ಮಾರ್ಕ್‌ ನಿಂದ ರಸ್ತೆಯ ಒಂದು ಬದಿಯನ್ನು ಸುಮಾರು 7 ಮೀ. ಗಿಂತ ಅಧಿಕ ಪ್ರದೇಶದಲ್ಲಿ ಅಗಲಗೊಳಿಸಲಾಗುತ್ತಿದೆ. ಈ ರಸ್ತೆಯ ಒಂದು ಬದಿಯ ಮರಗಳಿಲ್ಲದ ಪ್ರದೇಶದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ.

ಸರಕಾರಿ ಸ್ಥಳಗಳಲ್ಲಿ ಭೂ ಸ್ವಾಧೀನ ಸಮಸ್ಯೆ ಇಲ್ಲದಿರುವುದರಿಂದ ಪ್ರಾಥಮಿಕ ಹಂತದ ವಿಸ್ತರಣೆ ಕಾಮಗಾರಿ ಆರಂಭಿಸಲಾಗಿದೆ. ಖಾಸಗಿ ಭೂ ಸ್ವಾಧೀನವು ಮೇ ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ.
-ಮಹಾಬಲ ನಾಯ್ಕ , ಎಇಇ, ರಾ. ಹೆದ್ದಾರಿ ವಿಭಾಗ ಮಂಗಳೂರು

Advertisement

ಮರಗಳ ತೆರವಿಗೆ ಅನುಮತಿ
ಹೆದ್ದಾರಿ ಇಬ್ಬದಿಯಲ್ಲಿ ಇರುವ ಒಟ್ಟು 5,494 ಮರಗಳನ್ನು ಗುರುತಿಸಲಾಗಿದೆ. ಮರಗಳ ಮೌಲ್ಯಮಾಪನಕ್ಕೆ ಬಾಕಿ ಇದ್ದು, ಬಳಿಕ
ತೆರವು ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ಮೀಟರ್‌ ವಿಸ್ತರಣೆ
ಗುರುವಾಯನಕೆರೆಯಿಂದ ಉಜಿರೆವರೆಗೆ ಸರ್ವಿಸ್‌ ರಸ್ತೆ ಒಳಗೊಂಡಂತೆ 30 ಮೀ. ರಸ್ತೆ ವಿಸ್ತರಣೆಯಾಗಲಿದೆ. ಮಧ್ಯದಿಂದ ತಲಾ 15 ಮೀ. ರಸ್ತೆ ವಿಸ್ತರಣೆಯಾಗಲಿದ್ದು, ಸರ್ವಿಸ್‌ ರಸ್ತೆ ಸಹಿತ ಮಾರ್ಗಕ್ಕೆ ಕೇಂದ್ರ ಅನುಮೋದನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next